- ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ
ಒಂದು ತಿಂಗಳ ಅವಧಿಯಲ್ಲಿ 1,230 ಪ್ರಕರಣ ಇತ್ಯರ್ಥಪಡಿಸಿರುವುದಾಗಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರು ಬಂದ ಕೂಡಲೇ ಅಲ್ಲಿಯೇ ಪರಿಹರಿಸಲಾಗುತ್ತಿದೆ. ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ. ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಕೆಯಾಗಿ ಬಾಕಿ ಉಳಿದಿದ್ದ ಸುಮಾರು 6 ಸಾವಿರ ಪ್ರಕರಣಗಳಲ್ಲಿ 1,230 ಪ್ರಕರಣವನ್ನು ಒಂದು ತಿಂಗಳ ಅವಧಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದರು.ಎನ್ ಕೌಂಟರ್ ಮಾಡಿದ ಪೊಲೀಸ್ ವಿರುದ್ಧ 302 ಕೇಸ್ ದಾಖಲಿಸಲಾಗಿದೆ. ಲಾಕಪ್ ಡೆತ್ ಗೆ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ದಾಖಲಾಗಿದ್ದ 300 ಪ್ರಕರಣಗಳ ಪೈಕಿ 200 ದೂರು ವಿಲೇವಾರಿ ಆಗಿದೆ. ಎನ್ ಕೌಂಟರ್, ಲಾಕಪ್ ಡೆತ್ ಮುಂತಾದ ಗಂಭೀರವಾದ 36 ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ಅವರು ಹೇಳಿದರು.
ಮಾನವ ಹಕ್ಕುಗಳ ಕುರಿತು ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಮೂರು ಸ್ವಯಂ ಸೇವಾ ಸಂಸ್ಥೆಗಳು ತಮನ್ನು ಸಂಪರ್ಕಿಸಿರುವುದಾಗಿ ಅವರು ಹೇಳಿದರು.
ತುಳಿತಕ್ಕೆ ಒಳಪಟ್ಟ ವ್ಯಕ್ತಿಗೆ ತನ್ನ ಹಕ್ಕು ಉಲ್ಲಂಘನೆ ಆಗಿರುವ ಬಗ್ಗೆ ಅರಿವೇ ಇರುವುದಿಲ್ಲ. ಸರ್ಕಾರದೊಡನೆ ಸಂಬಂಧ ಇಲ್ಲ: ಆಯೋಗ ಮತ್ತು ಸರ್ಕಾರದ ನಡುವೆ ಸಂಬಂಧ ಇಲ್ಲ. ನಮಗೇ ಇರುವ ಪರಿಮಿತಿಯಲ್ಲಿ ಕೆಲಸ ಮಾಡಬೇಕು. ಅವಕಾಶ ಸಿಕ್ಕಾಗ ಏನು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ. ಅಧಿಕಾರ ವಹಿಸಿಕೊಂಡ ಒಂದೂವರೆ ತಿಂಗಳಲ್ಲಿ ತೃಪ್ತಿಯಾಗುವ ಕೆಲಸ ಮಾಡಿದ್ದೇವೆ ಎಂದು ಅವರು ನುಡಿದರು.
ವಿರಾಜಪೇಟೆ ತಾಲೂಕಿನ ಬಡುಕಟ್ಟು ವ್ಯಕ್ತಿಯೊಬ್ಬರಿಂದ ದೂರು ಬಂದಿತು. ಕೊಡಗು ಜಿಲ್ಲಾಧಿಕಾರಿ ಸಂಪರ್ಕಿಸಿದ ಅರ್ಧಗಂಟೆಯಲ್ಲಿ ನಿವೇಶನ ಕೊಡುವುದಾಗಿ ಒಪ್ಪಿಕೊಂಡರು. ತಹಸೀಲ್ದಾರ್ ವ್ಯಾಟ್ಸಾಪ್ ಮೂಲಕ 41 ಬುಡಕಟ್ಟು ಕುಟುಂಬಗಳಿಗೆ ನಿವೇಶನ ಹಂಚಿಕೆಯ ಪತ್ರ ಕಳುಹಿಸಿದರು. ಜ. 31 ರಂದು ವಿರಾಜಪೇಟೆ ತಾಲೂಕಿನ ಹಾಡಿ ಗ್ರಾಮಗಳಿಗೆ ಭೇಟಿ ನೀಡಿ ದೂರು ಆಲಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಯೋಗದ ಸದಸ್ಯರಾದ ಶ್ಯಾಮ್ ಭಟ್, ಎಸ್.ಕೆ. ವಂಟಿಗೋಡಿ ಇದ್ದರು.