ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜವನೆರ್ ಬೆದ್ರ ಫೌಂಡೇಶನ್‌ನ 7ನೇ ವರ್ಷದ ದೀಪಾವಳಿ ಸಂಭ್ರಮ, ಗೂಡುದೀಪ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆ ಹಾಗೂ ಯೋಧ ನಮನ ಕಾರ್ಯಕ್ರಮ ಇಲ್ಲಿನ ಗೋಪಾಲಕೃಷ್ಣ ದೇವಾಲಯದ ಆವರಣದಲ್ಲಿ ನಡೆಯಿತು. ಉದ್ಯಮಿ, ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಶ್ರೀಪತಿ ಭಟ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಬೆಳಕಿನ ಹಬ್ಬ ದೀಪಾವಳಿಯು ವಿಜಯ, ಸಾಮರಸ್ಯದ ಸಂಕೇತ. ಅಲ್ಲದೆ ಮಹಾವಿಷ್ಣು, ರಾಮ, ಕೃಷ್ಣರಿಗೂ ಈ ದೀಪಾವಳಿ ಆಚರಣೆಗೂ ವಿಶೇಷವಾದ ಸಂಬಂಧವಿದೆ. ಜವನೆರ್ ಬೆದ್ರ ಸಂಘಟನೆಯು ಗೂಡುದೀಪ ಮತ್ತು ರಂಗೋಲಿ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ, ಮತ್ತು ವಿವಿಧ ಧಾರ್ಮಿಕ ಆಚರಣೆಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡುವಂತಹ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಜವನೆರ್ ಬೆದ್ರ ಸಂಘಟನೆ ಸ್ವಚ್ಛತೆ, ಗಿಡಗಳನ್ನು ಬೆಳೆಸುವ ಮತ್ತು ರಕ್ತದಾನದ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ ಎಂದರು.ಸನ್ಮಾನ: ಕುಣಿತ ಭಜನೆ ಮಾಡಿಕೊಂಡು ಶ್ರೀಕೃಷ್ಣ ವೇಷದಲ್ಲಿ ಭಾಗವಹಿಸಿದ್ದ ಪುಟಾಣಿ ವರ್ಷ ಕೆ. ಹಾಗೂ ಯೋಧ ನಮನ ಕಾರ್ಯಕ್ರಮಕ್ಕೆ ನಿಯುಕ್ತರಾಗಿದ್ದ ಮಾರೂರು ಸಂದೀಪ್ ಎಂ ಶೆಟ್ಟಿ ಅವರು ಕರ್ತವ್ಯ ನಿರತರಾಗಿದ್ದ ಕಾರಣ ಅವರ ಪರವಾಗಿ ಅವರ ತಂದೆ ತಾಯಿ ರಾಜೇಶ್ ಶೆಟ್ಟಿ ಹಾಗೂ ರತಿ ದಂಪತಿಯನ್ನು ಸನ್ಮಾನಿಸಲಾಯಿತು.
ಗೌರವ: ದಸ್ಕತ್ ಸಿನಿಮಾದ ವಿಶ್ವನಾಥ, ನಟ ದೀಕ್ಷಿತ್ ಅನಿಂಜೆ, ಧಾರ್ಮಿಕ ಪಾರಂಪರಿಕ ತಿಂಡಿ ತಿನಿಸು ರಚಿಸಿ ಯೂಟ್ಯೂಬ್‌ನಲ್ಲಿ ಹೆಸರುವಾಸಿಯಾದ ವಿನಯ ಡಿ.ಕಿಣಿ, ಇನ್ನಾ ಗ್ರಾಮ್‌ನ ಖ್ಯಾತ ಸೂರಜ್ ಅಂಚನ್ ಅವರನ್ನು ಗೌರವಿಸಲಾಯಿತು.