ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ವ್ಯಾಪಕ ಮಳೆ

KannadaprabhaNewsNetwork |  
Published : May 20, 2025, 01:18 AM IST
ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆ ನಿರಂತರ ಮಳೆ ಪರಿಣಾಮ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಕಳೆದ 24 ಗಂಟೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ 4 ತಾಲೂಕುಗಳಲ್ಲೂ ವ್ಯಾಪಕವಾಗಿ ಮಳೆಯಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದ ಜನಜೀವನ ಬಾಧಿತವಾಗಿದ್ದು, ಕೆಲವೆಡೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿರುವ ಕುರಿತು ವರದಿಯಾಗಿದೆ.

ದೊಡ್ಡಬಳ್ಳಾಪುರ: ಕಳೆದ 24 ಗಂಟೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ 4 ತಾಲೂಕುಗಳಲ್ಲೂ ವ್ಯಾಪಕವಾಗಿ ಮಳೆಯಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದ ಜನಜೀವನ ಬಾಧಿತವಾಗಿದ್ದು, ಕೆಲವೆಡೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿರುವ ಕುರಿತು ವರದಿಯಾಗಿದೆ.

ಕಳೆದ ರಾತ್ರಿ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 21.03 ಮಿ.ಮೀ, ದೇವನಹಳ್ಳಿ ತಾಲೂಕಿನಲ್ಲಿ 33.02 ಮಿ.ಮೀ, ಹೊಸಕೋಟೆ ತಾಲೂಕಿನಲ್ಲಿ ಅತಿ ಹೆಚ್ಚು 47.00 ಮಿ.ಮೀ ಹಾಗೂ ನೆಲಮಂಗಲ ತಾಲೂಕಿನಲ್ಲಿ 28.01 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಸರಾಸರಿ 31.03 ಮಿಲಿಮೀಟರ್‌ ಮಳೆ ದಾಖಲಾಗಿದೆ.

ಮಳೆ ಪರಿಣಾಮ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಚರಂಡಿಗಳು ತುಂಬಿ ರಸ್ತೆಯಲ್ಲಿ ಹರಿಯುತ್ತಿವೆ. ಇಲ್ಲಿನ ಶಾಂತಿನಗರದಲ್ಲಿ ಮ್ಯಾನ್‌ಹೋಲ್‌ ತುಂಬಿ ಉಕ್ಕುತ್ತಿದ್ದು, 7ನೇ ಕ್ರಾಸ್‌ನ ರಸ್ತೆಯೆಲ್ಲಾ ಹೊಲಸುಮಯವಾಗಿದೆ. ಖಾಸ್‌ಬಾಗ್‌ ಬಳಿಯ ರೈಲ್ವೇ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿ ವಾಹನ ಸಂಚಾರ ಬಾಧಿತವಾಗಿತ್ತು. ತಾಲೂಕು ಕಚೇರಿ ವೃತ್ತ, ಮುಕ್ತಾಂಬಿಕಾ ರಸ್ತೆ, ಕೊಂಗಾಡಿಯಪ್ಪ ಕಾಲೇಜು ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿದ ಪರಿಣಾಮ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.

ತಾಲೂಕಿನ ದೊಡ್ಡಬೆಳವಂಗಲ, ಮಧುರೆ, ಸಾಸಲು, ತೂಬಗೆರೆ ಹಾಗೂ ಕಸಬಾ ಹೋಬಳಿಗಳ ಎಲ್ಲೆಡೆ ಮಳೆಯಾಗಿದೆ. ಭಾನುವಾರ ರಾತ್ರಿ ಆರಂಭವಾದ ಮಳೆ 8 ಗಂಟೆಗಳ ಕಾಲ ನಿರಂತರವಾಗಿ ಸುರಿದಿದೆ. ಸೋಮವಾರ ಬೆಳಗ್ಗೆ 9 ಗಂಟೆವರೆಗೆ ಜಡಿಮಳೆ ಮುಂದುವರೆದಿತ್ತು.

ತಾಲೂಕಿನ ರಾಜಘಟ್ಟ ಕೆರೆ ಏರಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಗುಂಡಿಗಳಲ್ಲಿ ಮಳೆ ನೀರು ತುಂಬಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಉಳಿದಂತೆ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ ತಾಲೂಕುಗಳಲ್ಲಿ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿರುವ ವರದಿಯಾಗಿದೆ. ಎರಡೂ ಪಟ್ಟಣಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಬಾಧಿತವಾಗಿತ್ತು.

ಹೋಬಳಿಗಳಲ್ಲೂ ವ್ಯಾಪಕ ಮಳೆ:

ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಹೋಬಳಿಯಲ್ಲಿ 25.3 ಮಿಮೀ, ದೊಡ್ಡಬೆಳವಂಗಲ ಹೋಬಳಿಯಲ್ಲಿ 18.9 ಮಿಮೀ, ಮಧುರೆ ಹೋಬಳಿಯಲ್ಲಿ ಅತಿ ಹೆಚ್ಚು 38.9 ಮಿಮೀ ಹಾಗೂ ತೂಬಗೆರೆ ಹೋಬಳಿಯಲ್ಲಿ 16.1 ಮಿಮೀ, ಸಾಸಲು ಹೋಬಳಿಯಲ್ಲಿ 14.9 ಮಿಮೀ ಮಳೆ ದಾಖಲಾಗಿದೆ.

ಮುಂದಿನ 3 ದಿನ ಮಳೆ ಮುನ್ನೆಚ್ಚರಿಕೆ:

ಮುಂದಿನ 3 ದಿನಗಳ ಕಾಲ ಬೆಂಗಳೂರು ಜಿಲ್ಲಾದ್ಯಂತ ಭಾರಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ದತೆ ಮಾಡಿಕೊಂಡಿದೆ.

ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಮಾರ್ಗಸೂಚಿ:

ಮುಂದಿನ 3 ದಿನಗಳ ಕಾಲ (ಮೇ 20 ರಿಂದ 23 ವರೆಗೆ) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆಯೆಂದು ಭಾರತೀಯ ಹವಾಮಾನ ಇಲಾಖೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ. ಕೃಷಿಕರು ಮಳೆ, ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಿಂದ ದೂರವಿರುವುದು ಸಾರ್ವಜನಿಕರು, ಮಕ್ಕಳು, ಕಾರ್ಮಿಕರು ಸಿಡಿಲು ಬಡಿಯುವ ಸಂದರ್ಭದಲ್ಲಿ ಹೊರಗೆ ತಿರುಗಾಡದೆ, ಸೂಕ್ತ ಕಟ್ಟಡದಲ್ಲಿ ಆಶ್ರಯ ಪಡೆಯುವುದು. ಈ ಸಂದರ್ಭದಲ್ಲಿ ಮಕ್ಕಳು, ಸಾರ್ವಜನಿಕರು ಅಪಾಯಕಾರಿ ಮರ, ವಿದ್ಯುತ್‌ ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್‌ ತಂತಿಗಳಿಂದ ದೂರವಿರುವುದು. ದುರ್ಬಲವಾದ, ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ, ಮರಗಳ ಕೆಳಗೆ ನಿಲ್ಲಬಾರದು ಎಂದು ತಿಳಿಸಿದ್ದು, ಈ ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ.

ಸಹಾಯವಾಣಿ, ಕಾಳಜಿ ಕೇಂದ್ರ ವ್ಯವಸ್ಥೆ:

ಸಾರ್ವಜನಿಕರು ಅಗತ್ಯವಿದ್ದಲ್ಲಿ ಮುಂಜಾಗೃತ ಕ್ರಮವಾಗಿ ಹತ್ತಿರದ ಕಾಳಜಿ ಕೇಂದ್ರದಲ್ಲಿ ಉಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಸಂಖ್ಯೆ 1077 ಅಥವಾ ಜಿಲ್ಲಾ ಸಹಾಯವಾಣಿ ಸಂಖ್ಯೆ- 080-28388005 ಕರೆ ಮಾಡಿ. ಅಥವಾ ಆಯಾ ತಾಲ್ಲೂಕು ತಹಶೀಲ್ದಾರರ ಕಛೇರಿಗೆ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

19ಕೆಡಿಬಿಪಿ5-

ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆ ನಿರಂತರ ಮಳೆ ಪರಿಣಾಮ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ.

--

19ಕೆಡಿಬಿಪಿ6- ದೊಡ್ಡಬಳ್ಳಾಪುರ ನಗರದಲ್ಲಿ ವ್ಯಾಪಕ ಮಳೆಗೆ ಜನಜೀವನ ಅಸ್ತವ್ಯಸ್ತ.

--

19ಕೆಡಿಬಿಪಿ7- ವ್ಯಾಪಕ ಜಡಿ ಮಳೆಗೆ ಜನಜೀವನ ತತ್ತರ.

--

19ಕೆಡಿಬಿಪಿ8-

ಜಡಿಮಳೆ ಪರಿಣಾಮ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಬಾಧಿತ.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ