ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಮಹದೇವಪುರ ಗ್ರಾಮದ ಎಂ.ಕೆ.ಆನಂದಾಳ್ವಾರ್ ಪ್ರೌಢಶಾಲೆ ಸುವರ್ಣ ಮಹೋತ್ಸವ ಸಮಾರಂಭದ ಸಮಾರೋಪದಲ್ಲಿ ಮಾತನಾಡಿ, 2028ಕ್ಕೆ ಜನ ಸಾಮಾನ್ಯರ ಚಿಂತನೆ ಹಾಗೂ ಬಯಕೆ, ಅವರ ಬದುಕಿಗೆ ಚಿಂತನೆಯುಳ್ಳ ಸರ್ಕಾರ ರಾಜ್ಯದಲ್ಲಿ ಬರುಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದರು.
ನಾನು ಪಂಚರತ್ನ ಯೋಜನೆ ಜಾರಿ ತರಲು ಮುಂದಾಗಿದ್ದೆ. ಆದರೆ, ಈ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಕೊಟ್ಟಿದ್ದಾರೆ. ಈಗ ಯಾವುದೇ ರಾಜ್ಯಕ್ಕೆ ಹೋದರೂ ಚುನಾವಣೆಗೂ ಮುನ್ನ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ₹2 ಸಾವಿರ, ₹3 ಸಾವಿರ ಕೊಡುತ್ತೇವೆ ಎನ್ನುತ್ತಿದ್ದಾರೆ. ಇದೀಗ ನಮ್ಮ ರಾಜ್ಯ ಸರ್ಕಾರ ₹8 ಲಕ್ಷ ಕೋಟಿ ಸಾಲ ಮಾಡಿದೆ. ಈ ಸಾಲವನ್ನು ತೀರಿಸಲು ಯಾರು ಅಧಿಕಾರಕ್ಕೆ ಬಂದರೂ ಸಾಧ್ಯವಿಲ್ಲ. ಬದಲಿಗೆ ರಾಜ್ಯದ ಜನರೇ ತೀರಿಸಬೇಕು ಎಂದು ಹೇಳಿದರು.ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸರ್ಕಾರ ಬೊಕ್ಕಸದಲ್ಲಿ ಹಣವಿಲ್ಲ. ಕಳೆದ 3 ವರ್ಷಗಳಿಂದ 1 ಲಕ್ಷದ 64 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ತಿಂಗಳಿಗೆ ಕೇವಲ ₹2 ಸಾವಿರ ನೀಡುತ್ತಾರೆ ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದರು. ಈಗ ಪ್ರತಿಯೊಬ್ಬರೂ ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಸಹ ನೆಮ್ಮದಿ ಬದುಕು ಕಾಣಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳಿಗೆ ಒತ್ತಡ ಹೇರಿ ಕೆಲಸ ಮಾಡಿಸುತ್ತಿದ್ದಾರೆ. ಇದರಿಂದ ಅವರೇ ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಅಧಿಕಾರಿಗಳು ಸಹ ಯಾವುದೇ ಮುಖ್ಯಮಂತ್ರಿ, ಮಂತ್ರಿ ಹಾಗೂ ಜನಪ್ರತಿನಿಧಿ ಹೇಳಿದರೂ ಕಾನೂನು ಮೀರಿ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.ಎಂ.ಕೆ ಆನಂದಾಳ್ವಾರ್ ಶಾಲೆಯಲ್ಲಿ 650ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದ್ದೀರಿ. ಒಂದೆರಡು ದಿನಗಳಲ್ಲಿ ನಮ್ಮ ಕಚೇರಿ ಸಿಬ್ಬಂದಿ ಆಗಮಿಸಿ ಜಾಗ ಪರಿಶೀಲನೆ ನಡೆಸಿ ಮಕ್ಕಳ ಅನುಕೂಲಕ್ಕಾಗಿ ಶೌಚಾಲಯ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ತಿರುನಾರಾಯಣ್ ಅಯ್ಯಂಗಾರ್ ಅವರ ದೂರದೃಷ್ಟಿಯಿಂದ ಪ್ರಾರಂಭವಾದ ಈ ಶಾಲೆ ಕಳೆದ 50 ವರ್ಷಗಳಿಂದ ಗ್ರಾಮೀಣ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ ಬಂದಿರುವುದು ಬಹಳ ಸಂತಸದ ವಿಷಯ ಎಂದರು.ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆ ಹಾಗೂ ಶಿಕ್ಷಣದ ಬಗೆಗಿನ ಕಾಳಜಿ ಪ್ರತಿ ಹೋಬಳಿ ಮಟ್ಟದಲ್ಲಿ ಅತ್ಯಾಧುನಿಕ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಲು ಮುಂದಾಗಿದ್ದರು. ಜನರು ಎಚ್ಡಿಕೆರನ್ನು ಸಿಎಂ ಮಾಡಿದ್ದರೆ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗುತ್ತಿತ್ತು ಎಂದು ಹೇಳಿದರು.
ಸಮಾರಂಭದಲ್ಲಿ ಆನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಗಿಣಿಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ತಹಸೀಲ್ದಾರ್ ಚೇತನಾ ಯಾದವ್, ಜೆಡಿಎಸ್ ತಾಲೂಕು ಅಧ್ಯಕ್ಷ ದಶರತ್, ಕಾರ್ಯಾಧ್ಯಕ್ಷ ತಿಲಕ್, ಯುವ ಘಟಕ ಅಧ್ಯಕ್ಷ ಕಡತನಾಳು ಸಂಜಯ್, ಇಸ್ಕಾನ್ ಸಂಸ್ಥೆ ಮಹೋತ್ಸಾಹ ವೈತನ್ಯದಾಸ್, ಜಗಪತಿ ದಾಸ್, ಧರ್ಮಸ್ಥಳ ಸಂಸ್ಥೆ ಗಣಪತಿ ಭಟ್, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಎಂಪಿಸಿಎಸ್ ಅಧ್ಯಕ್ಷ ಎಂ.ಬಿ.ಶೇಖರ್ ಸೇರಿ ಇತರರು ಇದ್ದರು.