ಇ-ಖಾತಾ ಸಮಸ್ಯೆ ನಿವಾರಣೆಗೆ ಜಂಟಿ ಕಾರ್ಯಪಡೆ

KannadaprabhaNewsNetwork | Published : Nov 14, 2024 12:56 AM

ಸಾರಾಂಶ

ರಾಜ್ಯದಲ್ಲಿ ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸಗಳನ್ನು ಸುಗಮವಾಗಿ ಸಾರ್ವಜನಿಕರಿಗೆ ವಿತರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸೂಚಿಸಲು ರಚನೆಯಾಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯ ಉನ್ನತ ಮಟ್ಟದ ಜಂಟಿ ಕಾರ್ಯಪಡೆಗೆ ಎರಡು ತಿಂಗಳಲ್ಲಿ ವರದಿ ನೀಡುವಂತೆ ಸರ್ಕಾರ ನಿರ್ದೇಶನ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸಗಳನ್ನು ಸುಗಮವಾಗಿ ಸಾರ್ವಜನಿಕರಿಗೆ ವಿತರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸೂಚಿಸಲು ರಚನೆಯಾಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯ ಉನ್ನತ ಮಟ್ಟದ ಜಂಟಿ ಕಾರ್ಯಪಡೆಗೆ ಎರಡು ತಿಂಗಳಲ್ಲಿ ವರದಿ ನೀಡುವಂತೆ ಸರ್ಕಾರ ನಿರ್ದೇಶನ ನೀಡಿದೆ.

ಸ್ಥಿರಾಸ್ತಿಗಳ ನೋಂದಣಿಗಾಗಿ ಗ್ರಾಮಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತೆಗಳನ್ನು ವಿತರಿಸುವ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್‌ ನೇತೃತ್ವದಲ್ಲಿ ಬುಧವಾರ ವಿಕಾಸಸೌಧದಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮೂರು ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಜಂಟಿ ಕಾರ್ಯಪಡೆ ರಚನೆಗೆ ನಿರ್ಧರಿಸಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಗಳ ನಡುವೆ ಸಮನ್ವಯದಿಂದ ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸಗಳನ್ನು ಸುಗಮವಾಗಿ ವಿತರಣೆ ಮಾಡಲು ಅನುಕೂಲವಾಗುವಂತೆ ವರದಿ ನೀಡಲು ಸೂಚನೆ ನೀಡಲಾಗಿದೆ. ಖಾತಾ ವಿತರಿಸುವ ಸಂಬಂಧ ತಕ್ಷಣದ ಪರಿಹಾರೋಪಾಯಗಳನ್ನು ಸೂಚಿಸುವುದು ಸೇರಿದಂತೆ ಇತರೆ ಅಂಶಗಳುಳ್ಳ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಅಲ್ಲದೇ, ಖಾತಾ ವಿಚಾರ ಸಂಬಂಧ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳೂ ಸೇರಿದಂತೆ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಶಿಫಾರಸು ಮಾಡುವಂತೆ ತಿಳಿಸಲಾಯಿತು.

ಕೃಷಿ ಜಮೀನು ಭೂ ಪರಿವರ್ತನೆ ನಂತರ ನಿವೇಶನ ಬಿಡುಗಡೆಗೊಳಿಸುವ ಮುನ್ನ ಉದ್ಯಾನವನ, ಸಿಎ ನಿವೇಶನ ಮತ್ತು ರಸ್ತೆ ಜಮೀನುಗಳ ಇ-ಖಾತೆ ಮಂಜೂರು ಮಾಡುವ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಮಹಾನಗರ ಪಾಲಿಕೆಗಳಲ್ಲಿ ನೀಡುತ್ತಿರುವ ಟಿಡಿಆರ್‌ಗಳನ್ನು ಪುನರ್ ಉಪಯೋಗಿಸದಂತೆ ತಡೆಯಲು ಮತ್ತು ಟಿಡಿಆರ್‌ಗಳಿಗೂ ಸಹ ಇ-ಖಾತೆಯನ್ನು ವಿತರಿಸುವ ಬಗ್ಗೆ ಚರ್ಚಿಸಲಾಗಿದ್ದು, ಇವುಗಳ ಸಾಧಕ-ಬಾಧಕ ಕುರಿತು ವರದಿ ನೀಡುವಂತೆಯೂ ತಿಳಿಸಲಾಯಿತು.

Share this article