ಕನ್ನಡಪ್ರಭ ವಾರ್ತೆ ಬೇಲೂರು ಭಾರತಾದ್ಯಂತ ಹೆಸರುವಾಸಿಯಾಗಿರುವ ಪುಣ್ಯಸ್ಥಳವೆಂದರೆ ಅದು ಧರ್ಮಸ್ಥಳ. ಆ ಕ್ಷೇತ್ರದ ಮೇಲಿನ ಆರೋಪ, ಅಪಸ್ವರ ಖಂಡಿಸಿ ಜಯ ಕರ್ನಾಟಕ ಸಂಘಟನೆಯಿಂದ ಕಾರುಗಳ ರ್‍ಯಾಲಿ ಮೂಲಕ ಧರ್ಮಸ್ಥಳಕ್ಕೆ ಬೆಂಬಲ ವ್ಯಕ್ತಪಡಿಸಿ ಎಸ್‌ಐಟಿಗೆ ಮನವಿ ಸಲ್ಲಿಸಲು ತೆರಳುತಿದ್ದೇವೆ ಎಂದು ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್ ಹೇಳಿದರು.ಧರ್ಮಸ್ಥಳದಲ್ಲಿನ ಘಟನೆಗಳು ಹಾಗೂ ಅಪಪ್ರಚಾರ ಹೋಗಲಾಡಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಹೊರಟ ಕಾರುಗಳ ರ್‍ಯಾಲಿ ಹಾಸನ ಮೂಲಕ ಬೇಲೂರಿಗೆ ಆಗಮಿಸಿದ ಸಂದರ್ಭ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಆರೋಪ, ಅಪಸ್ವರಗಳಂತಹ ಘಟನೆಗಳನ್ನ ಸೃಷ್ಠಿಸುವಂತಹ ಸಂದರ್ಭಗಳನ್ನು ನೋಡಿದಾಗ ಆಘಾತವಾಯಿತು. ಮತ್ತು ಅಲ್ಲಿನ ಘಟನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಯೂಟ್ಯೂಬರ್‌ಗಳು ಬಿಂಬಿಸುವ ಕೆಲಸ ಮಾಡಿದ್ದನ್ನು ನೋಡಿದ ಜನಸಾಮಾನ್ಯರಿಗೆ ಇದು ನಿಜವೇನೋ ಎಂಬ ಅನುಮಾನದಲ್ಲಿ ನೋಡುವ ಪ್ರಕ್ರಿಯೆ ಚಾಲನೆಯಲ್ಲಿತ್ತು. ಅಂತಹ ಸಂದರ್ಭದಲ್ಲಿ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಆರೋಪ ಪ್ರತ್ಯಾರೋಪ ಬರುತಿದ್ದವು. ಅಲ್ಲದೆ ಇಳಿ ವಯಸ್ಸಿನ ಮಹಿಳೆಯೊಬ್ಬರು ಸುಳ್ಳು ಹೇಳಿದ್ದೇನೆ ಎಂಬುದನ್ನು ಆಕೆಯೇ ಒಪ್ಪಿಕೊಂಡಿರುವುದು ಮಾಧ್ಯಮದಲ್ಲಿ ನೋಡಿದ್ದೇವೆ. ಇದಕ್ಕೆಲ್ಲ ಯಾರೂ ಕಾರಣ, ಈ ಚಿತ್ರಕತೆ ಬರೆದವರ್‍ಯಾರು, ನಿರ್ಮಾಪಕ ಯಾರು ತಿಳಿಯುತ್ತಿಲ್ಲ ಎಂದರು.
ಜಯ ಕರ್ನಾಟಕ ಸಂಘಟ ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ್ ರೈ, ಹಿರಿಯ ಉಪಾಧ್ಯಕ್ಷ ಮುನಿಸ್ವಾಮಣ್ಣ, ಉಪಾಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ಗಗನರಾಜ್, ಸಂಘಟನಾ ಕಾರ್ಯದರ್ಶಿ ಅಂಬರೀಶ್, ಮಂಜುಳಾ, ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್, ಉಪಾಧ್ಯಕ್ಷ ಶ್ರೇಯಸ್, ತಾಲೂಕು ಅಧ್ಯಕ್ಷ ಎಸ್.ಎಂ.ರಾಜು. ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರಿದ್ದರು.
-------ಫೋಟೋ:
ಧರ್ಮಸ್ಥಳದ ಮೇಲಿನ ಅಪಪ್ರಚಾರದ ವಿರುದ್ಧ ಜಯ ಕರ್ನಾಟಕ ಸಂಘಟನೆ ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಕಾರುಗಳ ರ್‍ಯಾಲಿ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್.