ಅರಣ್ಯ ಭೂಮಿ ಹಕ್ಕಿನ ಕುರಿತಾಗಿ ಅರಣ್ಯವಾಸಿಗೆ ಕಾನೂನು ಅರಿವು ಅವಶ್ಯ. ಅರಣ್ಯವಾಸಿಯು ಕಾನೂನಿನ ಸಂಕೋಲೆಯಲ್ಲಿ ಸಿಲುಕಿರುವ ಇಂದಿನ ಸಂದರ್ಭದಲ್ಲಿ ಅರಣ್ಯವಾಸಿಯು ಕಾನೂನಿನ ಜ್ಞಾನ ಪಡೆಯುವುದು ಮೂಲಭೂತ ಕರ್ತವ್ಯವಾಗಿದೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಅರಣ್ಯ ಭೂಮಿ ಹಕ್ಕಿನ ಕುರಿತಾಗಿ ಅರಣ್ಯವಾಸಿಗೆ ಕಾನೂನು ಅರಿವು ಅವಶ್ಯ. ಅರಣ್ಯವಾಸಿಯು ಕಾನೂನಿನ ಸಂಕೋಲೆಯಲ್ಲಿ ಸಿಲುಕಿರುವ ಇಂದಿನ ಸಂದರ್ಭದಲ್ಲಿ ಅರಣ್ಯವಾಸಿಯು ಕಾನೂನಿನ ಜ್ಞಾನ ಪಡೆಯುವುದು ಮೂಲಭೂತ ಕರ್ತವ್ಯವಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಧಾನ ಸಂಚಾಲಕಿ ರಂಜಿತಾ ರವೀಂದ್ರ ಹೇಳಿದರು.ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ರಾಮೇರ‍್ವ ದೇವಾಲಯ ಇಟಗಿ ಸಭಾಂಗಣದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾದ ಅಂಗವಾಗಿ ಜರುಗಿದ ಅರಣ್ಯವಾಸಿಯ ಮನೆ ಮನೆಗೆ ಕಾನೂನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸಾಮಾಜಿಕ ನ್ಯಾಯ ಮತ್ತು ದೇಶದ ಆಹಾರ ಉತ್ಪನ್ನ ವೃದ್ಧಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಅರಣ್ಯ ಹಕ್ಕು ಕಾಯಿದೆ ಕಾನೂನಿನ ಅನುಷ್ಠಾನದಲ್ಲಿ ವೈಫಲ್ಯವಾಗಿದೆ. ಅರಣ್ಯ ಭೂಮಿ ಸಾಗುವಳಿ ಅವಲಂಬಿತ ಅರಣ್ಯವಾಸಿಗಳಿಗೆ ಸಾಂದರ್ಭಿಕ ದಾಖಲೆ ಅಡಿಯಲ್ಲಿ ಸಾಗುವಳಿ ಹಕ್ಕನ್ನು ನೀಡಲು ಅವಕಾಶವಿದೆ. ಈ ಕುರಿತು ಅರಣ್ಯವಾಸಿಗಳಿಗೆ ಕಾನೂನು ಜ್ಞಾನ ವೃದ್ಧಿಸುವ ಉದ್ದೇಶದಿಂದ ಅರಣ್ಯವಾಸಿಗಳ ಕಾನೂನು ಜಾಗೃತಿ ಅಂಗವಾಗಿ ಅರಣ್ಯವಾಸಿಯ ಮನೆ ಮನೆಗೆ ಕಾನೂನು ಎಂಬ ವಿನೂತನ ಕಾರ್ಯಕ್ರಮ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಾಲೂಕಿನಾದ್ಯಂತ ೧೦೮೬೦ ಅರ್ಜಿಗಳು ಸ್ವೀಕರಿಸ್ಪಟ್ಟು, ಅವುಗಳಲ್ಲಿ ೧೦,೩೩೪ ಅರ್ಜಿಗಳು, ಅಂದರೇ ಶೇ.೯೫ರಷ್ಟು ಅರ್ಜಿ ತಿರಸ್ಕಾರವಾಗಿದೆ. ಬಂದಿರುವ ಅರ್ಜಿಗಳಲ್ಲಿ ೧೭ ಪಾರಂಪರಿಕ ಅರಣ್ಯವಾಸಿಗಳ ಅರ್ಜಿ ಸೇರಿ ಕೇವಲ ೧೩೮ ಸಾಗುವಳಿ ಹಕ್ಕು ನೀಡಲಾಗಿದೆ. ಬಂದಿರುವ ಅರ್ಜಿಗಳಲ್ಲಿ ಶೇ.೧.೨೭ರಷ್ಟು ಅರಣ್ಯವಾಸಿಗಳಿಗೆ ಮಾತ್ರ ಸಾಗುವಳಿ ಹಕ್ಕು ದೊರಕಿದೆ ಎಂದರು.
ಜಿಲ್ಲ್ಲಾ ಸಂಚಾಲಕ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಪ್ರಾಸ್ತಾವಿಕ ಮಾತನಾಡಿದರು. ಗೋವಿಂದ ರಾಜ ಹೆಗಡೆ, ಅಶೋಕ ನಾಯ್ಕ, ಚಂದ್ರಕಾಂತ ನಾಯ್ಕ ಇಟಗಿ, ಸುನೀಲ್ ನಾಯ್ಕ ಸಂಪಖಂಡ ಮಾತನಾಡಿದರು. ಶೇಖ್ ಸೈನ್ ಸಾಬ ಇಟಗಿ, ರಾಜು ಎಂ. ನಾಯ್ಕ, ಬಿ.ಡಿ. ನಾಯ್ಕ, ಚಂದ್ರಶೇಖರ್ ನಾಯ್ಕ, ಶಿವಾನಂದ ಹೊಸೂರು, ನಾಗರಾಜ ಮರಾಠಿ ದೊಡ್ಮನೆ, ಸಿರಿ ನಾಯ್ಕ, ಆರ್.ಟಿ. ನಾಯ್ಕ ಮುಂತಾದವರಿದ್ದರು. ಧನಂಜಯ್ ನಾಯ್ಕ ವಂದಿಸಿದರು.