ರಾಜ್ಯದಲ್ಲಿಯೇ ಲಕ್ಷ್ಮೇಶ್ವರ ಟಿಎಪಿಸಿಎಂಎಸ್ ಅತಿಹೆಚ್ಚು ರೈತರಿಂದ ನೋಂದಣಿ ಮಾಡಿಕೊಂಡು, ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಸರ್ಕಾರದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಇನ್ನೂ ಹೆಚ್ಚು ಖರೀದಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಣ್ಣ ಉಪನಾಳ
ಲಕ್ಷ್ಮೇಶ್ವರ: ಮೆಕ್ಕೆಜೋಳ ಮಾರಾಟ ಮಾಡಲು ಪಟ್ಟಣದ ಟಿಎಪಿಸಿಎಂಎಎಸ್‌ನಲ್ಲಿ ಹೆಸರು ನೋಂದಾಯಿಸಿದ ರೈತರು ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. ಹೆಸರು ನೋಂದಾಯಿಸಿದ ಎಲ್ಲ ರೈತರ ಮೆಕ್ಕೆಜೋಳ ಖರೀದಿ ಮಾಡಲು ಸಿದ್ಧರಿದ್ದೇವೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಣ್ಣ ಉಪನಾಳ ತಿಳಿಸಿದರು.
ಭಾನುವಾರ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಉಂಟಾಗಿರುವ ಗೊಂದಲ ಪರಿಹರಿಸಿ ಮಾತನಾಡಿದರು.ನಮ್ಮಲ್ಲಿ ಹೆಸರು ನೋಂದಾಯಿಸಿ ರೈತರಿಂದ ಎಥೆನಾಲ್, ಫೌಲ್ಟ್ರೀ ಹಾಗೂ ಕೆಎಂಎಫ್‌ನವರು ಮೆಕ್ಕೆಜೋಳ ಖರೀದಿ ಮಾಡಲು ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತೇವೆ. ಎಥೆನಾಲ್ ಕಂಪನಿ ಹಾಗೂ ಫೌಲ್ಟ್ರೀ ಕಂಪನಿಗಳು ನಮ್ಮಲ್ಲಿ ಮೆಕ್ಕೆಜೋಳ ಖರೀದಿಸಲು ಆರಂಭ ಮಾಡಿವೆ.
ಆದರೆ ಭಾನುವಾರ ಎಥೆನಾಲ್ ಕಂಪನಿ ಅವರು ಮೆಕ್ಕೆಜೋಳ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೆಲ ರೈತರು ಫೌಲ್ಟ್ರೀ ಕಂಪನಿಯು ತನ್ನ ಖರೀದಿ ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಯಾಕೆಂದರೆ ರೈತರು ಈ ರೀತಿ ಗದ್ದಲ ಮಾಡುವುದರಿಂದ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ. ಆದ್ದರಿಂದ ರೈತರು ವಿನಾಕಾರಣ ಗೊಂದಲಕ್ಕೆ ಒಳಗಾಗಬಾರದು.ರಾಜ್ಯದಲ್ಲಿಯೇ ಲಕ್ಷ್ಮೇಶ್ವರ ಟಿಎಪಿಸಿಎಂಎಸ್ ಅತಿಹೆಚ್ಚು ರೈತರಿಂದ ನೋಂದಣಿ ಮಾಡಿಕೊಂಡು, ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕ ಮಾಡಿ ಇನ್ನೂ ಹೆಚ್ಚು ಖರೀದಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಎಲ್ಲ ರೈತರಿಂದ ಮೆಕ್ಕೆಜೋಳ ಖರೀದಿ ಮಾಡಲು ಸಿದ್ಧರಿದ್ದೇವೆ. ರೈತರು ಅವರಿವರ ಮಾತು ಕೇಳಿ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.
ಕೆಲ ರೈತರು ಮಾತನಾಡಿ, ನಾವು ಕಳೆದ 3- 4 ದಿನಗಳಿಂದ ಟ್ರ್ಯಾಕ್ಟರ್‌ನಲ್ಲಿ ಮೆಕ್ಕೆಜೋಳ ಹೇರಿ ನಿಲ್ಲಿಸಿದ್ದೇವೆ. ಈಗ ಎಥೆನಾಲ್ ಕಂಪನಿಯು ಖರೀದಿಸಲು ಮೀನಮೇಷ ಮಾಡುತ್ತಿದ್ದಾರೆ. ಹೀಗಾಗಿ ಫೌಲ್ಟ್ರೀಯವರು ಖರೀದಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದೇವೆ. ಆದರೆ ನೀವು ಬಂದು ನಮ್ಮ ಗೊಂದಲ ಬಗೆಹರಿಸಿದ್ದರಿಂದ ಮೆಕ್ಕೆಜೋಳ ಖರೀದಿಸಲು ನಮ್ಮದು ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದರಿಂದ ಮತ್ತೆ ಖರೀದಿ ಸಾಂಗವಾಗಿ ನಡೆಯಿತು.ರಾಜು ಸಾಲಮನಿ, ಬಸವರಾಜ ಕೊರಕನವರ, ಬಸವರಾಜ ಕರೆಣ್ಣವರ, ರವಿ ಬೋರ್ಜಿ, ಶಿವಾನಂದ ಕರೆಣ್ಣವರ, ಲೋಕೇಶ್ ಕುರಿ ನಾದಿಗಟ್ಟಿ, ಮಹಾಂತ ಗೌಡ ಪಾಟೀಲ ಇದ್ದರು.