ಕನ್ನಡಪ್ರಭ ವಾರ್ತೆ ಹಾಸನ
ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನಗರದ ಹೇಮಾವತಿ ಪ್ರತಿಮೆ ಬಳಿ ಜಯಕರ್ನಾಟಕ ಸಂಘಟನೆಯು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆಯಲ್ಲಿ ಗುರುವಾರ ಮೌನ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಎಂ.ಕೆ.ಆರ್. ಸೋಮೇಶ್ ಮಾತನಾಡಿ, ವಿವಿಧ ತಾಲೂಕುಗಳಲ್ಲಿನ ಕಾಡಾನೆಗಳ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಮ್ಮ ಆಗ್ರಹವಾಗಿದೆ. ಬೇಲೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಬೆಳೆದ ಬೆಳೆ ದಿನದಿಂದ ದಿನಕ್ಕೆ ಹೆಚ್ಚು ನಾಶವಾಗುತ್ತಲೇ ಇದೆ. ಬೇಲೂರು ತಾಲೂಕಿನಲ್ಲಿ ಈಗಾಗಲೇ ೬೦ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ. ಆದರೆ ಈಗ ವಿಧಾನಸಭಾ ಅಧಿವೇಶನ ಪ್ರಾರಂಭವಾಗಲಿರುವುದರಿಂದ ಜನರು ಸರ್ಕಾರದ ವಿರುದ್ಧ ಮಾತನಾಡಬಾರದು ಎಂಬ ಉದ್ದೇಶದಿಂದ ಸರ್ಕಾರ ಮತ್ತು ಅಧಿಕಾರಿಗಳು ಜನರ ಕಣ್ಣೊರೆಸುವ ಸಲುವಾಗಿ ಆರು ದಸರಾ ಸಾಕಾನೆಗಳನ್ನು ಬೇಲೂರು ತಾಲೂಕಿಗೆ ಕರೆಸಿ ಕಾಡಾನೆಗಳಿಗೆ ಕೇವಲ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ಆನೆಗಳು ಎಲ್ಲಿವೆ ಎಂಬುದನ್ನು ಮಾತ್ರ ಗುರುತು ಮಾಡಬಹುದೇ ಹೊರತು ರೈತರ ಬೆಳೆ ನಾಶ ತಪ್ಪಿಸಲು ಸಾಧ್ಯವಿಲ್ಲ ಎಂದರು. ಆದ್ದರಿಂದ ಜಿಲ್ಲೆಯಲ್ಲಿ ಶಾಶ್ವತವಾಗಿ ಕಾಡಾನೆಗಳ ಹಾವಳಿಯನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.ಹಾಸನ ಜಿಲ್ಲೆಯ ಬೇಲೂರು-ಆಲೂರು-ಸಕಲೇಶಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ಕಾಡಾನೆಗಳು ಬೀಡು ಬಿಟ್ಟು ರೈತರ, ಬೆಳೆಗಾರರ ತೋಟ, ಜಮೀನುಗಳಿಗೆ ನುಗ್ಗಿ ರೈತರು ವರ್ಷಪೂರ್ತಿ ಶ್ರಮಪಟ್ಟು ಬೆಳೆದ ಬೆಳೆಗಳನ್ನು ಕ್ಷಣಾರ್ಧದಲ್ಲಿ ನಾಶ ಪಡಿಸುತ್ತಿವೆ ಎಂದರು.
ಇದೇ ವೇಳೆ ಜಯಕರ್ನಾಟಕ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಸಂಗಮ್, ಲಕ್ಷ್ಮೀ, ಬೇಲೂರು ತಾಲೂಕು ಅಧ್ಯಕ್ಷ ರಾಜು, ಆಲೂರು ಸಂದೇಶ್, ವಾಸು, ಕಾಪಿ ಬೆಳೆಗಾರರ ಅಧ್ಯಕ್ಷ ಅದ್ಧೂರಿ ಕುಮಾರ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಸದಸ್ಯ ಮಲ್ಲೇಶ್ ಅಂಬೂಗ, ಇತರರು ಉಪಸ್ಥಿತರಿದ್ದರು.