ಕುಷ್ಟಗಿ: ತಾಲೂಕಿನ ನಾಗರಿಕರ ಸಮಸ್ಯೆಗಳ ಇತ್ಯರ್ಥಪಡಿಸಲು ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕಾಡಳಿತದಿಂದ ಆಯೋಜಿಸಿದ ಜನಸ್ಪಂದನ ಸಭೆಯಲ್ಲಿ ನಾಗರಿಕರು ದೂರಿನ ಅಹವಾಲು ಸಲ್ಲಿಸಿ, ಅಧಿಕಾರಿಗಳ ವಿರುದ್ಧ ದೂರಿನ ಮಳೆ ಸುರಿಸಿದರು.
ಖುದ್ದು ಸಮಸ್ಯೆ ಆಲಿಸಿದರು: ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರು ಪ್ರತಿಯೊಬ್ಬರ ಸಮಸ್ಯೆ ಆಲಿಸಿ, ಬಗೆಹರಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶೀಘ್ರದಲ್ಲಿ ಪರಿಹಾರವಾಗದ ಅರ್ಜಿಗಳಿಗೆ 15 ದಿನ ಕಾಲವಕಾಶ ನೀಡಿದರು. ಒಟ್ಟು 200ಕ್ಕೂ ಅಧಿಕ ಅಹವಾಲು ಅರ್ಜಿಗಳು ಸ್ವೀಕೃತಗೊಂಡವು.
ಅಹವಾಲು ನೋಂದಣಿ: ಅಹವಾಲು ಸ್ವೀಕರಿಸುವ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಿತು. ನೋಂದಣಿಗೆ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು. ಗ್ರಾಮಸ್ಥರು ಸಾಲಾಗಿ ಬಂದು ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದರು. ಆನಂತರ ಅಹವಾಲು ಅರ್ಜಿಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಆನ್‌ಲೈನ್ ಪೋರ್ಟಲ್ ಮೂಲಕ ಅಪ್‌ಲೋಡ್ ಮಾಡಿದರು.ಮಳಿಗೆಗಳ ಉದ್ಘಾಟನೆ: ಜನಸ್ಪಂದನ ಸಭೆಗೆ ಆಗಮಿಸುವ ನಾಗರಿಕರಿಗೆ ಸರ್ಕಾರಿ ಇಲಾಖೆಗಳಾದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ಸೇರಿದಂತೆ ವಿವಿಧ ಇಲಾಖೆಯವರು ಮಾಹಿತಿ ಮಳಿಗೆಗಳನ್ನು ತೆರೆಯಲಾಗಿತ್ತು. ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಉದ್ಘಾಟಿಸಿದರು. ಆರೋಗ್ಯ ಇಲಾಖೆ ಮಳಿಗೆಯಲ್ಲಿ ಶಾಸಕರು ಬಿಪಿಯನ್ನು ಪರೀಕ್ಷೆ ಮಾಡಲಾಯಿತು. ಆನಂತರ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ದೌಡ್ಡನಗೌಡ ಪಾಟೀಲ್ ಚಾಲನೆ ನೀಡಿದರು.