ಬ್ಯಾಡಗಿ: ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಸಾಗರದಾಚೆ ತಲುಪಿಸಿದ ದೇಶದ ಕಬಡ್ಡಿ ಕ್ರೀಡಾಪಟುಗಳು ಭಾರತದ ರಾಯಭಾರಿಗಳಿದ್ದಂತೆ. ಆದರೆ ಕಬಡ್ಡಿ ಮೊದಲಿನಂತಿಲ್ಲ. ಹವ್ಯಾಸಿ ಕ್ರೀಡಾಪಟುಗಳು ಇದೀಗ ವೃತ್ತಿಪರರಾಗಿದ್ಧಾರೆ. ಕಷ್ಟಪಟ್ಟು ಸಾಧನೆ ತೋರಿದ ಕ್ರೀಡಾಪಟುಗಳಿಗೆ ಸಾಧನೆಗೆ ತಕ್ಕಂತೆ ಸಂಭಾವನೆ ಕೂಡ ಲಭ್ಯವಾಗುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.ಮಂಗಳವಾರ ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಆಶ್ರಯದಲ್ಲಿ ಬಿಇಎಸ್‌ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೇಸಿಗೆ ಕಬಡ್ಡಿ ತರಬೇತಿ ಶಿಬಿರ ಉದ್ಘಾಟನೆ ಹಾಗೂ ತಮಿಳುನಾಡಿನ ರಾಮೇಶ್ವರಂನಲ್ಲಿ ಜರುಗಿದ ಲಂಗಡಿ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿರುವ ಕ್ರೀಡಾಪಟುಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿರುವ ಕಬಡ್ಡಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಬ್ಯಾಡಗಿ ಪಟ್ಟಣದಲ್ಲಿ ಸ್ವಂತ ನಿವೇಶನ ಹೊಂದಿರುವ ಕಬಡ್ಡಿ ಅಸೋಸಿಯೇಶನ್ ಕ್ರೀಡಾಪಟುಗಳ ಅನುಕೂಲಕ್ಕಾಗಿ ವಸತಿನಿಲಯವೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಕೂಡಲೇ ನೀಲನಕ್ಷೆ ಸಿದ್ಧಪಡಿಸಿದಲ್ಲಿ ಅಗತ್ಯವಿರುವ ಅನುದಾನ ನೀಡಲು ಸರ್ಕಾರ ಈಗಲೂ ಬದ್ಧವಾಗಿದೆ ಎಂದರು. ಕಬಡ್ಡಿಯಲ್ಲೂ ಖ್ಯಾತಿ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ಬ್ಯಾಡಗಿ ಮೆಣಸಿನಕಾಯಿ ಪ್ರಖ್ಯಾತಿ ಪಡೆದಂತೆ ಕಬಡ್ಡಿಯಲ್ಲೂ ಬ್ಯಾಡಗಿ ಖ್ಯಾತಿಯನ್ನು ಪಡೆದಿದೆ. ಪಟ್ಟಣದ ಉತ್ತಮ ಕ್ರೀಡಾಪಟುಗಳು ಕ್ರೀಡೆಯ ಮುಖ್ಯವಾಹಿನಿಯಲ್ಲಿದ್ದಾರೆ. ಇಲ್ಲಿನ ರವೀಂದ್ರ ಶೆಟ್ಟಿ ಥೈಲ್ಯಾಂಡ್ ದೇಶದ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.ದೈಹಿಕವಾಗಿ ಸದೃಢವಾಗಿ: ಅಸೋಸಿಯೇಶನ್ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಯುವಕರು ತಮ್ಮ ಜೀವನದಲ್ಲಿ ಯಶಸ್ವಿಯನ್ನು ಕಾಣಬೇಕಾದರೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯುವಕರು ಗುಟ್ಕಾ ಸೇರಿದಂತೆ ವಿವಿಧ ದುಶ್ಚಟಗಳಿಂದ ದೂರವಿದ್ದು ಕ್ರೀಡೆಗಳಲ್ಲಿ ಪಾಲ್ಗೊಂಡರೆ ದೈಹಿಕವಾಗಿ ಸಮರ್ಥರಾಗಿರಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಸುಮಾರು 50ಕ್ಕೂ ಹೆಚ್ಚು ಮಹಿಳಾ ಕ್ರೀಡಾಪಟುಗಳು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಕೆಎಂಎಫ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ, ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ, ಮುಖಂಡ ನಾಗರಾಜ ಆನ್ವೇರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ವಿಜಯ ಮಾಳಗಿ, ಕೋಚ್ ಮಂಜುಳಾ ಭಜಂತ್ರಿ, ನಿರ್ದೇಶಕಿ ಭಾಗ್ಯಾ ಪಾಟೀಲ, ತೀರ್ಪುಗಾರರಾದ ಮಲ್ಲಿಕಾರ್ಜುನ ಕೋಡಿಹಳ್ಳಿ, ವಿ.ಆರ್. ಬಾಸೂರ, ಎಂ.ಎಸ್. ಹೊಸ್ಮನಿ, ರಮೇಶ ಕರಬಣ್ಣನವರ, ಕುಮಾರಸ್ವಾಮಿ ಹಿರೇಮಠ, ನಾಗರಾಜ ಮೆಡ್ಲೇರಿ, ಉಮಾ ಭಜಂತ್ರಿ, ಅಕ್ಕಮ್ಮ ಮಾಳಗಿ, ಜ್ಯೋತಿ ಪಾಟೀಲ, ಪ್ರಕಾಶ ತಾವರಗಿ, ಎ.ಟಿ. ಪೀಠದ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಎನ್.ಎಸ್. ಪ್ರಶಾಂತ್ ನಿರ್ವಹಿಸಿದರು. ಸುರೇಶಕುಮಾರ ಪಾಂಗಿ ಸ್ವಾಗತಿಸಿದರು. ಪ್ರಭು ದೊಡ್ಮನಿ ವಂದಿಸಿದರು.