ಇಂದು ಜನ ಚಳವಳಿಗಳ ಜನಾಗ್ರಹ ಸಮಾವೇಶ

KannadaprabhaNewsNetwork |  
Published : May 20, 2025, 01:18 AM ISTUpdated : May 20, 2025, 01:19 AM IST
ಪೋಟೊ: 19ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್. ಆರ್. ಬಸವರಾಜಪ್ಪ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆಸಲುದ್ದೇಶಿಸಿರುವ ಸರ್ಕಾರದ ಸಾಧನಾ ಸಮಾವೇಶ ವಿರೋಧಿಸಿ ಮೇ 20 ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಜನ ಚಳವಳಿಗಳ ಜನಾಗ್ರಹ ಸಮಾವೇಶ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆಸಲುದ್ದೇಶಿಸಿರುವ ಸರ್ಕಾರದ ಸಾಧನಾ ಸಮಾವೇಶ ವಿರೋಧಿಸಿ ಮೇ 20 ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಜನ ಚಳವಳಿಗಳ ಜನಾಗ್ರಹ ಸಮಾವೇಶ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಭರವಸೆ ನೀಡಿದ್ದ ರಾಜ್ಯದ ಕಾಂಗ್ರೆಸ್ ಸರ್ಕಾರ, ಕೊಟ್ಟ ಮಾತನ್ನು ಮರೆತಿದೆ. ರೈತರ, ದಲಿತರ, ಕಾರ್ಮಿಕರ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಲ್ಲ. ರೈತ ಉತ್ಪನ್ನಗಳ ನೆಲೆ ಕುಸಿತವಾದರೂ ಖರೀದಿ ಕೇಂದ್ರಗಳನ್ನು ತೆರೆದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಬದಲಾದರೂ ಸರ್ಕಾರಿ ವ್ಯವಸ್ಥೆಯಲ್ಲಿ ಬದಲಾವಣೆ ಆಗಿಲ್ಲ, ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೆ ಕೆಲಸವಾಗುತ್ತಿಲ್ಲ. ನೀರಾವರಿ ಯೋಜನೆಗಳಿಗೆ ಕಾಲಮಿತಿಯೊಳಗೆ ಹಣ ಬಿಡುಗಡೆ ಮಾಡಿಲ್ಲ, ಅಭಿವೃದ್ಧಿ ಶೂನ್ಯವಾಗಿದೆ. ಕಾರ್ಮಿಕರ ದುಡಿಮೆ ಅವಧಿಯನ್ನು 8 ಗಂಟೆಯಿಂದ 12 ಗಂಟೆ ಏರಿಕೆ ಮಾಡಿರುವುದನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರೂ ಅದಕ್ಕೆ ಸರ್ಕಾರ ಸೊಪ್ಪು ಹಾಕಿಲ್ಲ. ಇಂತಹ ಸಮಯದಲ್ಲಿ ಸರ್ಕಾರದ ಸಾಧನಾ ಸಮಾವೇಶ ಯಾಕೆ ಎಂದು ಪ್ರಶ್ನಿಸಿದರು.

ಜನಶಕ್ತಿ ಕರ್ನಾಟಕ ಸಂಘಟನೆಯ ಮುಖಂಡ ಕೆ.ಎಲ್.ಅಶೋಕ್ ಮಾತನಾಡಿ, ರಾಜ್ಯ ಸರ್ಕಾರ ಸಾಧನಾ ಸಮಾವೇಶ ಮಾಡುವ ಬದಲಿಗೆ ಆತ್ಮಾವಲೋಕನ ಸಮಾವೇಶ ಮಾಡಿಕೊಳ್ಳಬೇಕಿದೆ. ಯಾಕೆಂದರೆ ತಾನು ಜನರಿಗೆ ಕೊಟ್ಟ ಭರವಸೆಯನ್ನು ಎಷ್ಟರ ಮಟ್ಟಿಗೆ ಈಡೇರಿಸಿದೆ ಎನ್ನುವುದನ್ನು ಅದು ತನ್ನನ್ನು ತಾನು ನೋಡಿಕೊಳ್ಳಬೇಕಿದೆ. ಸರ್ಕಾರ ಜನರಿಗೆ ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ, ಬದಲಿಗೆ ಇದು ಭರವಸೆಯ ಸರ್ಕಾರ ಮಾತ್ರವಾಗಿದೆ. ಇದರ ವಿರುದ್ಧ ಹೋರಾಟ ರೂಪಿಸುವುದರ ಭಾಗವಾಗಿಯೇ ಜನ ಚಳವಳಿಗಳ ಜನಾಗ್ರಹ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

ದಲಿತ ಸಂಘಟನೆಯ ಮುಖಂಡ ಟಿ.ಎಚ್.ಹಾಲೇಶಪ್ಪ ಮಾತನಾಡಿ, ಎಸ್‌ಟಿಪಿ, ಟಿಎಸ್‌ಪಿ ಕಾಯ್ದೆ 7 ಡಿ ತೆಗೆಯಬೇಕು, ಪಿಟಿಸಿಎಲ್ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕೆನ್ನುವ ನಮ್ಮ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ದಲಿತರ ಬಗ್ಗೆ ಅಸಡ್ಡೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕವು ಸರ್ಕಾರದ ಸಾಧನಾ ಸಮಾವೇಶ ಪ್ರಶ್ನಿಸಿ ಮೇ 20 ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಜನ ಚಳವಳಿಗಳ ಜನಾಗ್ರಹ ಸಮಾವೇಶಕ್ಕೆ ದಲಿತ ಸಂಘಟನೆ ಎಲ್ಲಾ ರೀತಿಯ ಬೆಂಬಲ ನೀಡಿ, ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘ ಜಿಲ್ಲಾಧ್ಯಕ್ಷ ರಾಘವೇಂದ್ರ, ಮುಖಂಡರಾದ ಜಗದೀಶ್, ವಸಂತ್ ಕುಮಾರ್, ನಾರಾಯಣ ಮತ್ತು ಹನುಮಮ್ಮ ಮತ್ತಿತರರು ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ