ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮದಲ್ಲಿ ಹುಲ್ಲಿನ ಮೆದೆಯ ಬೆಂಕಿಗೆ ಸಿಲುಕಿ ಜಯಕುಮಾರ್ ಜೀವಂತ ದಹನವಾದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಾರಾಯಣಸ್ವಾಮಿ ಅವರು, ನಂತರ ಮೃತರ ನಿವಾಸಕ್ಕೆ ತೆರಳಿ ಜಯಕುಮಾರ್ ಪತ್ನಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಘಟನೆ ಕುರಿತು ಮಾಹಿತಿ ಸಂಗ್ರಹಿಸಿದರು.
ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ಮೃತ ಜಯಕುಮಾರ್ ಅವರಿಗೆ ಸೇರಿದ ಜಾಗದಲ್ಲಿ ಇದೇ ಗ್ರಾಮದ ರೌಡಿಶೀಟರ್ ಅನಿಲ್ ಕುಮಾರ್ ದಬ್ಬಾಳಿಕೆಯಿಂದ ಹುಲ್ಲಿನ ಮೆದೆ ಹಾಕಿಕೊಂಡಿದ್ದಾನೆ. ಈ ವಿಚಾರವಾಗಿ ಬಹಳ ಹಿಂದಿನಿಂದಲೂ ಜಯಕುಮಾರ್ ಮತ್ತು ಅನಿಲ್ ಕುಮಾರ್ ನಡುವೆ ಗಲಾಟೆಯಾಗುತ್ತಿದ್ದು, ಅನಿಲ್ ಕುಮಾರ್, ಜಯಕುಮಾರ್ ಮತ್ತು ಅವರ ಪತ್ನಿ ಲಕ್ಷ್ಮೀ ಅವರನ್ನು ಬೆಂಕಿ ಹಚ್ಚಿ ಸುಡುವುದಾಗಿ ಬೆದರಿಸಿದ್ದಾನೆ ಎಂದರು.ಅದೇ ಪ್ರಕಾರ ಜಯಕುಮಾರ್ ಅವರನ್ನು ಸುಟ್ಟು ಹಾಕಿದ್ದಾನೆ. ಜಯಕುಮಾರ್ ಪತ್ನಿ ಲಕ್ಷ್ಮೀ ಆ ಸಂದರ್ಭದಲ್ಲಿ ಇದ್ದಿದ್ದರೆ ಆತ ಇಬ್ಬರನ್ನು ಸುಟ್ಟು ಹಾಕುತ್ತಿದ್ದ. ಅನಿಲ್ ಕುಮಾರ್ ಹಾಕಿದ ಬೆದರಿಕೆಯ ಬಗ್ಗೆ ಜಯಕುಮಾರ್ ಮೇ 16 ರಂದು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾನೆ. ದೂರು ಬಂದ ತಕ್ಷಣವೇ ಪೊಲೀಸರು ಕ್ರಮವಹಿಸಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಎಂದು ಹೇಳಿದರು.
ಪೊಲೀಸರಿಂದಲೇ ದಲಿತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಪ್ರಕರಣದ ದೂರನ್ನು ತಿರುಚಲಾಗಿದೆ. ಕೊಲೆ ಪ್ರಕರಣವನ್ನು ಪೊಲೀಸರು ಆತ್ಮಹತ್ಯೆ ಎಂದು ಸೃಷ್ಟಿಸಿದ್ದಾರೆ. ಜಯಕುಮಾರ್ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕುಸಿದಿದೆ. ಕೊಲೆ, ಅತ್ಯಾಚಾರದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ ಇದೆಲ್ಲಾ ಕಾಮನ್ ಎನ್ನುತ್ತಿದ್ದಾರೆ. ಅಂಬೇಡ್ಕರ್ ಸಾರಿದ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಆಶಯದ ಸಂವಿಧಾನವನ್ನು ಕೇವಲ ಕೈಯಲ್ಲಿ ಇಟ್ಟುಕೊಂಡು ಅಲ್ಲಾಡಿಸಿದರೆ ಸಾಲದು. ಅದನ್ನು ಹೃದಯಕ್ಕೆ ತುಂಬಿಕೊಳ್ಳುವಂತೆ ಛೇಡಿಸಿದರು.
ಈ ವೇಳೆ ಮಾಜಿ ಸಚಿವರಾದ ಕೆ.ಸಿ.ನಾರಾಯಣಗೌಡ, ಕೊಳ್ಳೆಗಾಲ ಮಹೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಇಂದ್ರೇಶ್, ತಾಲೂಕು ಅಧ್ಯಕ್ಷ ಸಾರಂಗಿ ನಾಗರಾಜು, ಮುಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶೀಳನೆರೆ ಭರತ್, ಮುಖಂಡರಾದ ಅಗ್ರಹಾರಬಾಚಹಳ್ಳಿ ಜಗದೀಶ್, ಭಾರತೀಪುರ ಪುಟ್ಟಣ್ಣ, ಕೆ.ಸಿ.ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಗ್ರಾಮಾಂತರ ಪೊಲೀಸ್ ನಿರೀಕ್ಷಕ ಆನಂದೇಗೌಡ ಮತ್ತಿತರರಿದ್ದರು.