ಕನ್ನಡಪ್ರಭ ವಾರ್ತೆ ವಿಜಯಪುರ
ಬೆಳಗಾವಿಯಲ್ಲಿ ಪಂಚಮಸಾಲಿಗಳ ಹೋರಾಟದಲ್ಲಿ ಗೈರಾಗಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನೇ ಸಮಾಜ ಎಂದೋ ಮನಸ್ಸಿನಿಂದ ಉಚ್ಚಾಟನೆ ಮಾಡಿದಂತಿದೆ. ಆದರೆ, ಅವರು ಪಂಚಮಸಾಲಿ ಶ್ರೀಗಳ ಉಚ್ಚಾಟನೆ ಮಾಡುವ ಬಗ್ಗೆ ಮಾತನಾಡಿರುವುದು ದುರ್ದೈವ ಎಂದು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ದೇವರಹಿಪ್ಪರಗಿ ವಾಗ್ದಾಳಿ ನಡೆಸಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಜಗದ್ಗುರು ಆಗಿ ಸ್ವೀಕರಿಸಿದ್ದು ಸಮಸ್ತ ಸಮಾಜ. ಅವರನ್ನು ಉಚ್ಚಾಟನೆ ಮಾಡುವ ಅಧಿಕಾರ ಟ್ರಸ್ಟ್‌ನವರಿಗೆ ಇಲ್ಲ, ಭೂಮಿ, ಆಸ್ತಿ ನಿಮ್ಮ ಹೆಸರಲ್ಲಿರಬೇಕು. ಆದರೆ ಶ್ರೀಗಳು ಸಮಾಜದ ಆಸ್ತಿ ಅರ್ಥ ಮಾಡಿಕೊಳ್ಳಲಿ. ಜಯಮೃತ್ಯುಂಜಯ ಶ್ರೀಗಳಂತಹ ಸ್ವಾಮೀಜಿ ಸಿಕ್ಕಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ. ಸಮಾಜಕ್ಕೆ ೨ಎ ಹೋರಾಟಕ್ಕೆ ದೊಡ್ಡ ಆಂದೋಲನ ಸ್ಪರ್ಶ ನೀಡಿದ ಜಯಮೃತ್ಯುಂಜಯ ಮಹಾಸ್ವಾಮಿಗಳ ವಿರುದ್ಧ ನಮ್ಮ ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮನಸ್ಸಿಗೆ ನೋವುಂಟು ಮಾಡುವ ಹೇಳಿಕೆಯನ್ನು ಇಲ್ಲಿಗೆ ನಿಲ್ಲಿಸಲಿ ಎಂದು ಆಗ್ರಹಿಸಿದರು.
ಗೊಂದಲ ಸೃಷ್ಟಿಸಬೇಡಿ, ನಿಮ್ಮ ಹೇಳಿಕೆಗಳಿಂದ ಸಮಾಜಕ್ಕೆ ಹಿನ್ನೆಡೆಯಾಗುತ್ತಿದೆ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ ಅರ್ಥ ಮಾಡಿಕೊಳ್ಳಬೇಕು ಎಂದರು.ನಮ್ಮ ಗುರುಗಳ ಬಗ್ಗೆ ಮಾತನಾಡಲು ನೀವು ಯಾರು? ನಿಮ್ಮ ಕೆಲಸ ನೀವು ಮಾಡಿ ಎಂದು ಮಾಜಿ ಶಾಸಕ ನಡಹಳ್ಳಿ ಅವರಿಗೆ ಕಿವಿಮಾತು ಹೇಳಿದರು.
ಇತ್ತಿಚಿನ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮಾಜದ ಬೃಹತ್ ಸಭೆಯನ್ನು ಏ.೨೦ ರಂದು ಕೂಡಲಸಂಗಮದಲ್ಲಿ ಕರೆಯಲಾಗಿದೆ. ಅಲ್ಲಿ ಅನೇಕ ಮಹತ್ವದ ವಿಷಯಗಳನ್ನು ಚರ್ಚೆ ನಡೆಸಲಾಗುವುದು. ಆದ್ದರಿಂದ ಸಮಾಜದ ಮುಖಂಡರು, ಪದಾಧಿಕಾರಿಗಳು ಆಗಮಿಸಬೇಕು ಎಂದು ಮನವಿ ಮಾಡಿದರು.ಬಬಲೇಶ್ವರದ ಮುಖಂಡ ಈರಣ್ಣ ಶಿರಮಗೊಂಡ ಮಾತನಾಡಿ, ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಪ್ರಹಾರ ನಡೆದಾಗ ಅದನ್ನು ಖಂಡಿಸಬೇಕಾದ ವಿಜಯಾನಂದ ಕಾಶಪ್ಪನವರ ಸಮಾಜದವರು ತಾವೇ ಹೊಡೆದುಕೊಂಡಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿದರು. ಸುದ್ದಿಗೋಷ್ಟಿಯಲ್ಲಿ ವಕೀಲ ದಾನೇಶ ಅವಟಿ, ನಿಂಗನಗೌಡ ಸೊಲ್ಲಾಪೂರ, ಶ್ರೀಶೈಲ ಮಳಜಿ, ಸಿದ್ದು ಹಳ್ಳೂರ, ಈರಣ್ಣ ಶಿರಮಗೊಂಡ, ಬಸಲಿಂಗಪ್ಪ ಜಂಗಮಶೆಟ್ಟಿ, ಮಂಜುನಾಥ ನಿರ್ವಾಣಿ, ಸಂಗು ಬಿರಾದಾರ, ಸಂತೋಷ ಬಿರಾದಾರ ಮುಂತಾದವರು ಇದ್ದರು.