- 21ರಂದು ನರಗುಂದ ರೈತ ಹುತಾತ್ಮರ ದಿನ, ನವೀಕೃತ ಸ್ಮಾರಕ ಉದ್ಘಾಟನೆ: ಹೊನ್ನೂರು ಮುನಿಯಪ್ಪ ಮಾಹಿತಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಧಾರವಾಡ ಜಿಲ್ಲೆ ನವಲಗುಂದ ತಾ. ಅಳಗವಾಡಿ ಗ್ರಾಮದ ರೈತ ಸ್ಮಾರಕದ ಬಳಿ 46ನೇ ವರ್ಷದ ನರಗುಂದ- ನವಲಗುಂದ ರೈತ ಹುತಾತ್ಮರ ದಿನಾಚರಣೆ, ರೈತ ಹುತಾತ್ಮ ಬಸಪ್ಪ ಶಿವಪ್ಪ ಲಕ್ಕುಂಡಿಯವರ ನವೀಕರಿಸಿದ ರೈತ ಸ್ಮಾರಕ ಉದ್ಘಾಟನಾ ಸಮಾರಂಭವನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಜು.21ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ 153 ರೈತರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟದಲ್ಲಿ ಹುತಾತ್ಮರಾಗಿದ್ದರೂ ಇಂದಿಗೂ ರೈತರಿಗೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳು ಸಿಗದೇ ಮರೀಚಿಕೆಯಾಗಿವೆ. ಈಗಿನ ಸರ್ಕಾರಗಳು ಮತ್ತೆ ರೈತರ ಭೂಮಿ ಕಸಿಯುವ ಹುನ್ನಾರ ನಡೆಸಿದ್ದು, ರಾಜಾದ್ಯಂತ ರೈತರ ಮೇಲೆ ಇಂತಹ ಹಲವಾರು ದೌರ್ಜನ್ಯಗಳನ್ನು ನಡೆಸಲಾಗುತ್ತಿದೆ ಎಂದರು.
ಕಳಸಾ ಬಂಡೂರಿ ಮಹಾದಾಯಿ ಯೋಜನೆ ತಕ್ಷಣವೇ ಸರ್ಕಾರ ಜಾರಿಗೊಳಿಸಬೇಕು. 2025-26ನೇ ಸಾಲಿನಲ್ಲಿ ಬಾಕಿ ಇರುವ ಬೆಳೆವಿಮೆ ಪರಿಹಾರದ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಕಚೇರಿ ತೆರೆದು ತಕರಾರನ್ನು ಇತ್ಯರ್ಥ ಮಾಡಬೇಕು. ಕಬ್ಬು ಬೆಳೆಗಾರರ ಬಾಕಿ ಹಣವನ್ನು ತಕ್ಷಣ ಪಾವತಿಸಬೇಕು. ಬೆಳೆ ಹಾನಿ ಹಾಗೂ ಜೀವ ಹಾನಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಧಿಯನ್ನು 10 ಪಟ್ಟು ಹೆಚ್ಚಿಸಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪೂರ್ವ ಕರ್ನಾಟಕದಲ್ಲಿ ಬರಗಾಲ ಘೋಷಿಸಿ ಸೂಕ್ತ ಪರಿಹಾರ ಒದಗಿಸಬೇಕು. ಡಾ.ಸ್ವಾಮಿನಾಥನ್ ವರದಿ **(C2+50%)** ಅನ್ವಯ ಕನಿಷ್ಠ ಬೆಂಬಲ ಬೆಲೆಯ ಕಾಯಿದೆ ಶಾಸನಬದ್ಧಗೊಳಿಸಬೇಕು. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524 ಅಡಿಗಳಿಗೆ ಹೆಚ್ಚಿಸಿದ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆಯನ್ನು ಹೊರಡಿಸುವುದು. ನಾವಲಿ ಜಲಾಶಯದ ಕಾಮಗಾರಿ ಆರಂಭಿಸಬೇಕು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ತಕ್ಷಣ ವಾಪಸ್ ಪಡೆಯಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಖಾಸಗೀಕರಣ ಮಾಡಬಾರದು. ಭಾರತ ದೇಶದ ರೈತರ, ಕಾರ್ಮಿಕರ ಜನಸಾಮಾನ್ಯರ ಹಿತಾಸಕ್ತಿ ಬಲಿ ಕೊಟ್ಟು ಅಮೆರಿಕಾ ಮತ್ತು ಇತರೆ ದೇಶಗಳ ಜೊತೆ ಅಂತರ ರಾಷ್ಟ್ರೀಯ ಮುಕ್ತ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಬಾರದು. ವಿಜಯ ನಗರದ ತುಂಗಭದ್ರಾ ಡ್ಯಾಂ ತುಂಬಾ ಹೂಳು ತುಂಬಿದ್ದು, ಅದಕ್ಕೆ ಸಮನಾಂತರವಾಗಿ ಕಟ್ಟುತ್ತಿರುವ ನಾವಲಿ ಜಲಾಶಯದ ಕಾಮಗಾರಿಯನ್ನು ತುರ್ತು ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.ಸಂಘದ ಜಿಲ್ಲಾಧ್ಯಕ್ಷ ಪಿ.ಪಿ. ಮರುಳಸಿದ್ದಯ್ಯ, ಸಂತೋಷ ಕಬ್ಬೂರು, ಕೆ.ಟಿ.ಗಣೇಶ, ಎಂ.ಎನ್.ಮಂಜುನಾಥ ದೇವರಹಳ್ಳಿ ಇತರರು ಇದ್ದರು.
- - -(ಬಾಕ್ಸ್) * ರೈತರ ಬೇಡಿಕೆಗಳೇನು?
- ರಾಜ್ಯದ ಸಮಗ್ರ ನೀರಾವರಿ ಯೋಜನೆ ಜಾರಿ ಮಾಡಬೇಕು.- ರಸಗೊಬ್ಬರ ಸಮರ್ಪಕವಾಗಿ ವಿತರಿಸಬೇಕು, ಕಲಬೆರಕೆ ಗೊಬ್ಬರದ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.
- ರೈತರಿಗೆ ಮಾನದಂಡದ ಪ್ರಕಾರ ಪರಿಹಾರ ನೀಡದ ಸೋಲಾರ್ ಮತ್ತು ವಿಂಡ್ ಪವರ್ ಕಂಪನಿಗಳ ವಿರುದ್ಧ ಕ್ರಮವಾಗಬೇಕು- ಬಗರ್‌ಹುಕುಂ ರೈತರನ್ನು ಒಕ್ಕಲೆಬ್ಬಿಸದೇ, ಸಾಗುವಾಳಿದಾರರಿಗೆ ಹಕ್ಕುಪತ್ರ ನೀಡಬೇಕು.
- ಅರಣ್ಯ ಭೂಮಿಯಂದು ರೈತರಿಗೆ ನೋಟಿಸ್ ಕೊಟ್ಟು ದಾಖಲೆ ರದ್ದು ಕೆಲಸ ಸರ್ಕಾರ ಮಾಡಬಾರದು.- - -
-17ಕೆಡಿವಿಜಿ1: ದಾವಣಗೆರೆಯಲ್ಲಿ ಶುಕ್ರವಾರ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.