ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಇನ್ನೂ ತೀರ್ಮಾನಿಸಿಲ್ಲ : ಮುಷ್ತಾಕ್‌

KannadaprabhaNewsNetwork |  
Published : Jul 6, 2025 1:48 AM ISTUpdated : Jul 6, 2025 9:44 AM IST
22 | Kannada Prabha

ಸಾರಾಂಶ

ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳುವ ಕುರಿತು ಇನ್ನೂ ತೀರ್ಮಾನಿಸಿಲ್ಲ. ಸಮ್ಮೇಳನಕ್ಕೆ ಇನ್ನೂ ಸಾಕಷ್ಟು ದಿನಗಳು ಇವೆ ಎಂದು ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ತಿಳಿಸಿದರು.

  ಮೈಸೂರು :  ಬಳ್ಳಾರಿಯಲ್ಲಿ ನಡೆಯಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳುವ ಕುರಿತು ಇನ್ನೂ ತೀರ್ಮಾನಿಸಿಲ್ಲ. ಸಮ್ಮೇಳನಕ್ಕೆ ಇನ್ನೂ ಸಾಕಷ್ಟು ದಿನಗಳು ಇವೆ ಎಂದು ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಸಂಘ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿರುವ ಅವ್ಯವಹಾರದ ಕುರಿತು ಸರ್ಕಾರ ತನಿಖೆಗೆ ಆದೇಶಿಸಿದೆ. ಕಸಾಪ ರಾಜ್ಯಾಧ್ಯಕ್ಷರ ವಿರುದ್ಧವೇ ಗಂಭೀರ ಆರೋಪಗಳು ಕೇಳಿ ಬಂದಿವೆ. ಹೀಗಾಗಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಬೇಕೆ ಬೇಡವೇ ಎಂಬ ಪ್ರಶ್ನೆ ಎದುರಾಗಿರುವುದು ಸಹಜ ಎಂದರು.

ಆದರೆ, ಕಸಾಪ ರಾಜ್ಯಾಧ್ಯಕ್ಷರೊಬ್ಬರೇ ಎಲ್ಲವೂ ಆಗಿಲ್ಲ. ಎಲ್ಲಾ ಜಿಲ್ಲೆಗಳ ಅಧ್ಯಕ್ಷರನ್ನೂ ಕಸಾಪ ಒಳಗೊಂಡಿದೆ. ಹೀಗಾಗಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳುವ ಕುರಿತು ಈಗಲೇ ಯಾವುದೇ ತೀರ್ಮಾನಕ್ಕೆ ಬಂದಿಲ್ಲ‌. ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನಿಸುತ್ತೇನೆ ಎಂದು ಅವರು ಹೇಳಿದರು.

ಹಾವೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರಿಗೆ ಗೋಷ್ಠಿಗೂ ಅವಕಾಶ ನೀಡದ ಅಧ್ಯಕ್ಷರು, ಈ ಬಾರಿ ಸರ್ವಾಧ್ಯಕ್ಷ ಸ್ಥಾನಕ್ಕೆ ಆಹ್ವಾನ ನೀಡಿದ್ದಾರೆ. ಇದು ಅವರಲ್ಲಾದ ಬದಲಾವಣೆಯೇ, ಒತ್ತಡವೇ, ಸಾಮಾಜಿಕ ಸ್ಥಿತ್ಯಂತರವೇ ಅಥವಾ ಅನಿವಾರ್ಯವೇ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಅದರ ಹೊರತಾಗಿ ಪ್ರಜಾಸತ್ತಾತ್ಮಕವಾಗಿ ಸರ್ವಾಧ್ಯಕ್ಷರ ಆಯ್ಕೆ ಮಾಡಿದ್ದು, ಸಂಸ್ಥೆಯ ಆಹ್ವಾನಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ದಸರಾ ಉದ್ಘಾಟನೆಗೆ ಆಹ್ವಾನಿಸುವ ಕುರಿತು ಚರ್ಚೆಯಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕೂಸು ಹುಟ್ಟುವ ಮೊದಲೇ ಹೆಸರಿಡುವುದು ಬೇಡ. ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಕಾಯೋಣ ಎಂದರು.

ಗಂಡಾಳ್ವಿಕೆ ವ್ಯವಸ್ಥೆ ಇನ್ನೂ ಹೋಗಿಲ್ಲ:

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಅವಹೇಳನಕಾರಿಯಾಗಿ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿ, ಸಮಾಜದಲ್ಲಿ ಗಂಡಾಳ್ವಿಕೆ ವ್ಯವಸ್ಥೆ ಇನ್ನೂ ಹೋಗಿಲ್ಲ. ಆದರೆ, ಶಾಲಿನಿ ರಜನೀಶ್‌ ಅವರು ಪ್ರಜಾಸತ್ತಾತ್ಮಕ ಅಧಿಕಾರ ಹೊಂದಿದ್ದಾರೆ. ಇದನ್ನು ಅವಮಾನವಾಗಿ ತೆಗೆದುಕೊಳ್ಳದೆ, ಸಾರ್ವಜನಿಕವಾಗಿ ಮಹಿಳಾ ನಿಂದನೆ ಮಾಡುವವರ ವಿರುದ್ಧ ಕಾಯ್ದೆ ತರಲಿ. ಅಶ್ಲೀಲ ಪದ ಮಾತನಾಡುವವರಿಗೆ ಮಾನಸಿಕ ಚಿಕಿತ್ಸೆ ಆಗಬೇಕಿದೆ ಎಂದರು.

ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಎಂಎಲ್ಸಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆಗ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು ಹಾಕಿದ್ದರು. ಆಗ ನಾನು ಒಂದು ಪತ್ರ ಬರೆಯುವ ಮೂಲಕ ಮಹಿಳಾ ನಿಂದಕರಿಗೆ ಕಠಿಣ ಶಿಕ್ಷೆ ನೀಡುವಂತಹ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿದ್ದೆ. ಸರ್ಕಾರ ಅವರದೇ ಇರುವಾಗ ಕಠಿಣ ಕಾನೂನು ತರಬೇಕೆಂದು ಹೇಳಿದ್ದೆ. ಆ ಬಗ್ಗೆ ನಾನು ಈಗಲೂ ಒತ್ತಾಯಿಸುತ್ತೇನೆ. ಮಹಿಳೆಯರನ್ನು ಅವಹೇಳನ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವಂತಹ ಕಾಯ್ದೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಬಾನು ಮುಷ್ತಾಕ್ ಅವರ ಪ್ರತಿರೋಧದ ದನಿ ನಿರಂತರ ಸ್ಪೂರ್ತಿ

 ಮೈಸೂರು :  ಬಾನು ಮುಷ್ತಾಕ್ ಅವರ ಪ್ರತಿರೋಧದ ದನಿ ನಿರಂತರ ಸ್ಪೂರ್ತಿ. ದಶಕಗಳ ಅನ್ಯಾಯದ ವಿರುದ್ಧದ ಹೋರಾಟದ ದನಿಗೆ ಈಗ ಪ್ರಶಸ್ತಿ ಸಿಕ್ಕಿರುವುದಾಗಿ ಚಲನಚಿತ್ರ ನಟ ಪ್ರಕಾಶ್‌ ರಾಜ್‌ ಅಭಿಪ್ರಾಯಪಟ್ಟರು.

ನಗರದ ಜಯಲಕ್ಷ್ಮೀಪುರಂನ ಕೊಡವ ಸಹಕಾರ ಸಂಘದ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಅಭಿರುಚಿ ಪ್ರಕಾಶನದ 30ನೇ ವರ್ಷದ ಸಂಭ್ರಮಾಚರಣೆ ಹಾಗೂ ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್‌ ಅವರ ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಲ್ಲಿ ಬಾನು ಮುಷ್ತಾಕ್ ಅವರ ಪ್ರತಿರೋಧದ ದನಿಯ ಬಗ್ಗೆ ಮಾತಾಡಬೇಕಿದೆ. ನಾಲ್ಕು ದಶಕಗಳ ಪ್ರತಿರೋಧದ ದನಿಗೆ ಬೂಕರ್ ಪ್ರಶಸ್ತಿ ಬಂದಿದೆ. ಬಾನು ಮುಷ್ತಾಕ್ ಅವರ ಪ್ರತಿರೋಧದ ದನಿ ನಿರಂತರ ಸ್ಪೂರ್ತಿ. ಈ ದಿನದ ಸಂಜೆಯ ಹಣತೆ ಬಾನು ಮುಷ್ತಾಕ್ ಹಾಗೂ ಅಭಿರುಚಿ ಪ್ರಕಾಶನದ ಮೂರು ದಶಕಗಳ ಕಾಲ ಉತ್ತಮ ಅಭಿರುಚಿ ಬೆಳೆಸಿರುವುದಾಗಿ ಅವರು ಹೇಳಿದರು.

ದೇವನಹಳ್ಳಿ ಹೋರಾಟದ ಕುರಿತು ದೆಹಲಿಯಲ್ಲಿ ಸಣ್ಣ ವಿಷಯವನ್ನು ಯಾಕೇ ದೇಶದ ದೊಡ್ಡ ಸಂಗತಿಯನ್ನಾಗಿ ಬಿಂಬಿಸುತ್ತಿದೆ? ಎಂದು ಒಬ್ಬರು ಪ್ರಶ್ನಿಸಿದಾಗ ಬಾನು ಮುಷ್ತಾಕ್ ಅವರು ನನಗೆ ನೆನಪಿಗೆ ಬಂದರು. ಯಾವ ಕತೆಯೂ ಸಣ್ಣದಲ್ಲ. ನಮ್ಮದಲ್ಲದ ನೋವಿಗೆ ಸ್ಪಂದಿಸುವ ಬಾನು ಮುಷ್ತಾಕ್ ಅವರಿಗೆ ಪ್ರಶಸ್ತಿ ಬಂದಿರುವುದಾಗಿ ಅವರು ಹೇಳಿದರು.

ಬಾನು ಮುಷ್ತಾಕ್ ಅವರ ಎದೆಯ ಹಣತೆ 3ನೇ ಮುದ್ರಣ, ಹಸೀನಾ ಮತ್ತು ಇತರ ಕಥೆಗಳು ನಾಲ್ಕನೇ ಮುದ್ರಣ, ಪ್ರೊ.ಪಿ.ವಿ. ನಂಜರಾಜ ಅರಸ್ ಅವರ ಇತಿಹಾಸ ಸೃಷ್ಟಿಸಿದ ಹದಿನಾರು, ಟೀಪೂ ಮಾನ್ಯತೆ ಸಿಗದ ಸುಲ್ತಾನ್: ಅಂದು ಇಂದು ಎರಡನೇ ಮುದ್ರಣ ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು.

ಕನ್ನಡ ಪ್ರಾಧ್ಯಾಪಕಿ ಡಾ. ಲತಾ ಮೈಸೂರು ಬೂಕರ್ ಪ್ರಶಸ್ತಿ ವಿಜೇತರ ಕುರಿತು ಮಾತನಾಡಿದರು. ರಾಜ್ಯ ಮಾಹಿತಿ ಆಯುಕ್ತ ಡಾ. ಹರೀಶ್ ಕುಮಾರ್, ಲೇಖಕ ಪ್ರೊ.ಪಿ.ವಿ. ನಂಜರಾಜ ಅರಸು, ಹಿರಿಯ ಪ್ರಕಾಶಕ ಪ್ರೊ.ಬಿ.ಎನ್. ಶ್ರೀರಾಮ ಇದ್ದರು. ಅಭಿರುಚಿ ಗಣೇಶ್ ಸ್ವಾಗತಿಸಿ ನಿರೂಪಿಸಿದರು. ಆರ್‌. ಸುಮಾ ಇದ್ದರು. ನಿರಂತರ ರಂಗ ತಂಡದ ಕಲಾವಿದರು ಪ್ರಾರ್ಥಿಸಿದರು.

PREV
Read more Articles on