ಜಲಜೀವನ್‌ ಮಿಷನ್‌ ಯೋಜನೆ ಕಾಮಗಾರಿ ಪರಿಶೀಲನೆ

KannadaprabhaNewsNetwork |  
Published : Jul 28, 2025, 01:28 AM ISTUpdated : Jul 28, 2025, 01:31 AM IST
ವಿಜಯಪುರದ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಸಿಇಓ ರಿಷಿ ಆನಂದ ಭೇಟಿ ನೀಡಿ ಜೆಜೆಎಮ್ ಕಾಮಗಾರಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಿಂದಗಿ, ಆಲಮೇಲ ಮತ್ತು ಇಂಡಿ ತಾಲೂಕುಗಳಿಗೆ ಭೇಟಿ ನೀಡಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಜಲ ಜೀವನ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡ ಪ್ರತಿ ಮನೆಮನೆಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕದ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿಂದಗಿ, ಆಲಮೇಲ ಮತ್ತು ಇಂಡಿ ತಾಲೂಕುಗಳಿಗೆ ಭೇಟಿ ನೀಡಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಜಲ ಜೀವನ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡ ಪ್ರತಿ ಮನೆಮನೆಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕದ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಸಿಂದಗಿ ತಾಲೂಕಿನ ರಾಂಪುರ ಪಿ.ಎ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ ಪಿ.ಎ ಮತ್ತು ಗಣಿಹಾರ ಗ್ರಾಮ ಹಾಗೂ ಆಲಮೇಲ ತಾಲೂಕಿನ ಕೋರಹಳ್ಳಿ, ಹೂವಿನಹಳ್ಳಿ ಹಾಗೂ ವಿಭೂತಿಹಳ್ಳಿ ಗ್ರಾಮ ಮತ್ತು ಇಂಡಿ ತಾಲೂಕಿನ ಮರಸನಹಳ್ಳಿ, ಸಾಲೋಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರ, ಬಬಲಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಬಲಾದ ಮತ್ತು ಹಲಗುಣಕಿ ಮತ್ತು ಹೊರ್ತಿ ಗ್ರಾಮಗಳಲ್ಲಿ ಪ್ರತಿ ಮನೆ ಮನೆಗೆ ಗಂಗೆ ಕಾರ್ಯಕ್ರಮದಡಿ ಅನುಷ್ಠಾನಗೊಂಡ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿದರು. ನಲ್ಲಿಯ ಮೂಲಕ ನೀರು ಪ್ರತಿದಿನ ಪೂರೈಕೆ ಆಗುತ್ತಿರುವ ಕುರಿತು ವಿಚಾರಿಸಿ, ಖುದ್ದು ಪರಿಶೀಲಿಸಿದರು. ಗ್ರಾಮಗಳಲ್ಲಿ ಅನುಷ್ಠಾನಗೊಂಡ ಜಲ ಜೀವನ ಮಿಷನ್ ಯೋಜನೆಯಡಿ ಉತ್ತಮ ಕಾಮಗಾರಿ ಪೂರ್ಣಗೊಂಡಿದ್ದು, ಅದನ್ನು ಸಾರ್ವಜನಿಕರು ಮನೆಗೆ ಅಳವಡಿಸಿರುವ ನಲ್ಲಿ ಸಂಪರ್ಕ ಕುರಿತು ಸ್ಥಳೀಯ ಫಲಾನುಭವಿಗಳ ಜೊತೆ ಚರ್ಚಿಸಿ, ನೀರನ್ನು ಪೋಲು ಮಾಡದೆ ವ್ಯವಸ್ಥಿತವಾಗಿ ಬಳಕೆ ಮಾಡಬೇಕು ಎಂದು ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗಮನಿಸಿ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಈಗಾಗಲೇ ೨೨೦ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಅಂದಾಜು ಪತ್ರಿಕೆ ತಯಾರಿಸಲಾಗಿ. ಮುಂಬರುವ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗುವುದೆಂದು ತಿಳಿಸಿದರು. ಎಲ್ಲ ಗ್ರಾಮಗಳ ಭೇಟಿಯ ಸಂದರ್ಭದಲ್ಲಿ ಓವರ್ ಹೆಡ್ ಟ್ಯಾಂಕ್‌ಗಳನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಸ್ವಚ್ಛತೆ ಮಾಡುವಂತೆ ಪಿಡಿಒ ಹಾಗೂ ನೀರುಗಂಟಿ ಸಿಬ್ಬಂದಿಗೆ ಸೂಚನೆ ನೀಡಿದರು.

ಇಂಡಿ ಅರ್ಜುಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅಳವಡಿಸಿರುವ ಎಎಒ ಕಾಮಗಾರಿ ವೀಕ್ಷಿಸಿ ಕಾರ್ಯಾತ್ಮಕ ನಲ್ಲಿ ಸಂಪರ್ಕವನ್ನು ಪರಿಶೀಲನೆ ಮಾಡಿದರು. ಸಾಲೋಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿದ ಸಿ.ಸಿ ರಸ್ತೆ ಕಾಮಗಾರಿ, ಗ್ರಾಮಗಳಲ್ಲಿನ ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ವಹಿಸಿ ಹಾಗೂ ಜಲ ಜೀವನ ಮಿಷನ್ ಯೋಜನೆಯಡಿ ಬಾಕಿ ಉಳಿದ ಗ್ರಾಮಗಳ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ಜನರಿಗೆ ನಲ್ಲಿ ಸಂಪರ್ಕ ಒದಗಿಸಿ ನೀರು ಪೂರೈಕೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು.

ಈ ವೇಳೆ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಸವರಾಜ ಕುಂಬಾರ, ಇಂಡಿ ಇಒ ಭೀಮಾಶಂಕರ ಕನ್ನೂರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಾರನಾಥ್ ರಾಠೋಡ, ತಾಪಂ ಸಹಾಯಕ ನಿರ್ದೇಶಕ ಸಿದ್ದರಾಮ ಅಂಕಲಗಿ, ನಿತ್ಯಾನಂದ ಯಲಗೋಡ, ಆರ್.ಎಸ್.ಬಂಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಶಿಧರ್ ಮೆಡೆದಾರ, ಪಿಡಿಒಗಳಾದ ಕಲ್ಮೇಶ ಜಾನಮಟ್ಟಿ, ಅಮಸಿದ್ದ ಹರಿಜನ ಮತ್ತು ಪ್ರಭಾವತಿ ಕುಂಬಾರ, ಮುತ್ತಪ್ಪ ಜಾಡರ, ಶ್ರೀಶೈಲ ಬಿರಾದಾರ, ಸಿದರಾಯ, ಗ್ರಾಪಂ ಅಧ್ಯಕ್ಷರು, ಸದಸ್ಯರು ಇದ್ದರು.

PREV

Recommended Stories

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ
ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ