ಜನಿವಾರ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ

KannadaprabhaNewsNetwork |  
Published : Apr 22, 2025, 01:48 AM IST
ಶಿವಮೊಗ್ಗ, ಬೀದರ್ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಜಿಲ್ಲಾ ಬ್ರಾಹ್ಮಣ ಮಹಾ ಸಭಾ, ವಿವಿಧ ವಿಪ್ರ ಸಂಘಟನೆಗಳು, ವಿಪ್ರ ವಕೀಲರ ವೇದಿಕೆಗಳ ಸಹಯೋಗದಲ್ಲಿ ಶಿವಮೊಗ್ಗದಲ್ಲಿ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ  ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಶಿವಮೊಗ್ಗ: ಶಿವಮೊಗ್ಗ, ಬೀದರ್ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಸೋಮವಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ, ವಿವಿಧ ವಿಪ್ರ ಸಂಘಟನೆಗಳು, ವಿಪ್ರ ವಕೀಲರ ವೇದಿಕೆಗಳ ಸಹಯೋಗದಲ್ಲಿ ತಿಲಕನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ: ಶಿವಮೊಗ್ಗ, ಬೀದರ್ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಸೋಮವಾರ ಜಿಲ್ಲಾ ಬ್ರಾಹ್ಮಣ ಮಹಾಸಭಾ, ವಿವಿಧ ವಿಪ್ರ ಸಂಘಟನೆಗಳು, ವಿಪ್ರ ವಕೀಲರ ವೇದಿಕೆಗಳ ಸಹಯೋಗದಲ್ಲಿ ತಿಲಕನಗರದ ಶ್ರೀ ರಾಘವೇಂದ್ರಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ಕೆ.ನಟರಾಜ ಭಾಗವತ್ ಮಾತನಾಡಿ, ತಪಾಸಣೆ ಮಾಡುವ ನೆಪದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರಕ್ಕೆ ಕೈ ಹಾಕುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದ್ದು, ಅದರ ಕುರಿತು ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ತೀರ್ಥಹಳ್ಳಿಯ ಬಾಳಗಾರು ಜಯತೀರ್ಥಾಚಾರ್ ಮಾತನಾಡಿ, ಜನಿವಾರ ತುಂಡು ಮಾಡಿ ವಿಪ್ರರ ಪಾವಿತ್ರ್ಯತೆಗೆ ಧಕ್ಕೆ ಮಾಡಲಾಗಿದೆ. ಎಲ್ಲ ದೇವರ ಸಾನ್ನಿಧ್ಯ ಜನಿವಾರದಲ್ಲಿರುತ್ತದೆ. ಜನಿವಾರ ತುಂಡು ಮಾಡಿದ್ದರಿಂದ ದೇವರನ್ನೇ ತುಂಡು ಮಾಡಿದ ಹಾಗೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಹೆಣ್ಣಿಗೆ ಮಾಂಗಲ್ಯ ಹೇಗೆ ಪವಿತ್ರವೋ ಹಾಗೆ ಜನಿವಾರ ಬ್ರಾಹ್ಮಣರಿಗೆ. ಜನಿವಾರ ತುಂಡು ಮಾಡಿದ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ವಕೀಲ ಅಶೋಕ್ ಜಿ.ಭಟ್ ಮಾತನಾಡಿ, ಜನಿವಾರ ತುಂಡರಿಸಿದ್ದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಇದು ಸಂವಿಧಾನದ ಮೂಲಭೂತ ಹಕ್ಕಿಗೆ ಚ್ಯುತಿ ತಂದಿದೆ. ಶಾಸಕರು ವಿಧಾನಮಂಡಲದ ಅಧಿವೇಶನದಲ್ಲಿ ಇದರ ಪ್ರಸ್ತಾಪ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಬ್ರಾಹ್ಮಣ ಸಮಾಜ ಅನಾದಿ ಕಾಲದಿಂದಲೂ ಹಿಂದೂ ಸಮಾಜಕ್ಕೆ ಶಕ್ತಿ ತುಂಬುತ್ತಿದ್ದಲ್ಲದೆ, ಮಾರ್ಗದರ್ಶನವನ್ನೂ ಮಾಡುತ್ತ ಬಂದಿದೆ. ಬ್ರಾಹ್ಮಣರು ದೇಶದ ಆಸ್ತಿ. ಕೌಟಿಲ್ಯ ತನ್ನ ಅರ್ಥಶಾಸ್ತ್ರದ ಮೂಲಕ ಇಡೀ ಪ್ರಪಂಚಕ್ಕೆ ಕೊಡುಗೆ ನೀಡಿದ್ದನ್ನು ನೆನಪಿಸಿಕೊಳ್ಳಬೇಕಾಗಿದೆ. ಜನಿವಾರ ಕತ್ತರಿಸಿರುವುದು ಒಂದು ದುಷ್ಕೃತ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನಿವಾರ ತುಂಡರಿಸಿದ ಹೊಣೆಹೊರಬೇಕು. ಇಡೀ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಇಂದು ನಾವು ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ನಮಗೆ ಉಗ್ರ ಸ್ವರೂಪ ತೋರಿಸಲು ಅವಕಾಶ ನೀಡಬೇಡಿ ಎಂದು ಎಚ್ಚರಿಕೆ ನೀಡಿದರು.

ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಎಸ್.ರಘುರಾಮ್, ಮುಖಂಡರಾದ ಕುಷ್ಟಗಿ ವಾಸುದೇವಾಚಾರ್ಯ, ಎಂ.ಶಂಕರ್, ವೆಂಕಟೇಶ್ ರಾವ್, ಎಸ್.ದತ್ತಾತ್ರಿ, ಸುರೇಖಾ ಮುರಳೀಧರ್, ಡಾ.ಕೆ.ಎಸ್.ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ