ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ಪುರಸಭೆ ಬಯಲು ರಂಗಮಂದಿರ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂನಿಂದ ಶುಕ್ರವಾರ ನಡೆದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 513 ಕೋಟಿ ರು. ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಬಳಿ ಹಣವಿಲ್ಲದೆ ಅಭಿವೃದ್ದಿ ಕೆಲಸಗಳು ಕುಂಠಿತಗೊಂಡಿವೆ ಎಂದು ಈ ಎರಡು ಪಕ್ಷಗಳವರು ಬೊಗಳೆ ಬಿಡುತ್ತಿದ್ದಾರೆ, ಆದರೆ ನಾವು ಕಳೆದ ಎರಡು ವರ್ಷದ ಅವಧಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 90 ಸಾವಿರ ಕೋಟಿ ರು. ಖರ್ಚು ಮಾಡುವುದರ ಜತೆಗೆ ಇತರೆ ಯೋಜನೆಗಳಿಗೆ 60 ಸಾವಿರ ಕೋಟಿ ರು. ವ್ಯಯಿಸಿದ್ದು, ಹಣ ಇಲ್ಲದಿದ್ದರೆ ಈ ಕೆಲಸಗಳು ಸಾಧ್ಯವಾಗುತ್ತಿತ್ತೆ ಎಂದರು.ನಮ್ಮ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿದೆ ಎಂದು ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ, ಔಷಧಿ ಮತ್ತು ಚಿನ್ನಬೆಳ್ಳಿ ಸೇರಿದಂತೆ ಇತರ ವಸ್ತುಗಳ ಬೆಲೆ ಏರಿಕೆ ಮಾಡಿದ್ದರೂ ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಕೇಳಿದರು.
ಕೆ.ಆರ್. ನಗರ ಕ್ಷೇತ್ರ ಬಂದು ನೋಡಲು ಸವಾಲು: ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದವರು ಲೂಟಿ ಮಾಡುವ ದುರುದ್ದೇಶದಿಂದ 2.70 ಲಕ್ಷ ಕೋಟಿಗಳಿಗೆ ಖಜಾನೆಯಲ್ಲಿ ಹಣ ಇಲ್ಲದಿದ್ದರೂ ಆಡಳಿತಾತ್ಮಕ ಮಂಜೂರಾತಿ ನೀಡಿ, ಅದರೊಂದಿಗೆ 1.66 ಲಕ್ಷ ಕೋಟಿ ರೂಗಳನ್ನು ಶಾಸಕರಿಗೆ ಅಭಿವೃದ್ದಿಗೆ ಅನುದಾನ ನೀಡುತ್ತೇವೆಂದು ಮಂಜೂರಾತಿ ಕೊಟ್ಟಿದ್ದರು, ಆ ಹೊರೆಗಳನ್ನು ಹೊತ್ತುಕೊಂಡ ನಮ್ಮ ಸರ್ಕಾರ ಅಭಿವೃದ್ದಿ ಪಥದತ್ತ ಸಾಗುತ್ತಿದ್ದು, ರಾಜ್ಯ ಸರ್ಕಾರದ ಬಳಿ ಹಣ ಇಲ್ಲದೆ ಅಭಿವೃದ್ದಿ ಕೆಲಸಗಳು ನಿಂತು ಹೋಗಿವೆ ಎಂದು ಬೊಬ್ಬೆ ಹೊಡೆಯುವವರು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಬಂದು ನೋಡಬೇಕೆಂದು ಅವರು ಸವಾಲು ಹಾಕಿದರು.
ಸರ್ಕಾರದ ವಿರುದ್ದ ಸುಳ್ಳು ಹೇಳಿಕೆ ನೀಡುವ ಬಿಜೆಪಿಯವರನ್ನು ಜನತೆ ಪ್ರಶ್ನಿಸಿಸಬೇಕಿದೆ ಎಂದ ಮುಖ್ಯಮಂತ್ರಿಗಳು ನಮ್ಮ ಮೇಲೆ ಜನರಿಗೆ ಆಕ್ರೋಶವಿದ್ದಿದ್ದರೆ ಉಪ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತಿತ್ತೆ ಎಂದು ನೆರೆದಿದ್ದ ಜನರನ್ನು ಕೇಳಿದರಲ್ಲದೆ, ತಮ್ಮ ಅಧಿಕಾರದ ಅವಧಿಯಲ್ಲಿ ಬಡವರಿಗೆ ಒಂದು ಮನೆಯನ್ನು ನೀಡದವರು ಈಗ ಬುರುಡೆ ಬಿಡುತ್ತಿದ್ದಾರೆಂದರು.
ಸಚಿವರಾದ ಕೆ. ವೆಂಕಟೇಶ್, ಎನ್. ಚೆಲುವರಾಯಸ್ವಾಮಿ, ಭೈರತಿ ಸುರೇಶ್, ಬೋಸರಾಜು, ದಿನೇಶ್‌ಗುಂಡೂರಾವ್, ಶಾಸಕರಾದ ಅನಿಲ್‌ಚಿಕ್ಕಮಾದು, ಹರೀಶ್ ಗೌಡ, ಎಚ್.ಎಂ. ಗಣೇಶ್‌ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಡಾ.ಡಿ. ತಿಮ್ಮಯ್ಯ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ಎಂ. ರಮೇಶ್, ಪುರಸಭೆ ಅಧ್ಯಕ್ಷ ಶಿವುನಾಯಕ್, ಉಪಾಧ್ಯಕ್ಷೆ ವಸಂತಮ್ಮ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ತಾಪಂ ಮಾಜಿ ಅಧ್ಯಕ್ಷರಾದ ಮಹದೇವಸ್ವಾಮಿ, ಎಚ್.ಟಿ. ಮಂಜುನಾಥ್, ತಾಲೂಕು ಶರಣ ಸಾಹಿತ್ಯ ಪರಿಷತ ಅಧ್ಯಕ್ಷ ಸಿ.ಪಿ. ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಕಾರ್ಯದರ್ಶಿ ಜಿ.ಎಸ್. ವೆಂಕಟೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಘು, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಸೀಲ್ದಾರರಾದ ಜಿ. ಸುರೇಂದ್ರಮೂರ್ತಿ, ಎಸ್. ನರಗುಂದ್ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರು ಇದ್ದರು.