ಸುಬ್ರಮಣಿ, ಸಿದ್ದಾಪುರ.
ಕನ್ನಡಪ್ರಭ ವಾರ್ತೆ ಸಿದ್ದಾಪುರಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ್ ಮಿಷನ್ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದ್ದರೂ, ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡೇಶ್ವರಿ ನಗರದಲ್ಲಿ ಈ ಯೋಜನೆಯ ಕಾಮಗಾರಿ ಅರ್ಧಕ್ಕೆ ನಿಂತು ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
ಮನೆ ಮನೆಗೆ ನೀರು ಒದಗಿಸುವ ಈ ಯೋಜನೆಯ ಕಾಮಗಾರಿಯ ಭಾಗವಾಗಿ ಪೈಪ್ ಲೈನ್ ಅಳವಡಿಸಲು ಸುಸಜ್ಜಿತ ಕಾಂಕ್ರೀಟ್ ರಸ್ತೆಗಳನ್ನು ಯಂತ್ರದ ಮೂಲಕ ಕಟ್ ಮಾಡಿ ತಿಂಗಳುಗಳಾದರೂ ಕಾಮಗಾರಿ ಮಾತ್ರ ಮುಂದುವರಿಯದೆ ಹಾಗೇ ಬಿಟ್ಟಿರುವುದರಿಂದ ರಸ್ತೆ ಹಾಳಾಗಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಮೊದಲೆ ಕಿರಿದಾದ ರಸ್ತೆಯ ಎರಡು ಬದಿಗಳನ್ನು ಕಟ್ ಮಾಡಿರುವುದರಿಂದ ಬೈಕ್ ಸವಾರರು ಪರದಾಡುವಂತಾಗಿದ್ದು ಎದುರಿನಿಂದ ಗಾಡಿ ಬಂದರೆ ಬೈಕ್ ಕೂಡ ಚಲಿಸಲು ಸಾಧ್ಯವಾಗದೆ ಅಪಘಾತದ ಭೀತಿಯಲ್ಲಿ ಸಂಚರಿಸುವಂತಾಗಿದೆ.ಸ್ಲಾಬ್ ಇಲ್ಲದ ಚರಂಡಿಗಳು
ರಸ್ತೆ ಬದಿಯ ಚರಂಡಿಗೆ ಸ್ಲಾಬ್ ಹಾಕದೆ ಬಿಟ್ಟುಬಿಟ್ಟ ಪರಿಣಾಮವಾಗಿ ರಸ್ತೆ ಕಟ್ ಮಾಡಿದ ತುಂಡು ಕಲ್ಲುಗಳು ಚರಂಡಿಗೆ ಬಿದ್ದು ನೀರು ಸರಾಗವಾಗಿ ಹರಿಯದೆ ತ್ಯಾಜ್ಯ ನೀರು ನಿಂತು ದುರ್ವಾಸನೆ ಹರಡುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಹೆಚ್ಚಾಗಿದೆ ಹಾಗೂ ಚರಂಡಿಗೆ ವಾಹನಗಳು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತರ ಪ್ರದೇಶಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ, ಚೌಡೇಶ್ವರಿ ನಗರದಲ್ಲಿ ಮಾತ್ರ ಮೀನಮೇಷ ಎಣಿಕೆ ನಡೆಯುತ್ತಿರುವುದರ ಬಗ್ಗೆ ಜನತೆ ಅಸಮಾಧಾನಗೊಂಡಿದ್ದಾರೆ. ಕಾಮಗಾರಿ ತಕ್ಷಣ ಮುಗಿಸಿ, ರಸ್ತೆಯನ್ನು ಪುನರ್ ನಿರ್ಮಿಸಿ, ಚರಂಡಿಗೆ ಸ್ಲಾಬ್ ಹಾಕುವಂತೆ ಸಂಬಂಧಪಟ್ಟ ಇಲಾಖೆಗಳನ್ನು ನಿವಾಸಿಗಳು ಆಗ್ರಹಿಸುತ್ತಿದ್ದಾರೆ.ರಸ್ತೆ ಕಟ್ ಮಾಡಿ ಹಾಗೆಯೇ ಬಿಟ್ಟುಬಿಟ್ಟಿದ್ದಾರೆ. ವಾಹನ ಓಡಿಸಲು ತೊಂದರೆಯಾಗಿದೆ. ಚರಂಡಿಯಲ್ಲಿ ನೀರು ನಿಂತು ಹುಳು-ಕೀಟಗಳು ಹುಟ್ಟುತ್ತಿದ್ದು ದುರ್ವಾಸನೆ ಬೀರುತ್ತಿದೆ. ಇದರಿಂದ ಮಕ್ಕಳಿಗೂ ವೃದ್ಧರಿಗೂ ಅಪಾಯವಾಗುತ್ತಿದೆ. ಆಡಳಿತ ತಕ್ಷಣ ಗಮನ ಹರಿಸಿ ಕಾಮಗಾರಿ ಪೂರ್ಣಗೊಳಿಸಬೇಕು.
। ರದೀಶ್ . ಎಂ ಆರ್. ಚೌಡೇಶ್ವರಿ ನಗರ ನಿವಾಸಿ. ಕಾರ್ಮಾಡು ಅಮ್ಮತ್ತಿಜಲಜೀವನ್ ಮಿಷನ್ ಜನಪ್ರಿಯ ಯೋಜನೆ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದೆ. ನನ್ನ ವಾರ್ಡಿನಲ್ಲಿ ಪೈಪ್ ಲೈನ್ ಅಳವಡಿಸಲು 5 ತಿಂಗಳ ಹಿಂದೆ ಉತ್ತಮ ಕಾಂಕ್ರೀಟ್ ರಸ್ತೆಗಳನ್ನು ಅಗೆಯಲಾಗಿದ್ದು ಇದರಿಂದ ಚರಂಡಿಗಳು ಮುಚ್ಚಿ ಹೋಗಿದೆ. ಮಳೆ ನೀರು ಹರಿಯುತ್ತಿಲ್ಲ ಅಲ್ಲದೇ ಸಾರ್ವಜನಿಕರಿಗೆ ಮತ್ತು ವಾಹನ ಓಡಾಟ ಕಷ್ಟ ಸಾಧ್ಯವಾಗಿದ್ದು , ನನ್ನ ವಾರ್ಡಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಎಇಇ ಅವರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇನೆ, ಜೊತೆಗೆ ಇತ್ತೀಚೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಇಓ ರವರ ಗಮನಕ್ಕೂ ತಂದಿದ್ದೇವೆ. ಈ ತಿಂಗಳ ಒಳಗೆ ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿ ಪೂರ್ಣಗೊಳಿಸದೇ ಇದ್ದಲ್ಲಿ ವಾರ್ಡಿನ ಜನರ ಸಮ್ಮುಖದಲ್ಲಿ ಪ್ರತಿಭಟನೆಗೆ ಚಿಂತಿಸಿದ್ದೇವೆ.
। ಅಭಿಜಿತ್. ಹೆಚ್ ಎ. ವಾಡ್೯ ಸದಸ್ಯರು, ಅಮ್ಮತ್ತಿ ಕಾರ್ಮಾಡು ಗ್ರಾ. ಪಂಚಾಯತಿ.ಮಳೆಗಾಲವಾದ ಕಾರಣ ಕಾಮಗಾರಿ ವಿಳಂಬವಾಗಿದ್ದು ನಾವೆಲ್ಲಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಗುತ್ತಿಗೆದಾರರಿಗೆ ಅದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಈಗ ಮಳೆ ಸ್ವಲ್ಪ ಕಡಿಮೆಯಾಗಿದ್ದು ಬೇಗ ಕಾಮಗಾರಿ ಮುಗಿಸಲಾಗುವುದು.
। ಭಾಸ್ಕರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ , ಮಡಿಕೇರಿ