ಶಿರಹಟ್ಟಿ: ವೈಭವದ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Jan 24, 2024, 02:02 AM IST
ಪೋಟೊ-೨೩ ಎಸ್.ಎಚ್‌ಟಿ. ೨ಕೆ-ವಿಜೃಂಭಣೆಯಿಂದ ನಡೆದ ಗ್ರಾಮದೇವತೆ ದ್ಯಾಮವ್ವ ದೇವಿಯ ಗ್ರಾಮ ಸಂಚಾರ, ಮೆರವಣಿಗೆ. | Kannada Prabha

ಸಾರಾಂಶ

ಶಿರಹಟ್ಟಿ ಗ್ರಾಮದೇವತೆ ದ್ಯಾಮವ್ವ ದೇವಿಯ ೩ ದಿನಗಳ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಆರಂಭಗೊಂಡಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಿ ಮೂರ್ತಿಯನ್ನು ಪಟ್ಟಣದಾದ್ಯಂತ ಸಕಲ ವಾದ್ಯ ವೈಭವಗಳೊಂದಿಗೆ ಮುಂಜಾನೆ ೬-೩೦ ಗಂಟೆಗೆ ಸಾವಿರಾರು ಭಕ್ತರ ಉದೋ ಉದೋ ಎಂಬ ಘೋಷಣೆಯೊಂದಿಗೆ ಸಂಚರಿಸಿತು.

ಶಿರಹಟ್ಟಿ: ಪಟ್ಟಣದಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿಯ ೩ ದಿನಗಳ ಜಾತ್ರಾ ಮಹೋತ್ಸವ ಅತ್ಯಂತ ವೈಭವದಿಂದ ಅರಂಭಗೊಂಡಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯ ಮೂರ್ತಿಯನ್ನು ಪಟ್ಟಣದಾದ್ಯಂತ ಸಕಲ ವಾದ್ಯ ವೈಭವಗಳೊಂದಿಗೆ ಮುಂಜಾನೆ ೬-೩೦ ಗಂಟೆಗೆ ಸಾವಿರಾರು ಭಕ್ತರ ಉದೋ ಉದೋ ಎಂಬ ಘೋಷಣೆಯೊಂದಿಗೆ ಸಂಚರಿಸಿತು.

ದ್ಯಾಮವ್ವ ದೇವಿಗೆ ಸೋಮವಾರ ರಾತ್ರಿಯೇ ಗ್ರಾಮದ ಪ್ರತಿ ಮನೆಯಿಂದ ಸಿಹಿ ಖಾದ್ಯಗಳನ್ನು ತಯಾರಿಸಿ ತಾಯಿಗೆ ಎಡೆ ಕೊಡಲಾಯಿತು. ಇದೇ ಸಮಯದಲ್ಲಿ ದೇವಿಗೆ ನೆದರ ಬರೆಯುವ ಕಾರ್ಯ ನಡೆಯಿತು. ನಂತರ ನೆರೆದ ಭಕ್ತರು ಹೋಳಿಗೆ, ಸೀಕರಣೆ ಪ್ರಸಾದ ಸ್ವೀಕರಿಸಿ ಪುನೀತರಾದರು. ದ್ಯಾಮವ್ವ ದೇವಿಗೆ ಬೇಡಿಕೊಂಡ ಹರಕೆ ಹೊತ್ತ ಗ್ರಾಮದ ಭಕ್ತರು ದೇವಿಯ ಮೆರವಣಿಗೆಯುದ್ದಕ್ಕೂ ಸಂಚರಿಸಿ ನಮಸ್ಕರಿಸುತ್ತಾ ತಮ್ಮ ಹರಕೆ ತೀರಿಸಿದರು.

ಮಂಗಳವಾರ ಬೆಳಗ್ಗೆ ದ್ಯಾಮವ್ವ ದೇವಿಗೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ಭಾವೈಕ್ಯತೆಗೆ ಹೆಸರಾಗಿರುವ ನಾಡಿನ ಇತಿಹಾಸ ಪ್ರಸಿದ್ಧ ಫಕೀರೇಶ್ವರ ಮಠದ ಖ್ಯಾತಿಯಂತೆ ಮತ್ತೊಮ್ಮೆ ತಾಯಿ ದ್ಯಾಮವ್ವನ ಮೂರ್ತಿ ಮೆರವಣಿಗೆಯಲ್ಲಿ ಸಾಗುತ್ತಿದ್ದಂತೆ ಜಾತಿ, ಮತ, ಪಂಥಗಳೆನ್ನದೆ ಪ್ರತಿಯೊಬ್ಬರೂ ದೇವಿಗೆ ಹೂವಿನ ಮಳೆಗೈದು, ಉಡಿ ತುಂಬಿ ಕೃತಾರ್ಥರಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಮುಸ್ಲಿಂ ಬಾಂಧವರಿಂದ ಗ್ರಾಮ ದೇವತೆ ದ್ಯಾಮವ್ವ ದೇವಿಯ ಉತ್ಸವವನ್ನು ಭಕ್ತಿಯಿಂದ ಆಚರಿಸುವುದರೊಂದಿಗೆ ಇತರರಿಗೆ ಮಾದರಿಯಾದರು. ಅಲಂಕರಿಸಿದ ಪಾಲಿಕೆಯಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಿ ಗ್ರಾಮದ ಬೀದಿಗಳಲ್ಲಿ ದೇವಿಯ ಭವ್ಯ ಮೆರವಣಿಗೆ ಜರುಗಿತು. ಊರಿನ ಪ್ರತಿಯೊಂದು ಮನೆಯವರು ವಿವಿಧ ತೆರನಾದ ಸಿಹಿ ಪದಾರ್ಥಗಳನ್ನು ಮಾಡಿ ಭಕ್ತಿಯಿಂದ ದೇವಿಗೆ ನೈವೇದ್ಯ ಅರ್ಪಿಸಿ ಭಕ್ತಿ ಮೆರೆಯುವ ಮೂಲಕ ಪಟ್ಟಣದ ಜನತೆ ಸೌಹಾರ್ದದ ನೆಲೆ ತೋರಿಸಿಕೊಟ್ಟಿದ್ದಾರೆ.

ಸಂಪ್ರದಾಯದಂತೆ ದೇವಿಯು ಅಂಬಾ ಭವಾನಿ ದೇವಸ್ಥಾನಕ್ಕೆ ತೆರಳಿ ನೇರವಾಗಿ ಗೌಡರ ಮನೆಗೆ, ನಂತರ ಕುಲಕರ್ಣಿ (ಶಾನಭೋಗರ) ಮನೆಗೆ ತೆರಳಿತು. ಕೆಲ ಸಮಯ ದೇವಿಯ ಮೆರವಣಿಗೆ ನಿಂತಾಗ ನೂರಾರು ಜನ ಮಹಿಳೆಯರು ದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಭಾವೈಕ್ಯತೆಯ ಪ್ರತೀಕವಾಗಿ ಎದ್ದು ಕಾಣುತ್ತಿತ್ತು. ದೇವರಿಗೆ ಧರ್ಮ, ಜಾತಿಗಳಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಯಿತು.

ಗ್ರಾಮದೇವಿ ದ್ಯಾಮವ್ವನ ದರ್ಶನಕ್ಕೆ ಉರಿ ಬಿಸಿಲು ಲೆಕ್ಕಿಸದೆ ಉತ್ಸಾಹದಿಂದ ತಂಡೋಪತಂಡವಾಗಿ ಜನ ಆಗಮಿಸುತ್ತಿರುವುದು ಎಲ್ಲೆಡೆಗೆ ಕಾಣುತ್ತಿತ್ತು. ಪಟ್ಟಣದ ಪ್ರತಿಯೊಂದು ಬೀದಿಗಳಲ್ಲೂ ತಳಿರು ತೋರಣಗಳು ಕಂಗೊಳಿಸುತ್ತಿದ್ದವು. ಜಾತಿ ಯಾವುದಾದರೇನು? ರೀತಿ, ನೀತಿ ಮುಖ್ಯವಾಗಿದ್ದು, ಸಂಪ್ರದಾಯ ಶಿಷ್ಟಾಚಾರಗಳಿಂದ ಮನುಷ್ಯ ವಿವೇಕಿಯಾಗಬೇಕು. ಮಂಗಳವಾರದಿಂದ ಪಟ್ಟಣದಲ್ಲಿ ೩ ದಿನಗಳ ವರೆಗೆ ಜರುಗಲಿರುವ ಗ್ರಾಮದೇವಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಜನಾಂಗದ ಜನರೇ ಇದಕ್ಕೆ ಸಾಕ್ಷಿಯಾದರು.ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರ ಅನಿಸಿಕೆ: ಪ್ರತಿ ಮೂರು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುವ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರೆಯಲ್ಲಿ ಬೆಳಗ್ಗೆ ೬.೩೫ಕ್ಕೆ ನೇರವಾಗಿ ಶ್ರೀ ಜಗದ್ಗುರು ಫಕೀರೇಶ್ವರ ಮಠಕ್ಕೆ ದ್ಯಾಮವ್ವ ದೇವಿ ಮೂರ್ತಿ ಮೆರವಣಿಗೆ ಮೂಲಕ ಹೋಗುವುದು ಸಂಪ್ರದಾಯ. ಅಲ್ಲಿಂದ ಶ್ರೀಗಳು ಚಾಲನೆ ನೀಡಿದ ಬಳಿಕ ಗ್ರಾಮ ಸಂಚಾರ ನಡೆಯುತ್ತಿತ್ತು. ಆದರೆ ಈ ಬಾರಿ ಮಠಕ್ಕೆ ಹೋಗದೇ ಬೆಳಗ್ಗೆಯಿಂದ ಗ್ರಾಮದಲ್ಲಿ ಸಂಚರಿಸುತ್ತಿದ್ದು, ಭಕ್ತರಲ್ಲಿ ಹಲವಾರು ವಿಚಾರಗಳಿಗೆ ಕಾರಣವಾಗಿದ್ದು, ಕೆಲವರು ಮಠದ ಆನೆ ದೇವಿ ಮೆರವಣಿಗೆಗೆ ನೀಡದಿರುವುದಕ್ಕೆ ದೇವಿ ಮುನಿಸಿಕೊಂಡಿರಬಹುದು ಎಂಬ ಮಾತುಗಳು ಭಕ್ತರಿಂದ ಕೇಳಿಬಂದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೈಬ್ರರಿ ಮೇಲ್ವಿಚಾರಕರಿಗೆ ವರ್ಷದಿಂದ ಅರ್ಧ ವೇತನ!
ಕುರಿಗಾಹಿ ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು : ಸಿದ್ದು ಕಿಡಿ