ಬಳ್ಳಾರಿ: ನಗರ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಮೆಹಫೂಜ್ ಅಲಿಖಾನ್ ಎಸ್ಪಿ ಡಾ.ಶೋಭಾರಾಣಿ ಅವರಿಗೆ ಬುಧವಾರ ದೂರು ಸಲ್ಲಿಸಿದ್ದಾರೆ.
ನಾನು ಬೆಂಗಳೂರಿನಲ್ಲಿದ್ದಾಗ ನನ್ನ ಪರಿಚಿತರೊಬ್ಬರ ಮೊಬೈಲ್ ಮೂಲಕ ನನಗೆ ಕಾನ್ಫರೆನ್ಸ್ ಕರೆ ಮಾಡಿದ ಸತೀಶ್ ರೆಡ್ಡಿ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಾನು ಸಹ ಆತನಿಗೆ ಅವಾಚ್ಯ ಶಬ್ದಗಳಿಂದ ತಿರುಗಿ ಬೈದೆ. ಬಳ್ಳಾರಿಗೆ ಕಾಲಿಟ್ಟರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದರು. ಫೋನಿನ ಸಂಭಾಷಣೆಯ ಉದ್ದಕ್ಕೂ ನನಗೆ ಜೀವ ಬೆದರಿಕೆಯೊಡ್ಡಿದರು. ನಮ್ಮಿಬ್ಬರ ನಡುವಿನ ಸಂಭಾಷಣೆಯನ್ನು ನಾನು ರೆಕಾರ್ಡ್ ಮಾಡಿಕೊಂಡಿದ್ದು ಪೆನ್‌ಡ್ರೈವ್‌ನಲ್ಲಿ ಸಲ್ಲಿಸಿರುವೆ. ನನಗೆ ಜೀವ ಬೆದರಿಕೆ ಹಾಕಿರುವ ಸತೀಶ್ ರೆಡ್ಡಿ ಅವರು ಶಾಸಕ ಭರತ್ ರೆಡ್ಡಿ ಅವರ ಆಪ್ತ ಸಹಾಯಕ ಆಗಿರುವುದರಿಂದ ಪ್ರಭಾವಿಯಾಗಿದ್ದು ನನ್ನ ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಸತೀಶ್ ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್ಪಿ ಅವರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅಲಿಖಾನ್, ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಎಂಬಾತನನ್ನು ಈವರೆಗೆ ನಾನು ನೋಡಿಲ್ಲ. ಆತ ಯಾರೆಂದು ಸಹ ನನಗೆ ಗೊತ್ತಿಲ್ಲ. ನೀನು ಎಲ್ಲಿದ್ದೀಯಾ ಬಳ್ಳಾರಿಗೆ ಬಾ ನೋಡಿಕೊಳ್ಳುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಬಳ್ಳಾರಿಗೆ ಬಂದ ಮೇಲೆ ಫೋನ್ ಮಾಡಬೇಕು ಎಂದು ಬೆದರಿಸಿದ. ಆತನ ಮೊಬೈಲ್ ಸಂಖ್ಯೆ ಇರಲಿಲ್ಲ. ಹೀಗಾಗಿ ನನ್ನ ಪರಿಚಿತರ ಮೂಲಕ ಆತನಿಗೆ ನಾನು ಬಳ್ಳಾರಿಗೆ ಬಂದಿದ್ದೇನೆ ಎಂದು ತಿಳಿಸಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ನಗರ ಘಟಕ ಅಧ್ಯಕ್ಷ ಜಿ.ವೆಂಕಟರಮಣ ಅವರು ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಅವರನ್ನು ಭಯ ಬೀಳಿಸಿದರೆ ಬೇರೆಯವರು ಹೆದರುತ್ತಾರೆ. ಇದೇ ರೀತಿ ನಾಲ್ಕೈದು ಘಟನೆಗಳು ಜರುಗಿವೆ. ಯಾರೂ ಸಹ ದೂರು ನೀಡಿಲ್ಲ. ಒಂದು ಕುಟುಂಬ ಇವರಿಗೆ ಭಯಬಿದ್ದು ಊರು ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದರು.ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ಅಲಿಖಾನ್ ನಮ್ಮ ಪಕ್ಷದ ಕಾರ್ಯಕರ್ತ. ಅವರಿಗೆ ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಎಸ್ಪಿ ಅವರನ್ನು ಭೇಟಿ ಮಾಡಿ ದೂರು ನೀಡಲು ಬಂದಿದ್ದೇವೆ. ಅವರ ಬೆಂಬಲಕ್ಕೆ ಪಕ್ಷ ಇದೆ. ಬಳ್ಳಾರಿ ಜನರ ಶಾಂತಿ ಭಂಗವಾಗಬಾರದು. ವಿಕೋಪಕ್ಕೆ ಹೋಗುವ ಮುನ್ನ ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿ ಶೋಭಾರಾಣಿ ಅವರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು. ಪಕ್ಷದ ಮುಖಂಡರು ಹಾಗೂ ಅಲಿಖಾನ್ ಬೆಂಬಲಿಗರು ಇದ್ದರು.