ಹುಬ್ಬಳ್ಳಿಯಲ್ಲಿ ಜನಾಕ್ರೋಶ ಯಾತ್ರೆ ಸಮಾರೋಪ ಸಮಾರಂಭ: ಎನ್‌. ರವಿಕುಮಾರ

KannadaprabhaNewsNetwork | Published : May 6, 2025 12:21 AM
Follow Us

ಸಾರಾಂಶ

ಮೇ 7ರಂದು ಕೋಲಾರ, 8 ರಂದು ತುಮಕೂರು, ಚಿತ್ರದುರ್ಗ, 9ರಂದು ಬಳ್ಳಾರಿ, ವಿಜಯನಗರ, 10ರಂದು ಚಿಕ್ಕಬಳ್ಳಾಪುರದಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದ್ದು, 11ರಂದು ಹುಬ್ಬಳ್ಳಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಂದು ಸಂಜೆ ದುರ್ಗದ ಬೈಲ್‌ನಿಂದ ರ್‍ಯಾಲಿ ನಡೆಯಲಿದ್ದು, ಮೂರುಸಾವಿರ ಮಠದ ಆವರಣದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ.

ಹುಬ್ಬ‍ಳ್ಳಿ: ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಮೇ 11ರಂದು ಸಂಜೆ 4 ಗಂಟೆಗೆ ಹುಬ್ಬಳ್ಳಿಯ ಮೂರುಸಾವಿರ ಮಠದ ಮೈದಾನದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆಯ ಸಮಾರೋಪ ನಡೆಯಲಿದ್ದು, ಸಾವಿರಾರು ಜನ ಪಾಲ್ಗೊಳ್ಳಲಿದ್ದಾರೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7ರಂದು ಕೋಲಾರ, 8 ರಂದು ತುಮಕೂರು, ಚಿತ್ರದುರ್ಗ, 9ರಂದು ಬಳ್ಳಾರಿ, ವಿಜಯನಗರ, 10ರಂದು ಚಿಕ್ಕಬಳ್ಳಾಪುರದಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದ್ದು, 11ರಂದು ಹುಬ್ಬಳ್ಳಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಂದು ಸಂಜೆ ದುರ್ಗದ ಬೈಲ್‌ನಿಂದ ರ್‍ಯಾಲಿ ನಡೆಯಲಿದ್ದು, ಮೂರುಸಾವಿರ ಮಠದ ಆವರಣದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ಕೇಂದ್ರ ಸಚಿವರು, ಸಂಸದರು, ಶಾಸಕರು, ಬಿಜೆಪಿ ರಾಜ್ಯಾಧ್ಯಕ್ಷರು, ಧಾರವಾಡದ ಜಿಲ್ಲಾಧ್ಯಕ್ಷರು, ಸ್ಥಳೀಯ ಮುಖಂಡರು ಮತ್ತು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

50 ವಸ್ತುಗಳ ಬೆಲೆ ಏರಿಕೆ: ರಾಜ್ಯ ಸರ್ಕಾರ ವಿಪರೀತ ಬೆಲೆ ಏರಿಕೆ ಮಾಡುತ್ತಿದೆ. 50 ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ. ಬೆಲೆ ಏರಿಕೆ ಮಾಡಲೆಂದೇ ಸರ್ಕಾರ ರಿಸರ್ಚ್‌ ವಿಂಗ್‌ ತೆರೆದಂತಿದೆ. ಯಾವ್ಯಾವ ವಸ್ತುಗಳ ಬೆಲೆ ಹೇಗೆ ಬೆಲೆ ಏರಿಸಬೇಕು ಎನ್ನುವುದನ್ನು ಸೂಚಿಸಲು ಈ ವಿಂಗ್‌ ತೆರೆದಂತೆ ಕಾಣುತ್ತದೆ. ಹಾಲಿನ ಬೆಲೆ ಏರಿಕೆ, ಕಸದ ಮೇಲೆ, ಅದೂ ಒಣಕಸಕ್ಕೆ ಬೇರೆ, ಹಸಿ ಕಸಕ್ಕೆ ಬೇರೆ ಟ್ಯಾಕ್ಸ್‌, ಕಾರ್‌ ಪಾರ್ಕಿಂಗ್‌ ಟ್ಯಾಕ್ಸ್‌, ನೀರಿನ, ವಿದ್ಯುತ್‌ ಸುಂಕ ಹೆಚ್ಚಿಸಿ ಒಂದು ರೀತಿಯಲ್ಲಿ ಬೆಲೆ ಏರಿಕೆ ಅಭಿಯಾನ ನಡೆಸಿದಂತಿದೆ ಎಂದು ಲೇವಡಿ ಮಾಡಿದರು.

ಈ ಸರ್ಕಾರ ಬಡವರಿಗೆ, ದಲಿತರಿಗೆ ಮೋಸ ಮಾಡುತ್ತಿದೆ. ಎಸ್ಟಿ ಸಮುದಾಯದ ಎಸ್‌ಸಿಪಿ, ಟಿಎಸ್‌ಪಿಯ ₹38,800 ಕೋಟಿ ಅನುದಾನ ಗ್ಯಾರೆಂಟಿ ಯೋಜನೆಗೆ ಬಳಕೆ ಮಾಡಿ ಮೋಸ ಮಾಡಿದೆ. ರೈತರಿಗೂ ಈ ಸರ್ಕಾರದಿಂದ ಅನ್ಯಾಯವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ನೀಡುತ್ತಿದ್ದ ₹4000 ನಿಲ್ಲಿಸಿದೆ. ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ನಿಲ್ಲಿಸಿದೆ. ಬೀಜ, ಗೊಬ್ಬರದ ಬೆಲೆ ಏರಿಸಿದೆ. ನೀರಾವರಿ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ. ಶಾಸಕರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಅಭಿವೃದ್ಧಿ ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಮರ ತುಷ್ಟೀಕರಣ: ಹಿಂದೂ ದೇವಸ್ಥಾನಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಗಣಪತಿ ಪ್ರತಿಷ್ಠಾಪನೆಗೆ ಪರವಾನಗಿ ಕೇಳಿದರೆ, ಹಿಂದೂ ಯುವತಿಯರ ರಕ್ಷಣೆ ಮಾಡಿದರೆ, ಗೋವುಗಳ ರಕ್ಷಣೆ ಮಾಡಿದರೆ ರೌಡಿಶೀಟರ್ ಓಪನ್ ಮಾಡುತ್ತಾರೆ. ಹೀಗಾಗಿ, ಇದು ಹಿಂದೂ ವಿರೋಧಿ ಸರ್ಕಾರ ಎಂದ ಅವರು, ಮುಸ್ಲಿಮರಿಗಾಗಿ ಬಜೆಟ್‌ನಲ್ಲಿ ಅನುದಾನ ಮೀಸಲು, ಸಂಸ್ಥೆಗಳ ಆರಂಭಕ್ಕೆ ಪ್ರೋತ್ಸಾಹ, ಮುಸ್ಲಿಂ ಮಹಿಳೆಯರ ಸ್ವಯಂರಕ್ಷಣೆಗೆ ಕಾರ್ಯಕ್ರಮ ರೂಪಿಸುವ ಮೂಲಕ ಮುಸ್ಲಿಮರ ತುಷ್ಟೀಕರಣದಲ್ಲಿ ಮುಳುಗಿದೆ ಎಂದರು.

ಈ ವೇಳೆ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಪಿ ರಾಜೀವ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಹೇಂದ್ರ ಕೌತಾಳ, ದತ್ತಮೂರ್ತಿ ಕುಲಕರ್ಣಿ ಉಪಸ್ಥಿತರಿದ್ದರು.

ಭಯೋತ್ಪಾದಕರಿಗೆ ಸ್ಲೀಪರ್ ಸೆಲ್‌: ಪಾಜಿಲ್‌ಗೆ ಸರ್ಕಾರ ಪರಿಹಾರ ನೀಡಿದ ₹25 ಲಕ್ಷದಲ್ಲಿ ₹3 ಲಕ್ಷವನ್ನು ಸುಹಾಸ್ ಶೆಟ್ಟಿ ಕೊಲೆಗೆ ಸುಪಾರಿ ನೀಡಲಾಗಿದೆ‌‌. ಹೀಗಾಗಿ, ಸುಹಾಸ್ ಶೆಟ್ಟಿ ಕೊಲೆ ಸರ್ಕಾರಿ ಪ್ರಾಯೋಜಿತ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ ಆರೋಪಿಸಿದರು. ಕರ್ನಾಟಕ ಭಯೋತ್ಪಾದಕರಿಗೆ ಸ್ಲೀಪರ್‌ ಸೆಲ್‌ ಆಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಹಿಡಿತವಿಲ್ಲ ಎಂದೂ ಆರೋಪಿಸಿದರು.