
ಕನ್ನಡಪ್ರಭ ವಾರ್ತೆ ಕಾರವಾರ
ಈ ಸಂದರ್ಭ ಮಾತನಾಡಿದ ಬೋಟ್ ಮಾಲೀಕರು, ಮನೆಯಲ್ಲಿದ್ದ ಹೆಣ್ಣುಮಕ್ಕಳ ಒಡವೆಗಳನ್ನು ಅಡವಿಟ್ಟು, ಸಾಲ ಮಾಡಿ ಬೋಟ್ ಖರೀದಿಸಿ ಜೀವನ ನಡೆಸುತ್ತಿದ್ದೇವೆ. ಆದರೆ ಈಗ ಅಧಿಕಾರಿಗಳು ಏಕಾಏಕಿ ನಮ್ಮ ವ್ಯವಹಾರವನ್ನು ಬಂದ್ ಮಾಡಿಸಿದರೆ ನಾವು ಬದುಕುವುದು ಹೇಗೆ? ಎಂದು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ತದಡಿ ಭಾಗದಲ್ಲಿ ಮೀನುಗಾರಿಕೆ ಉದ್ಯಮ ಕುಸಿತಗೊಂಡಿರುವ ಹಿನ್ನೆಲೆ ಅನೇಕ ಮೀನುಗಾರರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಜೀವನ ಸಾಗಿಸಲು ಪರ್ಯಾಯ ದಾರಿಯಾಗಿ, ಕಳೆದ 5-6 ವರ್ಷಗಳ ಹಿಂದೆ ₹20ರಿಂದ 25 ಲಕ್ಷ ಬಂಡವಾಳ ಹಾಕಿ, ಸಾಲ ಮಾಡಿ ಪ್ರವಾಸಿ ಬೋಟ್ ಖರೀದಿಸಿ ವ್ಯವಹಾರ ಆರಂಭಿಸಿದ್ದರು. ಇಷ್ಟು ವರ್ಷಗಳ ಕಾಲ ಯಾವುದೇ ತೊಂದರೆಯಿಲ್ಲದೆ ಪ್ರವಾಸೋದ್ಯಮ ನಡೆಸಿಕೊಂಡು ಬರಲಾಗಿತ್ತು. ಆದರೆ ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ, ಬಂದರು ಇಲಾಖೆ ಹಾಗೂ ಕರ್ನಾಟಕ ಕರಾವಳಿ ಕಾವಲು ಪಡೆ ಅಧಿಕಾರಿಗಳು ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.ನಾಲ್ಕು ದಿನಗಳ ಹಿಂದೆ ಸಮುದ್ರದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಯನ್ನು ನೆಪವನ್ನಾಗಿ ಮಾಡಿಕೊಂಡು ನಮ್ಮ ಉದ್ಯಮವನ್ನು ಬಂದ್ ಮಾಡಲು ಯತ್ನಿಸಲಾಗುತ್ತಿದೆ ಎಂದು ಮಾಲೀಕರು ಆರೋಪಿಸಿದ್ದಾರೆ. ಮೃತ ವ್ಯಕ್ತಿಯ ಕುಟುಂಬದವರೇ ಇದು ಬೋಟ್‌ನಿಂದ ಸಂಭವಿಸಿದ ಸಾವಲ್ಲ, ಆಕಸ್ಮಿಕ ಸಾವು ಎಂದು ಹೇಳಿರುವ ವಿಡಿಯೋ ಹಾಗೂ ಲಿಖಿತ ದಾಖಲೆಗಳು ನಮ್ಮ ಬಳಿ ಇವೆ. ಆದರೂ, ಕರಾವಳಿ ಕಾವಲು ಪಡೆಯ ಪಿಎಸ್‌ಐ ಅನೂಪ್ ಯಾವುದೇ ಲಿಖಿತ ನೋಟಿಸ್ ನೀಡದೇ ಮೌಖಿಕವಾಗಿ ಬೆದರಿಸಿ ಉದ್ಯಮ ಬಂದ್ ಮಾಡುವಂತೆ ಸೂಚಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟು 32 ಬೋಟ್‌ಗಳ ಪೈಕಿ ಕೇವಲ 6 ಬೋಟ್‌ಗಳಿಗೆ ಅನುಮತಿ ನೀಡಲಾಗಿದ್ದು, ಉಳಿದವರಿಗೆ ಅದೇ ದಾಖಲೆಗಳಿದ್ದರೂ ಅನುಮತಿ ನಿರಾಕರಿಸಲಾಗುತ್ತಿದೆ. ಕೆಲವು ಕಾಣದ ಕೈಗಳು ಏಕಸ್ವಾಮ್ಯ ಸಾಧಿಸುವ ಉದ್ದೇಶದಿಂದ ಮತ್ತು ಹಣ ವಸೂಲಿ ಮಾಡುವ ದುರುದ್ದೇಶದಿಂದ ನಮ್ಮ ಮೇಲೆ ಒತ್ತಡ ಹೇರುತ್ತಿವೆ ಎಂದು ಮಾಲೀಕರು ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಉದ್ಯಮವನ್ನು ಬಂದ್ ಮಾಡಿಸುವ ಹುನ್ನಾರ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ತದಡಿ ಬೋಟ್ ಮಾಲೀಕರ ಸಂಘ ವಿನಂತಿಸಿದೆ.ಮನವಿ ಸಲ್ಲಿಸುವ ಸಂದರ್ಭದಲ್ಲಿ ಬೋಟ್ ಮಾಲೀಕರಾದ ಅಭಿಜಿತ ನಾಯ್ಕ, ಸಂದೀಪ ಮುದಗೇಕರ, ರವಿಕಿರಣ ನಾಯ್ಕ, ರಾಜೇಶ ಹೊಸ್ಕಟ್ಟಾ, ಕೃಷ್ಣಾ ಟಿ. ಹರಿಕಂತ, ಮಹೇಶ ಮುಡಂಗಿ, ರಂಜು ಕುಡ್ತಳಕರ, ಪುಷ್ಪಾ, ಗುಲಾಬಿ ಹಾಗೂ ಹಲವರಿದ್ದರು.