ಕನ್ನಡಪ್ರಭ ವಾರ್ತೆ ಮೈಸೂರು
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಮೈಸೂರು ವಿಭಾಗದ 12ಕ್ಕೂ ಹೆಚ್ಚು ವಿಶೇಷ ಶಾಲೆಗಳ ಬುದ್ಧಿವಿಕಲಚೇತನ ಮಕ್ಕಳು ತಮ್ಮ ವಿಶಿಷ್ಟ ಜನಪದ ನೃತ್ಯಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.
ಇದು ಕೇವಲ ಸ್ಪರ್ಧೆಯಲ್ಲ, ಪ್ರತಿಭೆ ಪ್ರದರ್ಶಿಸುವ ಅವಕಾಶ:ಮೈಸೂರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಪದೋತ್ಸವದ ಎರಡನೇ ಆವೃತ್ತಿಯು ವಿಶೇಷ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಂದೆ ಅನಾವರಣಗೊಳಿಸುವ ಮಹತ್ವದ ವೇದಿಕೆಯಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ದೊರೆತಿರುವ ಅಮೂಲ್ಯ ಅವಕಾಶವಾಗಿದೆ ಎಂದರು.
ಸಮರ್ಥನಂ ವಿಶೇಷ ಶಾಲೆಗಳ ವ್ಯವಸ್ಥಾಪಕಿ ಡಾ.ಕೆ. ಗೀತಾ ಮಾತನಾಡಿ, ನಾನು ಹಲವು ವರ್ಷಗಳಿಂದ ವಿವಿಧ ರೀತಿಯ ವಿಶೇಷಚೇತನ ಮಕ್ಕಳೊಂದಿಗೆ ಕೆಲಸ ಮಾಡಿದ್ದೇನೆ. ಪ್ರತಿಯೊಬ್ಬ ಮಗುವಿನಲ್ಲೂ ವಿಶಿಷ್ಟ ಪ್ರತಿಭೆ ಅಡಗಿದೆ. ಅವರಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ದೊರೆತಾಗ ಅವರ ಸಾಮರ್ಥ್ಯ ಹೊರಹೊಮ್ಮುತ್ತದೆ ಎಂದರು.
ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಮಾತನಾಡಿದರು.
ಪ್ರಥಮ ಬಹುಮಾನ: ಪ್ರೇರಣಾ ವಿಶೇಷ ಶಾಲೆ, ಮಂಡ್ಯ-15 ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ: ಆಶಾ ಸದನ ವಿಶೇಷ ಶಾಲೆ, ಮಂಡ್ಯ- ರು. 8 ಸಾವಿರ ಹಾಗೂ ಆಕರ್ಷಕ ಟ್ರೋಫಿ.
ಡಾ. ಸೋಮಶೇಖರ್, ಶ್ರೀನಿವಾಸ ರೆಡ್ಡಿ, ಸಾಗರ ಗುಂಬಳ್ಳಿ, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ-ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಸೌಮ್ಯ ಸೇರಿದಂತೆ ಹಲವಾರು ಗಣ್ಯರು, ವಿವಿಧ ವಿಶೇಷ ಶಾಲೆಗಳ ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.