ರೈತರ ಪಹಣಿಯಲ್ಲಿ ವಕ್ಫ್‌ ಹೆಸರು ಬರಕೂಡದು: ಕಿಸಾನ್‌ ಸಂಘದ ಅಧ್ಯಕ್ಷ ಹಾಡ್ಯ ರಮೇಶ್ ರಾಜು

KannadaprabhaNewsNetwork |  
Published : Nov 06, 2024, 12:50 AM ISTUpdated : Nov 06, 2024, 12:51 AM IST
5ಎಚ್ಎಸ್ಎನ್8 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಪ್ರಾಂತ್ಯ ಕಿಸಾನ್ ಸಂಘದ ಅಧ್ಯಕ್ಷ ಹಾಡ್ಯ ರಮೇಶ್ ರಾಜು . | Kannada Prabha

ಸಾರಾಂಶ

ರೈತರ ಆಸ್ತಿಗಳ ಮೇಲೆ ವಕ್ಫ್ ಹೆಸರು ಬಾರದಂತೆ ನೋಡಿಕೊಳ್ಳಬೇಕು. ತಪ್ಪಿದಲ್ಲಿ ಭಾರತೀಯ ಕಿಸಾನ್ ಸಂಘದ ರೈತರು ಸಾರ್ವಜನಿಕರ ಜೊತೆಗೂಡಿ ಅನಿರ್ದಿಷ್ಟಾವಧಿ ಧರಣಿ ಮಾಡಬೇಕಾಗುತ್ತದೆ ಎಂದು ದಕ್ಷಿಣ ಪ್ರಾಂತ್ಯ ಕಿಸಾನ್ ಸಂಘದ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಎಚ್ಚರಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೂಡಲೇ ಕ್ರಮ ಕೈಗೊಳ್ಳುವಂತೆ ಸಿಎಂಗೆ ಆಗ್ರಹ । ಪ್ರತಿಭಟನೆ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಹಾಸನ

ರೈತರ ಭೂಮಿ ಕಬಳಿಸಲು ಹೊರಟಿರುವ ವಕ್ಫ್‌ ಬಗ್ಗೆ ಮುಖ್ಯಮಂತ್ರಿ ಕೂಡಲೇ ಸೂಕ್ತ ತೀರ್ಮಾನ ಮಾಡುವ ಮೂಲಕ ರೈತರ ಆಸ್ತಿಗಳ ಮೇಲೆ ವಕ್ಫ್ ಹೆಸರು ಬಾರದಂತೆ ನೋಡಿಕೊಳ್ಳಬೇಕು. ತಪ್ಪಿದಲ್ಲಿ ಭಾರತೀಯ ಕಿಸಾನ್ ಸಂಘದ ರೈತರು ಸಾರ್ವಜನಿಕರ ಜೊತೆಗೂಡಿ ಅನಿರ್ದಿಷ್ಟಾವಧಿ ಧರಣಿ ಮಾಡಬೇಕಾಗುತ್ತದೆ ಎಂದು ದಕ್ಷಿಣ ಪ್ರಾಂತ್ಯ ಕಿಸಾನ್ ಸಂಘದ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಎಚ್ಚರಿಸಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕರ್ನಾಟಕ ವಿಜಯಪುರ, ಧಾರವಾಡ, ಹಾವೇರಿ, ಬೀದರ್, ಮಂಡ್ಯ ಜಿಲ್ಲೆಯ ನಾಗಮಂಗಲ, ಬೆಳ್ಳೂರು ಭಾಗಗಳು ಹಾಗೂ ಇನ್ನೂ ಹಲವಾರು ಜಿಲ್ಲೆಗಳ ರೈತರ ಜಮೀನುಗಳ ಆರ್‌ಟಿಸಿಯಲ್ಲಿ ಕಾಲಂ ನಂ. ೧೧ ರಲ್ಲಿ ವಕ್ಫ್‌ ಬೋರ್ಡಿನ ಹೆಸರು ಸೇರ್ಪಡೆಯಾಗಿರುವ ಬಗ್ಗೆ ರಾಜ್ಯಾದ್ಯಂತ ರೈತರು ಆತಂಕಗೊಂಡಿರುವ ಕಾರಣ ಮುಖ್ಯಮಂತ್ರಿಗಳು ಸರ್ವಸದಸ್ಯರ ಸಭೆ ಹಾಗೂ ತುರ್ತು ಸಚಿವ ಸಂಪುಟ ಸಭೆ ಕರೆದು ಚರ್ಚಿಸಿ ಸೂಕ್ತ ತೀರ್ಮಾನ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯದ ಯಾವುದೇ ರೈತನ ಆಸ್ತಿಗಳ ಮೇಲೆ ವಕ್ಫ್‌ ಹಾಗೂ ಇತರೆ ಸಂಸ್ಥೆಗಳ ಹೆಸರು ಬರದ ಹಾಗೆ ನೋಡಿಕೊಳ್ಳಬೇಕೆಂದು ನಮ್ಮ ಸಂಘವು ಆಗ್ರಹಿಸುತ್ತದೆ. ೧೯೫೪ರ ಸಂಸತ್ತಿನ ಅಂಗೀಕಾರ ೧೯೯೫ರ ತಿದ್ದುಪಡಿ ಹಾಗೂ ನಂತರದಲ್ಲಿ ೨೦೧೯ ರಲ್ಲಿ ತಿದ್ದುಪಡಿ ಮಾಡಿದ್ದು, ಆ ಮಂಡಳಿಗೆ ಹೆಚ್ಚು ಅಧಿಕಾರ ನೀಡಿ ಒಂದು ಸಮುದಾಯವನ್ನು ಬಲಪಡಿಸುತ್ತಿದೆ ಎಂದು ಹೇಳಿದರು.

ಈ ದೇಶದ ಪ್ರತಿಯೊಬ್ಬ ನಾಗರಿಕನೂ ಪ್ರತಿ ಸಮಸ್ಯೆಗೆ ನ್ಯಾಯಾಂಗಕ್ಕೆ ಹೋಗುವುದು ಸಹಜ. ಹೈಕೋರ್ಟ್, ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ. ಆದರೆ ವಕ್ಫ್‌ ಮಂಡಳಿ ನೋಟೀಸ್‌ ಹೇಗೆ ನೀಡಿತು. ರೈತರು ನ್ಯಾಯಲಯ ಬಿಟ್ಟು ವಕ್ಫ್‌ ಮಂಡಳಿಗೆ ಹೋಗಿ ನ್ಯಾಯ ನಿರೀಕ್ಷಿಸಲು ಸಾಧ್ಯವೇ? ಎಂದು ಕೇಳಿದರು.

ದಯಮಾಡಿ ಈ ಪದವನ್ನು ತೆಗೆದು ಹಾಕಲು ಮತ್ತು ಈ ರೀತಿ ಆದ ಘಟನೆಯ ಸತ್ಯಾಸತ್ಯತೆಯನ್ನು ತಮ್ಮ ಅಧೀನದಲ್ಲಿರುವ ಕಂದಾಯ ಇಲಾಖೆಗೆ ತಹಸೀಲ್ದಾರ್ ರವರಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಇದರ ಸತ್ಯಾಸತ್ಯತೆಯನ್ನು ತಿಳಿಯಲು ಜಿಲ್ಲೆಯ ಸಂಘ ಸಂಸ್ಥೆಗಳು, ರೈತ ಮುಖಂಡರ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ತಿಳಿಸಿ ರೈತಪರ ನಿರ್ಧಾರ ಮಾಡುತ್ತೀರೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ತಪ್ಪಿದಲ್ಲಿ ಭಾರತದ ಅತಿ ದೊಡ್ಡ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ರೈತರು, ಸಾರ್ವಜನಿಕರೊಂದಿಗೆ ಸೇರಿ ಅನಿರ್ದಿಷ್ಟಾವದಿ ಧರಣಿ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಮಾಜಿ ಅಧ್ಯಕ್ಷ ಕಾಳೇಗೌಡ, ಸರೋಜಮ್ಮ, ಮಾಜಿ ಕೋಶಾಧ್ಯಕ್ಷ ಮಧು, ಕುಮಾರಸ್ವಾಮಿ, ಎಚ್.ಬಿ. ಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಇತರ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.

ಸಂವಿಧಾನಕ್ಕೆ ಬೆಲೆ ಎಲ್ಲಿ?

ವಕ್ಫ್‌ ಮಂಡಳಿ ಯಾವುದೇ ಆಸ್ತಿಯನ್ನು ತನ್ನದೆಂದು ಘೋಷಿಸುವುದಾದರೆ ಭಾರತ ದೇಶ ಅಳವಡಿಸಿಕೊಂಡಿರುವ ಸಂವಿಧಾನಕ್ಕೆ ಬೆಲೆ ಎಲ್ಲಿ? ಸ್ವತಂತ್ರ ಭಾರತ ಎಲ್ಲಿ? ನ್ಯಾಯಾಂಗಕ್ಕೆ ಬೆಲೆ ಎಲ್ಲಿ? ಎಂದು ಹಾಡ್ಯ ರಮೇಶ್ ರಾಜು ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ