ಸರ್ಕಾರದ ಸೌಲಭ್ಯ ಬಡವರಿಗೆ ತಲುಪಲು ಜನಸಂಪರ್ಕ ಸಭೆ ಸಹಕಾರಿ - ತಮ್ಮಯ್ಯ

KannadaprabhaNewsNetwork | Published : Nov 14, 2024 12:57 AM

ಸಾರಾಂಶ

ಚಿಕ್ಕಮಗಳೂರು, ಸರ್ಕಾರದ ಸೌಲಭ್ಯಗಳು ಎಲ್ಲಾ ವರ್ಗದ ಜನರನ್ನು ತಲುಪಬೇಕೆಂಬ ಉದ್ದೇಶದಿಂದ ಜನಸಂಪರ್ಕ ಸಭೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಲಕ್ಯಾ ಹೋಬಳಿ ಹಿರೇಗೌಜ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸರ್ಕಾರದ ಸೌಲಭ್ಯಗಳು ಎಲ್ಲಾ ವರ್ಗದ ಜನರನ್ನು ತಲುಪಬೇಕೆಂಬ ಉದ್ದೇಶದಿಂದ ಜನಸಂಪರ್ಕ ಸಭೆಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಲಕ್ಯಾ ಹೋಬಳಿ ಹಿರೇಗೌಜ ಗ್ರಾಮದಲ್ಲಿ ಜಿಪಂ, ತಾಪಂ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಆದೇಶದನ್ವಯ ಗ್ರಾಪಂ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಜನರ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥ ಪಡಿಸಲು ಸಹಕಾರಿಯಾಗಿದೆ ಎಂದ ಅವರು, ಈ ರೀತಿ ವಿನೂತನ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವ, ತಾಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಹೋಬಳಿ ಮಟ್ಟದ ಸಭೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಅಧಿಕಾರಿಗಳನ್ನು ಜನರ ಮನೆ ಬಾಗಿಲಿಗೆ ಕರೆದುಕೊಂಡು ಹೋಗಿ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿ ದ್ದೇವೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನುಗೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಾರೆಂದು ಹೇಳಿದರು.ಗ್ರಾಮಗಳಲ್ಲಿ ನಾಗರಿಕರಿಗೆ ಇರುವ ವಿವಿಧ ಬಗೆ ತೊಂದರೆಗಳನ್ನು ನಿವಾರಿಸುವ ಸಲುವಾಗಿ ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಗ್ರಾಪಂಗೆ ಅಲೆಯಬಾರದೆಂಬ ದೃಷ್ಟಿಯಿಂದ ಜನಸಂಪರ್ಕ ಸಭೆ ಗಳನ್ನು ನಡೆಸುವ ಮೂಲಕ ನೆರವಾಗುತ್ತಿದ್ದೇವೆ ಎಂದು ತಿಳಿಸಿದರು.ಜಿಲ್ಲಾ ಮಟ್ಟದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಸಮಸ್ಯೆ, ತೋಟಗಾರಿಕೆ, ಕಂದಾಯ, ಆರೋಗ್ಯ, ವಿದ್ಯುತ್, ಆಹಾರ ಇಲಾಖೆ ಸೇರಿದಂತೆ ಮುಂತಾದ ಯಾವುದೇ ಸಮಸ್ಯೆಗಳಿದ್ದರೆ ಈ ಜನಸಂಪರ್ಕ ಸಭೆಯಲ್ಲೇ ಪರಿಹರಿಸಲಾಗುವುದೆಂದು ಹೇಳಿದರು.ಹಿರೇಗೌಜ ಗ್ರಾಪಂಗೆ ₹1.13 ಕೋಟಿ ಅನುದಾನ ನೀಡಲಾಗಿದ್ದು, ಕುರಿಚಿಕ್ಕನಹಳ್ಳಿ ರಸ್ತೆ ಅಭಿವೃದ್ಧಿಗೆ ₹20 ಲಕ್ಷ , ಚಿಕ್ಕಗೌಜ-ಹಿರೇಗೌಜ ಕಾಂಕ್ರೀಟ್ ರಸ್ತೆಗೆ ₹60 ಲಕ್ಷ, ಕರಿಸಿದ್ದನಹಳ್ಳಿ ರಸ್ತೆಗೆ ₹10 ಲಕ್ಷ, ಕೆಂಗೇನಹಳ್ಳಿ ₹10 ಲಕ್ಷ, ಸಾದರಹಳ್ಳಿ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ದುರಸ್ತಿಗೆ ₹2 ಲಕ್ಷ, ಹಿರೇಗೌಜ ಗ್ರಾಮದ ಗ್ರಂಥಾಲಯ ಒಳಾಂಗಣ ನವೀಕರಣಕ್ಕೆ ₹1.50 ಲಕ್ಷ , ಕಾರೇಹಳ್ಳಿ ರಸ್ತೆಗೆ ₹10 ಲಕ್ಷ , ವಿಎಸ್‌ಎಸ್‌ಎನ್ ಗೆ ₹3 ಲಕ್ಷ. ಹೀಗೆ ಅನುದಾನ ನೀಡಿದ್ದು, ತಾಲೂಕಿನ 34 ಗ್ರಾಮ ಪಂಚಾಯಿತಿ ಗಳ ಪೈಕಿ ಅತೀ ಹೆಚ್ಚು ಅನುದಾನ ಪಡೆದ ಹಿರೇಗೌಜ ಗ್ರಾಮ ಪಂಚಾಯಿತಿ ಎಂದು ಹೇಳಿದರು.ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗೀತಾ, ಸದಸ್ಯರಾದ ಶಿವಕುಮಾರ್, ಗುರುಮೂರ್ತಿ, ಹಾಲಪ್ಪ, ಸುರೇಶ್, ಬೀರೇಗೌಡ, ವಿಜಯ್‌ ಕುಮಾರ್, ಶೋಭಾರಾಣಿ, ವಿಶಾಲಾಕ್ಷಿ, ಚಂದ್ರಕಲಾ, ನಾಗಣ್ಣ, ಪಿಡಿಒ ರಾಜ್‌ಕುಮಾರ್‌ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪೋಟೋ ಫೈಲ್‌ ನೇಮ್‌ 13 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ರಫ್ತು ನಿಗಮದ ಅಧ್ಯಕ್ಷ ಬಿ.ಎಚ್‌. ಹರೀಶ್‌, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಮಂಜುಳಾ, ಮಂಜುನಾಥ್‌ ಇದ್ದರು.

Share this article