ಬಳ್ಳಾರಿ: ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳು ನಟ ಕಮಲ್ ಹಾಸನ್ ನಟನೆಯ ಥಗ್‌ಲೈಫ್ ಚಿತ್ರ ಬಿಡುಗಡೆಗೊಳಿಸಬಾರದು. ಕನ್ನಡಿಗರ ಕ್ಷಮೆಯಾಚಿಸುವ ವರೆಗೆ ನಟನ ಯಾವುದೇ ಚಿತ್ರಗಳು ರಾಜ್ಯದಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಗೌಡ ಬಣ) ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ರಾಯಲ್ ವೃತ್ತದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು, ನಟ ಕಮಲ್ ಹಾಸನ್ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ನಟನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕರವೇ ಜಿಲ್ಲಾಧ್ಯಕ್ಷ ಅಂಗಡಿ ಶಂಕ್ರಪ್ಪ ಡಿ. ಕಗ್ಗಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಂಘಟನೆಯ ಜಿಲ್ಲಾ ಪ್ರಮುಖರಾದ ಕೆ.ಎಂ. ಶಿವಕುಮಾರ್, ಕೊಳೂರು ಜಿ. ತಿಪ್ಪಾರೆಡ್ಡಿ, ಹುಬ್ಬಳ್ಳಿ ರಾಜು, ಆನಂದಗೌಡ, ಆತ್ಮನಂದಾರೆಡ್ಡಿ, ದೇವರಾಜ, ಕರವೇ ಕುರುಗೋಡು ತಾಲೂಕು ಅಧ್ಯಕ್ಷ ಗೆಣಿಕೆಹಾಳ್ ವೀರೇಶ್, ಬಳ್ಳಾರಿ ತಾಲೂಕು ಅಧ್ಯಕ್ಷ ದಿವಾಕರ್, ಬಾಣಾಪುರ ಪೊಂಪನಗೌಡ, ಬಾವಿ ಶಿವಕುಮಾರ್ ಕುಡತಿನಿ, ಶ್ರೀಧರ ಶೆಟ್ಟಿ ಬೆಳಗಲ್ಲು, ನೆವ್ವಾರ್ ರಾಜಶೇಖರ್, ತಿಪ್ಪೇಶ್ ಬೆಳಗಲ್ಲು, ವಿನೋದ್ ಬೆಳಗಲ್ಲು, ಕುಡುತಿನಿ ಮಂಜು ಹಾಗೂ ನೂರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.