ಶಿರಹಟ್ಟಿ: ಕನ್ನಡ ಸಾಹಿತ್ಯಕ್ಕೆ ಜನಪದ ಸಾಹಿತ್ಯದ ಕೊಡುಗೆ ಅಪಾರವಾದದ್ದು. ಅಕ್ಷರ ಜ್ಞಾನವಿಲ್ಲದ ನಮ್ಮ ಜನಪದರು ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಜನಪದ ಸಾಹಿತ್ಯವು ಜನಾಂಗದಿಂದ ಭಿನ್ನತೆಯನ್ನು ಪಡೆಯುತ್ತಾ ಹೋಗುತ್ತದೆ. ದೇಶದ ಸಂಸ್ಕೃತಿಯನ್ನು ತಿಳಿಯಬೇಕಾದರೆ ಜನಪದ ಸಾಹಿತ್ಯದ ಅಧ್ಯಯನ ತುಂಬಾ ಸಹಕಾರಿಯಾಗಿದೆ ಎಂದು ಉಪನ್ಯಾಸಕ ಕೊಟ್ರಯ್ಯ ಹೊಂಬಾಳ್ಮಠ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಂಭ್ರಮಾಚರಣೆ ಕಾರ್ಯಕ್ರಮದ ಪ್ರಯುಕ್ತ ಬನ್ನಿಕೊಪ್ಪ ಗ್ರಾಮದ ಜಗದ್ಗುರು ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಜಗತ್ತಿನ ಎಲ್ಲ ಭಾಷೆಗಳಿಂತ ಶ್ರೇಷ್ಠವಾದದ್ದು ಹಾಗೂ ಭಾವನಾತ್ಮಕವಾಗಿದೆ ಎಂದರು.ಕನ್ನಡ ಅತ್ಯಂತ ಶ್ರೇಷ್ಠ ಭಾಷೆ. ವಿಶ್ವದ ಯಾವುದೇ ಭಾಷೆಗಳಿಗಿಂತ ಕನ್ನಡ ಭಾಷೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಿದೆ. ಕನ್ನಡ ಸಾಹಿತ್ಯ ಎಲ್ಲ ಸಾಹಿತ್ಯಗಳಿಗಿಂತ ಶ್ರೇಷ್ಠವಾದದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿದ್ದು, ಕನ್ನಡ ಸಾರಸ್ವತ ಲೋಕದ ಕುವೆಂಪು, ದ.ರಾ. ಬೇಂದ್ರೆ, ಮಾಸ್ತಿ ಅವರ ಕೊಡುಗೆ ಅಪಾರವಾದದ್ದು. ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯಲಾಗುತ್ತದೆ ಎಂದರು.ಕನ್ನಡ ಬಗೆಗಿನ ತಿರುಳನ್ನು ಮೊದಲು ಅರಿಯಬೇಕಾದ ಅವಶ್ಯಕತೆಯಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಪ್ರಪಂಚದಲ್ಲಿ ಅತ್ಯಂತ ಸರಳ ಹಾಗೂ ಸುಂದರ ಭಾಷೆ ಎನಿಸಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಕನ್ನಡದ ಅಭಿಮಾನ ಬೆಳೆದು ಸಾಹಿತ್ಯ ಕೃಷಿಗೆ ಮುಂದೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.ವೈ.ಬಿ. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ನಮಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ವಿಶ್ವದ ಯಾವುದೇ ಭಾಷೆಯಾಗಿದ್ದರೂ ಆಡುಭಾಷೆ ಪ್ರಚಲಿತದಲ್ಲಿದ್ದರೆ ಭಾಷೆ ಉಳಿಯಲು ಸಾಧ್ಯ. ಕನ್ನಡಿಗರಾದ ನಾವು ಕನ್ನಡ ನಾಡು, ನುಡಿಯ ಬಗ್ಗೆ ಅಪಾರ ಗೌರವ ಕಾಳಜಿಯೊಂದಿಗೆ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ನವೀನಕುಮಾರ್ ಅಳವಂಡಿ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ಇಲ್ಲಿನ ಆಚರಣೆ ಎಲ್ಲವೂ ಅನನ್ಯವಾಗಿದ್ದು, ವಿಶ್ವಮಾನ್ಯವಾಗಿದೆ. ಕನ್ನಡನಾಡು ವಿವಿಧ ಧರ್ಮ, ಸಂಸ್ಕೃತಿಗಳ ಸಮಾಗಮವಾಗಿದೆ ಎಂದರು.
ನಿವೃತ್ತ ಶಿಕ್ಷಕ ಬಿ.ಎಂ. ಯರಕದ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಬಿ.ಎಂ. ಈಟಿ, ಮುಖ್ಯೋಪಾಧ್ಯಾಯ ಎಸ್.ಎಸ್. ಮಠ, ದೀಪಾ ಹೊನಗನ್ನವರ, ಮಲ್ಲೇಶ ಭಜಂತ್ರಿ, ಎಂ.ಕೆ. ರೋಣದ, ಅರುಣ ರಾವಣಕಿ, ಕುಮಾರ ಕಲ್ಮಠ, ಅಂಬಿಕಾ ಕಮ್ಮಾರ ಇದ್ದರು.