ಜನಾರ್ದನ ರೆಡ್ಡಿಯ ಮಾಡಲ್ ಹೌಸ್‌ಗೆ ‘ಬೆಂಕಿ’

KannadaprabhaNewsNetwork |  
Published : Jan 24, 2026, 03:00 AM IST
ಮಾಡೆಲ್‌ ಹೌಸ್‌ಗೆ ಬೆಂಕಿ | Kannada Prabha

ಸಾರಾಂಶ

ಬ್ಯಾನರ್‌ ಗಲಾಟೆಯ ಕಾವು ಆರುವ ಮುನ್ನವೇ ಶುಕ್ರವಾರ ಸಂಜೆ ನಗರ ಹೊರವಲಯದ ರುಕ್ಮಣಮ್ಮ ಚೆಂಗಾರೆಡ್ಡಿ ಬಡಾವಣೆಯಲ್ಲಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿಯವರ ಮಾದರಿ ನಿವಾಸದಲ್ಲಿ (ಮಾಡಲ್ ಹೌಸ್) ಬೆಂಕಿ ಅವಘಡ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬ್ಯಾನರ್‌ ಗಲಾಟೆಯ ಕಾವು ಆರುವ ಮುನ್ನವೇ ಶುಕ್ರವಾರ ಸಂಜೆ ನಗರ ಹೊರವಲಯದ ರುಕ್ಮಣಮ್ಮ ಚೆಂಗಾರೆಡ್ಡಿ ಬಡಾವಣೆಯಲ್ಲಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿಯವರ ಮಾದರಿ ನಿವಾಸದಲ್ಲಿ (ಮಾಡಲ್ ಹೌಸ್) ಬೆಂಕಿ ಅವಘಡ ಸಂಭವಿಸಿದೆ.

ಕಂಟೋನ್ಮೆಂಟ್ ಪ್ರದೇಶದ ತಮ್ಮ ಮಾಲೀಕತ್ವದ ಜಿ-ಸ್ಕ್ಯಾರ್ ಲೇಔಟ್‌ನಲ್ಲಿ ಜನಾರ್ದನ ರೆಡ್ಡಿ ಸುಮಾರು ₹3 ಕೋಟಿ ವೆಚ್ಚದಲ್ಲಿ ಮಾದರಿ ಮನೆ ನಿರ್ಮಿಸಿದ್ದರು. ಲೇಔಟ್‌ನಲ್ಲಿ ಮಾದರಿ ಮನೆಗಳನ್ನು ನಿರ್ಮಿಸುವ ಸಂಬಂಧ ಗ್ರಾಹಕರಿಗೆ ತೋರಿಸಲು ಈ ಮನೆ ನಿರ್ಮಿಸಲಾಗಿತ್ತು. ಶುಕ್ರವಾರ ಸಂಜೆ ದುಷ್ಕರ್ಮಿಗಳು ಸ್ಥಳಕ್ಕೆ ತೆರಳಿ, ರೆಡ್ಡಿಯ ಮಾಡೆಲ್‌ ಹೌಸ್‌ನ ಬಾಗಿಲು, ಕಿಟಕಿಗಳನ್ನು ಮುರಿದು ಹಾಕಿದ್ದು, ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಬಳಿಕ, ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಹೊತ್ತಿಗೆ ಮನೆಯ ಕಿಟಕಿಗಳು, ಕಂಬಗಳು ಸೇರಿದಂತೆ ಕಟ್ಟಿಗೆಯಿಂದ ತಯಾರಿಸಿದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ರವಿಕುಮಾರ್ ಸೇರಿ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ, ಜನಾರ್ದನ ರೆಡ್ಡಿ ಮಾಡಲ್ ಹೌಸ್‌ಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾದ ಯುವಕನ ಫೋಟೋವನ್ನು ಮಾಧ್ಯಮಗಳಿಗೆ ತೋರಿಸಿದರು.

ಬಳ್ಳಾರಿಯಲ್ಲಿ ಬ್ಯಾನರ್‌ ಗಲಾಟೆ ನಡೆದು ಗುಂಡಿನ ದಾಳಿ ನಡೆದ 23 ದಿನಗಳ ಬಳಿಕ ಈ ಘಟನೆ ನಡೆದಿದ್ದು, ಮತ್ತೊಂದು ಸುತ್ತಿನ ಆರೋಪ- ಪ್ರತ್ಯಾರೋಪಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ.

ಭಸ್ಮಾಸುರನಿಂದ ಬೆಂಕಿ:

ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಜನಾರ್ದನ ರೆಡ್ಡಿ ಸಹೋದರ ಹಾಗೂ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರೇ ಜನಾರ್ದನ ರೆಡ್ಡಿ ಮನೆಗೆ ಬೆಂಕಿ ಹಚ್ಚಿಸಿದ್ದಾರೆ. ಬ್ಯಾನರ್ ಗಲಭೆ ವೇಳೆ ಜನಾರ್ದನ ರೆಡ್ಡಿಯ ಮನೆಯನ್ನು ಸುಟ್ಟುಹಾಕುವುದಾಗಿ ಹೇಳಿದ್ದರು. ಜನಾರ್ದನ ರೆಡ್ಡಿಯ ನಿವಾಸ ಸುಟ್ಟು ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ, ಮಾಡಲ್ ಹೌಸ್‌ಗೆ ಬೆಂಬಲಿಗರ ಮೂಲಕ ಬಳ್ಳಾರಿಯ ಭಸ್ಮಾಸುರ ಬೆಂಕಿ ಹಚ್ಚಿಸಿದ್ದಾರೆ ಎಂದು ಕಿಡಿಕಾರಿದರು.

ರೆಡ್ಡಿ ನಿವಾಸಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಎಸ್ಪಿಗೆ ದೂರು ನೀಡುವುದಾಗಿ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

ಶಾಸಕ ಜನಾರ್ದನ ರೆಡ್ಡಿ ಬೆಂಗಳೂರಿನಲ್ಲಿದ್ದು ವಿಷಯ ತಿಳಿಯುತ್ತಿದ್ದಂತೆಯೇ ಬಳ್ಳಾರಿಗೆ ಬರುತ್ತಿದ್ದಾರೆ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ