ಆಡಳಿತ ಸುಧಾರಣೆಗೆ ’ಜನಸ್ಪಂದನ’ ಸಹಕಾರಿ

KannadaprabhaNewsNetwork | Published : Apr 22, 2025 1:48 AM

ಸಾರಾಂಶ

ಶಿವಮೊಗ್ಗ: ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು ಮತ್ತು ಆಡಳಿತ ಸುಧಾರಣೆಯಲ್ಲಿ ’ಜನಸ್ಪಂದನ’ ಕಾರ್ಯಕ್ರಮ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಶಿವಮೊಗ್ಗ: ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು ಮತ್ತು ಆಡಳಿತ ಸುಧಾರಣೆಯಲ್ಲಿ ’ಜನಸ್ಪಂದನ’ ಕಾರ್ಯಕ್ರಮ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ನಾಗರಿಕರ ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೋಮವಾರ ಹೊಸನಗರದ ಈಡಿಗರ ಸಭಾಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ‘ಜನಸ್ಪಂದನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುವುದರಿಂದ ಎಲ್ಲ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿ ಹಾಜರಾಗುವ ಕಾರಣ ಜನರ ಸಮಸ್ಯೆಗಳು ಅರ್ಥ ಆಗುತ್ತವೆ. ಪರಹಾರಕ್ಕೆ ಅನೇಕ ಕಾನೂನು ಇದ್ದು, ಅವುಗಳನ್ನು ಅನ್ವಯಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.

ಆಡಳಿತ ಸುಧಾರಣೆಯಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಯಾವುದೇ ಸಮಸ್ಯೆಗಳಿದ್ದರೂ ಚರ್ಚಿಸಿ, ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ ಎಂದರು.ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ನೇರವಾಗಿ ಮಾತನಾಡಿ, ಇತ್ಯರ್ಥ ಪಡಿಸಲು ಇಡೀ ಜಿಲ್ಲಾಡಳಿತ ಯಂತ್ರವೇ ಇಂದು ಇಲ್ಲಿ ಹಾಜರಿದ್ದು, ಮುಕ್ತ ಚರ್ಚೆ ನಡೆಯಲಿ, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮವಾಗಲಿ ಎಂದು ಹೇಳಿದರು.ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು, ಹೊಸನಗರ ಪ.ಪಂ. ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಚಿದಂಬರ, ಕೆಡಿಪಿ ಸದಸ್ಯರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ, ಜಿ.ಪಂ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಸಾಗರ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಹೊಸನಗರ ಪ್ರಭಾರ ಎಸಿ ರಶ್ಮಿ, ಪ.ಪಂ, ಗ್ರಾ.ಪಂಗಳ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಹಾಜರಿದ್ದರು.ಅರ್ಜಿಗಳ ಮಹಾಪೂರ

ಕನ್ನಡಪ್ರಭ ವಾರ್ತೆ ಹೊಸನಗರ

ನಾಗರಿಕರ ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೋಮವಾರ ಹೊಸನಗರದ ಈಡಿಗರ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ನೂರಾರು ಅರ್ಜಿಗಳು ಸಲ್ಲಿಕೆಯಾದವು. ಕೆಲವು ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಯಿತು. ಇನ್ನೂ ಕೆಲವು ಪ್ರಕರಣಗಳನ್ನು ಮುಂದಿನ ಕ್ರಮಕ್ಕೆ ಇಲಾಖೆಗಳಿಗೆ ಸೂಚನೆ ನೀಡಲಾಯಿತು.

ಸೊರಬ ತಾಲೂಕು ತಲಗಡ್ಡೆ ಗ್ರಾಮದ ಗಣಪತಿ.ಬಿ ಎಂಬುವವರು ತಮ್ಮ ಜಮೀನಿಗೆ ಗಂಗಾ ಕಲ್ಯಾಣ ಯೋಜನೆಯಡಿ 2023ರಲ್ಲೇ ಬೋರ್‌ವೆಲ್ ಮಂಜೂರಾಗಿದೆ. ಆದರೂ ಇದುವರೆಗೆ ಬೋರ್ ಕೊರೆದಿಲ್ಲ, ಶೀಘ್ರದಲ್ಲೇ ಬೋರ್ ಕೊರೆಸಬೇಕೆಂದು ಅರ್ಜಿ ಸಲ್ಲಿಸಿದರು. ಸಚಿವರು ಪ್ರತಿಕ್ರಿಯಿಸಿ ಶೀಘ್ರದಲ್ಲೇ ಬೋರ್‌ವೆಲ್ ಕೊರೆಸುವಂತೆ ಸೂಚನೆ ನೀಡಿದರು.

ಮಳವಳ್ಳಿ ಗ್ರಾಮದ 80 ವರ್ಷದ ಪಾರ್ವತಮ್ಮ ಎಂಬುವವರನ್ನು 2021ರಲ್ಲಿ ಪಡಿತರ ಚೀಟಿಯಲ್ಲಿ ಮರಣ ಹೊಂದಿರುವುದಾಗಿ ನಮೂದಿಸಿ ಪಡಿತರ ಚೀಟಿ ರದ್ದುಪಡಿಸಲಾಗಿದೆ. ತಾವು ಜೀವಂತವಾಗಿದ್ದು ವಂಚಿತರಾಗಿದ್ದ ಸೌಲಭ್ಯಗಳನ್ನು ನೀಡಬೇಕೆಂದು ಖುದ್ದು ಸಚಿವರಿಗೆ ಅರ್ಜಿ ಸಲ್ಲಿಸಿದರು. ಸಚಿವರು ಪ್ರತಿಕ್ರಿಯಿಸಿ, ಈ ಅಚಾತುರ್ಯವೆಸಗಿ ತೊಂದರೆಪಡಿಸಿದ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ರಂಗನಾಥ್ ಎಂಬುವವರು ಅರ್ಜಿ ಸಲ್ಲಿಸಿ ಹೊಸನಗರದ 6ನೇ ವಾರ್ಡ್‌ನಲ್ಲಿ ಅಸಮರ್ಪಕ ವಿದ್ಯುತ್ ಸಂಪರ್ಕದಿಂದಾಗಿ ತುಂಬಾ ತೊಂದರೆಯಾಗುತ್ತಿದೆ. ರಿಪ್ಪನ್ ಪೇಟೆಯಲ್ಲಿ ಎಕ್ಸ್‌ಪ್ರೆಸ್ ಲೈನ್ ಅಳವಡಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

ಮುಂಬಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆ ಹೆಚ್ಚಿದ್ದು ಬಗೆಹರಿಸುವಂತೆ ಮುಂಬಾರು ಗ್ರಾ.ಪಂ. ಅಧ್ಯಕ್ಷರು ಮನವಿ ಮಾಡಿದರು.

ಜಯನಗರದಲ್ಲಿ ಖಬರಸ್ತಾನಕ್ಕೆ ಜಾಗ ನೀಡಬೇಕೆಂದು ಅಬ್ದುಲ್ ಖಾದರ್ ಮನವಿ ಮಾಡಿದರು.

ವಿದ್ಯುತ್, ಕುಡಿಯುವ ನೀರು, ಬಗರ್ ಹುಕುಂ ಭೂಮಿ ಮಂಜೂರಾತಿ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಒಟ್ಟು 116 ಅರ್ಜಿಗಳನ್ನು ಸ್ವೀಕರಿಸಲಾಯಿತು.

ಸಚಿವರು, ಶಾಸಕರು ಅಹವಾಲು ಆಲಿಸಿ, ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

Share this article