ಧರ್ಮಗಳು ಐಕ್ಯತೆ ಕಾಪಾಡಿಕೊಳ್ಳದಿದ್ದರೆ ಜಗತ್ತು ನಾಶ: - ಪ್ರೊ.ಎಸ್. ಶಿವರಾಜಪ್ಪ ಆತಂಕ

KannadaprabhaNewsNetwork | Published : Apr 1, 2024 12:49 AM

ಸಾರಾಂಶ

ನಮ್ಮನ್ನು ಸರಿ ದಾರಿಗೆ ಹೋಗಲು ಬಿಡುತ್ತಿಲ್ಲ. ಇದರಿಂದ ಸಮಾಜದ ಸಾಮಾಜಿಕ ಸ್ಥಿತಿ ಗಂಭೀರವಾಗಿದೆ. ನಾವುಗಳು ಜಾಗೃತರಾಗಬೇಕಿದೆ. ದೇಶದಲ್ಲಿ ಎಲ್ಲಾ ಧರ್ಮಿಯರೂ ಶಾಂತಿ, ಸೌಹಾರ್ದತೆ ಬಯಸಿದರೇ, ರಾಜಕಾರಣಿಗಳು ಮಾತ್ರ ದ್ವೇಷ, ಅಸೂಯೆ ಬಯಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಾನವ ಕುಲದ ಒಳಿತಿಗಾಗಿ ಜಗತ್ತಿನ ಎಲ್ಲಾ ಧರ್ಮಗಳೂ ಪರಸ್ಪರ ಐಕ್ಯತೆ ಕಾಪಾಡಿಕೊಳ್ಳದಿದ್ದರೆ ಜಗತ್ತು ನಾಶವಾಗುವುದು ಖಚಿತ ಎಂದು ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾ ಕೇಂದ್ರದ ನಿವೃತ್ತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ತಿಳಿಸಿದರು.

ನಗರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮೈಸೂರು ವಿಭಾಗದಿಂದ ಏರ್ಪಡಿಸಿದ್ದ ರಂಜಾನ್ ಇಫ್ತಾರ್ ಸೌಹಾರ್ದ ಕೂಟದಲ್ಲಿ ಮಾತನಾಡಿದ ಅವರು, ನಮ್ಮನ್ನು ಆಳುವ ಪ್ರಭುಗಳು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ನಮ್ಮ ದಿಕ್ಕು ತಪ್ಪಿಸುತ್ತಿದ್ದಾರೆ. ತಮ್ಮ ಅಧಿಕಾರದ ದಾಹಕ್ಕಾಗಿ ಧರ್ಮ ಧರ್ಮಗಳನ್ನು ಒಡೆದು ಧರ್ಮ ದಂಗಲ್ ಸೃಷ್ಟಿಸುತ್ತಿದ್ದಾರೆ ಎಂದರು.

ನಮ್ಮನ್ನು ಸರಿ ದಾರಿಗೆ ಹೋಗಲು ಬಿಡುತ್ತಿಲ್ಲ. ಇದರಿಂದ ಸಮಾಜದ ಸಾಮಾಜಿಕ ಸ್ಥಿತಿ ಗಂಭೀರವಾಗಿದೆ. ನಾವುಗಳು ಜಾಗೃತರಾಗಬೇಕಿದೆ. ದೇಶದಲ್ಲಿ ಎಲ್ಲಾ ಧರ್ಮಿಯರೂ ಶಾಂತಿ, ಸೌಹಾರ್ದತೆ ಬಯಸಿದರೇ, ರಾಜಕಾರಣಿಗಳು ಮಾತ್ರ ದ್ವೇಷ, ಅಸೂಯೆ ಬಯಸುತ್ತಿದ್ದಾರೆ. ನಮ್ಮ ಕಾನೂನುಗಳು ಎಷ್ಟೇ ಬಿಗಿಯಾಗಿದ್ದರೂ ಅವುಗಳು ಚಲಾವಣೆಗೆ ಬರುತ್ತಿಲ್ಲ. ಇಂದಿನ ಮಾಧ್ಯಮಗಳೂ ಜನರಲ್ಲಿ ಧರ್ಮಗಳ ಅಮಲನ್ನು ತುಂಬುತ್ತಿದ್ದಾರೆ. ನಾವುಗಳು ಎಚ್ಚೆತ್ತುಕೊಳ್ಳದಿದ್ದರೇ ಮುಂದಿನ ದಿನಗಳು ಕಷ್ಟಕರವಾಗುತ್ತವೆ ಎಂದು ಅವರು ಎಚ್ಚರಿಸಿದರು.

ಯಾವುದೇ ವೆಚ್ಚವಿಲ್ಲದೇ ಕೇವಲ ಪ್ರೀತಿಯಿಂದ ಶಾಂತಿ ದೊರಕುವಾಗ ಕೋಟ್ಯಂತರ ಹಣ ವೆಚ್ಚವಾಗುವ ಯುದ್ಧ ನಮಗೇಕೆ ಬೇಕು. ಮುಂದಿನ ಪೀಳಿಗೆ ಭವಿಷ್ಯವನ್ನು ಮನದಲ್ಲಿಟ್ಟುಕೊಂಡು ನಾವು ಪರಸ್ಪರ ಸೌಹಾರ್ದತೆಯಿಂದ ಬಾಳಬೇಕಿದೆ. ಬಸವಣ್ಣ ಅವರು ಹೇಳಿದಂತೆ ಭಕ್ತಿಯು ಗರಗಸದಂತೆ ಹೋಗುತ್ತಲೂ ಕುಯ್ಯುತ್ತದೆ, ಬರುತ್ತಲೂ ಕುಯ್ಯುತ್ತದೆ. ಹೀಗಾಗಿ ಭಕ್ತಿಯು ಕೇವಲ ಜಗತ್ತಿನ ಒಳಿತಿಗಾಗಿ ಮಾತ್ರ ಬೇಕಿದೆ ಎಂದು ಅವರು ಹೇಳಿದರು.

ಕರ್ನಾಟಕ ಜಮಾತೆ ಇಸ್ಲಾಮಿ ಹಿಂದ್ ಸಹ ಕಾರ್ಯದರ್ಶಿ ರಿಯಾಝ್ ಅಹಮದ್ ರೋಣ ಮಾತನಾಡಿ, ಭಾರತ ಬಹುಸಂಸ್ಕೃತಿಯ ದೇಶವಾಗಿದೆ. ಇಂತಹ ದೇಶದಲ್ಲಿ ಶಾಂತಿಯುತ ಬದುಕು ಕಟ್ಟಿಕೊಳ್ಳಲು ನಾವುಗಳೆಲ್ಲರೂ ಪರಸ್ಪರ ಅನುಸರಿಸುತ್ತಿರುವ ಧರ್ಮಗಳ ಸಂದೇಶಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕಿದೆ ಎಂದರು.

ನಾವೆಲ್ಲರೂ ದೇಶದ ರಾಜಕೀಯ, ಕೈಗಾರಿಕೆ, ಉದ್ಯೋಗ, ಕಲೆ ಸಾಹಿತ್ಯ ಮತ್ತಿತರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತೇವೆ. ಆದರೆ, ನಮ್ಮ ನಮ್ಮ ಧರ್ಮಗಳ ಬಗ್ಗೆ ನಾವುಗಳು ಎಂದಿಗೂ ಮುಕ್ತವಾಗಿ ಮಾತನಾಡುವುದಿಲ್ಲ. ಧರ್ಮಗಳ ಬಗ್ಗೆ ಏನೂ ಅರಿಯದ ಮಾಧ್ಯಮಗಳು ಇಂದು ಧರ್ಮಗಳ ಕುರಿತು ಮಾತನಾಡುತ್ತವೆ. ಅದು ಕೂಡ ಸಮಾಜದಲ್ಲಿ ಸೌಹಾರ್ದತೆ ಕಲಕುವ ವಿಚಾರವನ್ನು ಮಾತ್ರ ಪ್ರಸ್ತಾಪಿಸುತ್ತವೆ. ಇದಕ್ಕೆ ನಾವು ಅವಕಾಶ ಮಾಡಿಕೊಡಬಾರದು. ನಮ್ಮ ಧರ್ಮಗಳ ಬಗ್ಗೆ ನಾವೇ ಮಾತನಾಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಭಿಕರಿಗೆ ಹಣ್ಣು ವಿತರಿಸಲಾಯಿತು. ಬಳಿಕ ಪ್ರಾರ್ಥನೆ ಮಾಡಲಾಯಿತು. ನಂತರ ಸಾಮೂಹಿಕ ಸೌಹಾರ್ಧ ಇಫ್ತಾರ್ ಕೂಟ ನಡೆಯಿತು.

ಸೆಂಟ್ ಮೇರಿಸ್ ಸೆಮಿನರಿಯ ರೆಕ್ಟರ್ ಫಾ. ಪ್ಯಾಟ್ರಿಕ್ ಕ್ಸೇವಿಯರ್, ಜಮಾತೇ ಇಸ್ಲಾಮಿ ಹಿಂದ್ ಮೈಸೂರು ವಿಭಾಗದ ಅಧ್ಯಕ್ಷ ಮಹಮ್ಮದ್ ಅಸ್ಲಂ, ಜಬಿಯುಲ್ಲಾ, ಅಬ್ದುಲ್ ಘಫಾರ್ ಬೇಗ್, ಅಸಾದುಲ್ಲಾ ಮೊದಲಾದವರು ಇದ್ದರು.

Share this article