-ಜಯ ಕರ್ನಾಟಕ ಸಂಘಟನೆ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರಿಗೆ ಮನವಿ
-----ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ವಿವಿಧೆಡೆ ರಸ್ತೆಗಳು ಹದಗೆಟ್ಟು ಹೋಗಿದ್ದು, ತಕ್ಷಣ ದುರಸ್ತಿ ಕೈಗೊಳ್ಳುವಂತೆ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಸಮಿತಿ ಆಗ್ರಹಿಸಿದೆ.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ, ನಗರದ ಹಲವಾರು ಕಡೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಅಪಘಾತಗಳು ಸಂಭವಿಸುತ್ತಿದ್ದು, ಯಾದಗಿರಿ-ಶಹಾಪುರ ಭೀಮಾ ಬ್ರಿಡ್ಜ್ ಮೇಲುಗಡೆ, ಎಲ್.ಐ.ಸಿ. ಕಚೇರಿ ಎದುರುಗಡೆ, ನಗರದ ಹಲವಾರು ಪ್ರಮುಖ ರಸ್ತೆಗಳಲ್ಲಿ ದೊಡ್ಡ-ದೊಡ್ಡ ಗುಂಡಿಗಳು ಬಿದ್ದಿದ್ದು, ಈಗ ಮಳೆಗಾಲವಾದ್ದರಿಂದ ಗುಂಡಿಗಳಲ್ಲಿ ನೀರು ಮುಚ್ಚಿ ಗುಂಡಿ ಕಾಣದಂತಾಗಿದ್ದು, ಇದರಿಂದ ಅನೇಕ ಜನ, ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದು, ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಜನರು ಭಯಭೀತಿಯಿಂದ ತಿರುಗಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯವರ ನಿಷ್ಕಾಳಜಿತನದಿಂದ ಗುಂಡಿಗಳು ಮುಚ್ಚದೆ ಹಾಗೆ ಬಿಟ್ಟಿರುತ್ತಾರೆ. ಜನರು ಹಾಗೂ ವಾಹನ ಚಾಲಕರು ಕೂಡ ಬಹಳಷ್ಟು ತೊಂದರೆಪಡುತ್ತಿದ್ದಾರೆ. ಸಂಚಾರ ನರಕಸಾದ್ರಶ್ಯವಾಗಿದೆ ಎಂದು ಅವರು ವಿವರಿಸಿದರು.ಯಾವುದೇ ಅನಾಹುತವಾಗದಂತೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಕೆಲಸ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ಹಣ ಸಂಗ್ರಹಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕಾಗುತ್ತದೆ. ಅಷ್ಟಕ್ಕೂ ಜಗ್ಗದಿದ್ದಲ್ಲಿ ಉಗ್ರ ರೂಪದ ಚಳವಳಿ ಸಂಘಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಮಗದಂಪುರ, ಜಿಲ್ಲಾ ಮುಖಂಡ ರಾಜು ಸಾಹುಕಾರ ಖಾನಾಪೂರ, ಶಿವರಾಜ ಗುತ್ತೇದಾರ, ಭೀಮು ಪೂಜಾರಿ, ಮಾರುತಿ ಮುದ್ನಾಳ, ನಾಗಪ್ಪ ಹೊನಗೇರಿ, ಮಲ್ಲು ಹತ್ತಿಕುಣಿ, ವಿಜಯಕುಮಾರ ಜಿನಿಕೇರಿ ತಾಂಡಾ, ರಂಗನಾಥ ನಾಯಕ, ನಾಗರಾಜ ರಾಮಸಮುದ್ರ, ಸಾಬರಡ್ಡಿ ಶೆಟ್ಟಿಕೇರಿ ಇದ್ದರು.------
6ವೈಡಿಆರ್3: ಯಾದಗಿರಿ ನಗರದ ವಿವಿಧೆಡೆ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರಿಗೆ ಮನವಿ ಸಲ್ಲಿಸಲಾಯಿತು.-------