ಜನೌಷಧಿ ಕೇಂದ್ರ ಸ್ಥಗಿತ: ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : May 31, 2025, 12:58 AM ISTUpdated : May 31, 2025, 12:59 AM IST
ಜನೌಷಧಿ ಮುಚ್ಚಲು ಹೊರಟ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಿಜೆಪಿಯ ಜಿಲ್ಲಾ ಘಟಕದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿನ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕಪ್ಪುಪಟ್ಟಿ ಕಟ್ಟಿಕೊಂಡು ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸರ್ಕಾರದ ನಡೆಯ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿಯ ಜಿಲ್ಲಾ ಘಟಕದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿನ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕಪ್ಪುಪಟ್ಟಿ ಕಟ್ಟಿಕೊಂಡು ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸರ್ಕಾರದ ನಡೆಯ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಡ ರೋಗಿಗಳಿಗೆ ವರದಾನವಾಗಿರುವ ಈ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಬಡವರ ವಿರೋಧಿಯಾಗಿದೆ ಎಂದರು.ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರುವವರು ಬಡವರು ಮಾತ್ರ. ಬಡವರಿಗೆ ಅನುಕೂಲಕರವಾದ ಈ ಕೇಂದ್ರಗಳನ್ನು ವಿನಾಕಾರಣ ಸ್ಥಗಿತಗೊಳಿಸುವ ಅರ್ಥವೇನು? ಸಚಿವ ದಿನೇಶ ಗುಂಡೂರಾವ್‌, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪಕ್ಷದ ಮುಖಂಡರು ಶ್ರೀಮಂತರಿರಬಹುದು. ಅವರು ಜಿಲ್ಲಾಸ್ಪತ್ರೆಗೆ ಹೋಗುವುದಿಲ್ಲ. ಬಡವರ ವಿರೋಧಿ ನಿರ್ಧಾರ ಕೈಗೊಂಡಿರುವ ಸರ್ಕಾದ ಕ್ರಮ ಖಂಡನೀಯ. ಕೂಡಲೇ ಸರ್ಕಾರ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು, ಬಡವರ ಹೊಟ್ಟೆ ಮೇಲೆ ಕಲ್ಲು ಹಾಕುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಯೋಜನೆಯ ವಿರುದ್ದ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ರಾಮರಾಜ್ಯ ಮಾಡುತ್ತೇನೆ ಎಂದವರು ಇವರು ರಾವಣ ರಾಜ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ, ಪ್ರಧಾನಮಂತ್ರಿ ಜನ ಔಷಧಿ ಕೇಂದ್ರವನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳನ್ನು ಮಾರಾಟ ಮಾಡುವಂತಿಲ್ಲ ಎನ್ನುವ ನಿಯಮದಡಿ ಕಾರಣ ಹೇಳಿ ಸಮಾಜಾಯಿಸಿ ನೀಡಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಹೊರಹಾಕಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೊಡುವ ಔಷಧಿಗಳು ಲಭ್ಯವಿಲ್ಲ ಅಂದ್ರೇ ರೋಗಿಗಳು ಹೊರಗಡೆ ಹೋಗಿ ಜನೌಷಧಿ ಕೇಂದ್ರವನ್ನು ಹುಡುಕಾಡಬೇಕಾ?. ಔಷಧಿ ಕೇಂದ್ರ ಸಿಗದೇ ಇದ್ದ ಪಕ್ಷದಲ್ಲಿ ರೋಗಿಗಳು ಅನಾವಶ್ಯಕವಾಗಿ ಹೆಚ್ಚಿನ ದರದ ಔಷಧಿಯನ್ನು ಖರೀದಿ ಮಾಡುವ ಅನಿವಾರ್ಯತೆ ಹುಟ್ಟಿ ಹಾಕಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆರೋಗ್ಯ ಸಚಿವ ದಿನೇಶ ಗುಂಡೂರಾವ ಅವರ ಈ ನಿರ್ಣಯವನ್ನು ಖಂಡಿಸುವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆ ವೇಳೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಚಂದ್ರಶೇಖರ ಕವಟಗಿ, ವಿಜುಗೌಡ ಪಾಟೀಲ, ಈರಣ್ಣ ರಾವೂರ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ, ಸುರೇಶ ಬಿರಾದಾರ, ಉಮೇಶ ಕೋಳಕೂರ, ಸಂಜಯ ಐಹೊಳ್ಳಿ, ಎಸ್.ಎ.ಪಾಟೀಲ, ವಿಜಯ ಜೋಶಿ, ರವಿಕಾಂತ ಬಗಲಿ, ಕಾಂತು ಶಿಂಧೆ, ರಾಜೇಶ ತವಸೆ, ಮಂಜುನಾಥ ಬಿಸೆ, ಪಾಪುಸಿಂಗ ರಜಪೂತ, ಚನ್ನು ಚಿನಗುಂಡಿ, ಸಿದ್ದು ಮಲ್ಲಿಕಾರ್ಜುನಮಠ, ಬಸವರಾಜ ಬೈಚಬಾಳ, ರಾಹುಲ ಜಾಧವ, ಕಲ್ಮೇಶ ಹಿರೇಮಠ ಸೇರಿದಂತೆ ಬಿಜೆಪಿಯ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

-----

ಕೋಟ್‌

ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರುವವರು ಬಡವರು ಮಾತ್ರ. ಬಡವರಿಗೆ ಅನುಕೂಲಕರವಾದ ಈ ಕೇಂದ್ರಗಳನ್ನು ವಿನಾಕಾರಣ ಸ್ಥಗಿತಗೊಳಿಸುವ ಅರ್ಥವೇನು?. ಸಚಿವ ದಿನೇಶ ಗುಂಡೂರಾವ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪಕ್ಷದ ಮುಖಂಡರು ಶ್ರೀಮಂತರಿರಬಹುದು, ಅವರು ಜಿಲ್ಲಾಸ್ಪತ್ರೆಗೆ ಹೋಗುವುದಿಲ್ಲ. ಬಡವರ ವಿರೋಧಿ ನಿರ್ಧಾರ ಕೈಗೊಂಡಿರುವ ಸರ್ಕಾದ ಕ್ರಮ ಖಂಡನೀಯ.

- ರಮೇಶ ಜಿಗಜಿಣಗಿ, ಸಂಸದರು

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್