ಮಂಜುನಾಥಸ್ವಾಮಿ ಕಾಂಗ್ರೆಸ್‌ ಸರ್ಕಾರವನ್ನು ಕ್ಷಮಿಸಲ್ಲ: ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : Aug 24, 2025, 02:00 AM IST
ಪೋಟೊ:23ಎಸ್ಎಂಜಿಕೆಪಿ07ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ನಗರದ ಶೀನಪ್ಪಶೆಟ್ಟಿ ವೃತ್ತದಲ್ಲಿ  ಕೋಟ್ಯಂತರ ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ಮಂಜುನಾಥಸ್ವಾಮಿ ಸನ್ನಿಧಿಗೆ ಕಳಂಕ ತರಲು ಒಳಸಂಚು ನಡೆಸಿರುವವರ ವಿರುದ್ಧ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.  | Kannada Prabha

ಸಾರಾಂಶ

ಧರ್ಮಸ್ಥಳ ವಿಚಾರವಾಗಿ ಸರ್ಕಾರ ನಡೆದುಕೊಂಡ ರೀತಿ ಸರಿಯಲ್ಲ, ಶ್ರೀ ಕ್ಷೇತ್ರಕ್ಕೆ ಮತ್ತು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತಂದ ಕಾರ್ಯವಾಗಿದೆ. ಮಂಜುನಾಥಸ್ವಾಮಿ ಈ ಸರ್ಕಾರವನ್ನು ಕ್ಷಮಿಸಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಧರ್ಮಸ್ಥಳ ವಿಚಾರವಾಗಿ ಸರ್ಕಾರ ನಡೆದುಕೊಂಡ ರೀತಿ ಸರಿಯಲ್ಲ, ಶ್ರೀ ಕ್ಷೇತ್ರಕ್ಕೆ ಮತ್ತು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತಂದ ಕಾರ್ಯವಾಗಿದೆ. ಮಂಜುನಾಥಸ್ವಾಮಿ ಈ ಸರ್ಕಾರವನ್ನು ಕ್ಷಮಿಸಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶನಿವಾರ ನಗರದ ಶೀನಪ್ಪಶೆಟ್ಟಿ ವೃತ್ತದಲ್ಲಿ ಬಿಜೆಪಿ ಶಿವಮೊಗ್ಗ ನಗರ ವತಿಯಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ ಕಳಂಕ ತರಲು ಒಳಸಂಚು ನಡೆಸಿರುವವರ ವಿರುದ್ಧ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೂ ವಿರೋಧಿ ಶಕ್ತಿಗೆ ರಾಜ್ಯ ಸರ್ಕಾರ ಪರೋಕ್ಷವಾಗಿ ಶಕ್ತಿ ತುಂಬಿ ಹಿಂದೂಗಳ ಶ್ರದ್ಧಾಕೇಂದ್ರಕ್ಕೆ ಕಪ್ಪು ಚುಕ್ಕೆ ಇಟ್ಟಿದೆ ಎಂದು ಆರೋಪಿಸಿದರು.

ಬಿಜೆಪಿಯಿಂದ ರಾಜ್ಯದೆಲ್ಲೆಡೆ ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ಹಮ್ಮಿಕೊಂಡಿದ್ದೇವೆ. 12 ವರ್ಷದ ಹಿಂದಿನ ಸೌಜನ್ಯ ಪ್ರಕರಣದ ಬಗ್ಗೆ ಈಗಾಗಲೇ ಹಲವು ತನಿಖಾ ಸಂಸ್ಥೆಗಳು ವರದಿ ನೀಡಿ ಧರ್ಮಸ್ಥಳಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಆದರೂ ಎಡಪಂಥೀಯರ ಮತ್ತು ಹಿಂದೂ ಧರ್ಮ ವಿರೋಧಿಗಳ ಷಡ್ಯಂತ್ರಕ್ಕೆ ಬಲಿಯಾಗಿ ಸರ್ಕಾರ ಎಸ್‌ಐಟಿ ರಚಿಸಿತು. ನಾವು ಕೂಡ ಅದನ್ನು ಸ್ವಾಗತಿಸಿದೆವು ಎಂದು ತಿಳಿಸಿದರು.

ಎಸ್‌ಐಟಿ ದೂರುದಾರ ಯಾರು? ಅವನ ಹಿನ್ನೆಲೆ ಏನು? ಪೂರ್ವಾಪರ ವಿಚಾರಿಸದೇ ಅವನು ತೋರಿಸಿದ ಕಡೆಯಲ್ಲೆಲ್ಲಾ ಗುಂಡಿ ತೋಡುವ ಕೆಲಸ ಮಾಡಿತು. ಮೊದಲು ತಿರುಪತಿ, ನಂತರ ಅಯೋಧ್ಯೆ, ಬಳಿಕ ಅಯ್ಯಪ್ಪಸ್ವಾಮಿ ಈಗ ಧರ್ಮಸ್ಥಳ ಬಗ್ಗೆ ನಿರಂತರ ಅಪಪ್ರಚಾರ ಮಾಡುವ ಕೆಲಸವನ್ನು ಕೆಲವು ಅನ್ಯಧರ್ಮೀಯರು ಮತ್ತು ಎಡಪಂಥೀಯರು ಮಾಡುತ್ತಿದ್ದು, ಸರ್ಕಾರ ಇದಕ್ಕೆ ಬೆಂಬಲ ನೀಡಿತು. ದೂರು ಕೊಟ್ಟವರಿಗೆ ಈಗ ಜೈಲಿಗೆ ಹಾಕಲು ಹೊರಟಿದ್ದೀರಿ. ಮೊದಲು ನಿಮಗೆ ಬುದ್ಧಿ ಇರಲಿಲ್ಲವಾ? ಈಗ ನಿಮ್ಮ ಬಗ್ಗೆ ನಾಡಿನ ಜನತೆಗೆ ವಿಶ್ವಾಸವಿಲ್ಲ. ಹೀಗಾಗಿ ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಮಾತನಾಡಿ, ಈ ದೇಶದಲ್ಲಿ ಹಲವಾರು ವರ್ಷಗಳಿಂದ ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ದೌರ್ಜನ್ಯ ಮತ್ತು ಅಪಪ್ರಚಾರಗಳು ನಡೆಯುತ್ತಾ ಬಂದಿವೆ. ಧರ್ಮಸ್ಥಳ ಕೂಡ ಅದರ ಒಂದು ಭಾಗ ಎಂದರು.

ನೂರಾರು ಹೆಣ ದಫನ್ ಮಾಡಿದ್ದೇನೆ ಎಂದು ಹೇಳಿದಾಗ ಅವನು ಸಾಮಾನ್ಯ ಸಾಕ್ಷಿ ಅಲ್ಲ ಎಂದು ಮನಗಂಡು ಅವನ ಹಿನ್ನೆಲೆಯನ್ನು ಗುರುತು ಹಚ್ಚಬೇಕಿತ್ತು. 18 ಅಡಿ ಗುಂಡಿ ತೆಗೆಯುವ ಕೆಲಸ ಮಾಡಿದ ಎಸ್‌ಐಟಿ ಸಾಕ್ಷಿ ಎಲ್ಲಿಂದ ಬಂದ, ಹೇಗೆ ಬಂದ? ಇಷ್ಟು ದಿನ ಏಕೆ ಸುಮ್ಮನಿದ್ದ ? ಇದರ ಹಿಂದೆ ಯಾವ ಷಡ್ಯಂತ್ರವಿದೆ ಎಂದು ತಿಳಿಯುವ ಗೋಜಿಗೆ ಹೋಗಿಲ್ಲ. ಮಂಜುನಾಥನ ದರ್ಶನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿಂದೆ ಮೀನು ತಿಂದು ದರ್ಶನ ಮಾಡಲು ಹೋಗಿದ್ದರು. ಆಗ ಮಂಜುನಾಥ ಅವರಿಗೆ ಮುಂದಿನ ದಾರಿಯನ್ನು ತೋರಿಸಿದ್ದ. ಈಗಲೂ ಕೂಡ ಮಂಜುನಾಥ ಈ ಸರ್ಕಾರಕ್ಕೆ ಸರಿಯಾಗಿ ಪಾಠ ಕಲಿಸುತ್ತಾನೆ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ತಿರುಬೋಕಿ ತಿಮರೋಡಿ ಮಾತು ಕೇಳಿ ಎಸ್‌ಐಟಿ ಮುಂದುವರೆಯುತ್ತಿರುವುದು ಸರಿಯಲ್ಲ. ಈಗ ಎಲ್ಲವೂ ಬೆಳಕಿಗೆ ಬರುತ್ತಿದೆ. ಷಡ್ಯಂತ್ರ ಬಟಾಬಯಲಾಗಿದೆ. ಕೆಲವು ನಕಲಿ ಹಿಂದೂ ಹೋರಾಟಗಾರರು ಷಡ್ಯಂತ್ರ ಮಾಡುವವರ ಜೊತೆಗೆ ಕೈ ಜೋಡಿಸಿದ್ದಾರೆ. ಇವರಿಗೆಲ್ಲಾ ಶಕ್ತಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಸಿದ್ಧರಾಮಯ್ಯ ಇರುವುದೇ ಹಿಂದೂಗಳ ಸರ್ವನಾಶಕ್ಕೆ. ಹಿಂದೂ ಧರ್ಮದ ರಕ್ಷಣೆಗೆ ಶಕ್ತಿ ಕೊಡಿ ಎಂದು ನಾವೆಲ್ಲರೂ ಹೋಗಿ ಮಂಜುನಾಥನ ಸನ್ನಿಧಿಯಲ್ಲಿ ಬೇಡಿ ಬಂದಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಜ್ಞಾನೇಶ್ವರ್, ಮೋಹನ್ ರೆಡ್ಡಿ, ಜ್ಯೋತಿಪ್ರಕಾಶ್, ಮಾಲತೇಶ್, ದೀನದಯಾಳ್, ರಶ್ಮಿ ಶ್ರೀನಿವಾಸ್, ನಾಗರಾಜ್, ಸುನಿತಾ ಅಣ್ಣಪ್ಪ, ಮಂಜುನಾಥ್, ರಾಹುಲ್ ಬಿದರೆ, ವಿಶ್ವನಾಥ್, ಸಂಗೀತಾ ನಾಗರಾಜ್ ಮೊದಲಾದವರು ಇದ್ದರು.

PREV

Recommended Stories

ಉದ್ಭವ ಶಿವಲಿಂಗ, ನಂದಿ ಬಸವ ಭಗ್ನ
ಹಾಲು ಉತ್ಪಾದನೆಯಲ್ಲಿ ವಿಜಯಪುರ ಪಾಲು ಪ್ರಧಾನ