- ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಮೂಲಮಠ, ಶ್ರೀಗಳ ಮಠ ಕಟ್ಟಲು ಚಿಂತನೆ: ಹೇಳಿಕೆ
- ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಗದಗ-ಹುಬ್ಬಳ್ಳಿಗಷ್ಟೇ ಸೀಮಿತ
- ಸಿಎಂ ಮಾತುಕೇಳಿ ಸಮಾಜ ಒಡೆಯಲು ಕಾಶೆಪ್ಪನವರ್ ಯತ್ನ- ಸಮಾಜ ಶ್ರೀಗಳ ಜೊತೆಗಿದೆಯೇ ಹೊರತು, ಟ್ರಸ್ಟ್ ಜೊತೆಗೆ ಅಲ್ಲ
- ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಸಿದ್ದರಾಮಯ್ಯಗೆ ಬಕೆಟ್ ಹಿಡಿಯುತ್ತಾರೆ
ಕನ್ನಡಪ್ರಭ ವಾರ್ತೆ ದಾವಣಗೆರೆ ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಭಕ್ತರು ಮುಖ್ಯವಾಗಿದ್ದಾರೆ. ಇಂತಹ ಶ್ರೀಗಳನ್ನು ಪೀಠದಿಂದ ಪದಚ್ಯುತಗೊಳಿಸಿದ್ದನ್ನು ಇಡೀ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಪಂಚಮಸಾಲಿ ಸಮಾಜ ಜಿಲ್ಲಾಧ್ಯಕ್ಷ ಅಶೋಕ ಗೋಪನಾಳ ಹೇಳಿದರು.
ನೂರು ಮಠಗಳನ್ನು ಕಟ್ಟುವ ಶಕ್ತಿ ನಮ್ಮ ಸಮಾಜಕ್ಕೆ ಇದೆ. ಪಂಚಮಸಾಲಿ ಪೀಠದ ಮಠಾಧಿಪತಿಯಾಗಿ ಶ್ರೀ ಜಯಮೃತ್ಯುಂಜಯ ಸ್ವಾಮಿಗಳೇ ಮುಂದುವರಿಸುತ್ತಾರೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಗದಗ-ಹುಬ್ಬಳ್ಳಿಗಷ್ಟೇ ಸೀಮಿತ ಎಂದು ಹೇಳಿದರು.
ಕಾಶೆಪ್ಪನವರ ತಕ್ಷಣ ಶ್ರೀಗಳು, ಸಮಾಜದ ಕ್ಷಮೆ ಕೋರಬೇಕು. ಸಿಎಂ ಮಾತು ಕೇಳಿ, ಸಮಾಜ ಒಡೆಯಲು ಕಾಶೆಪ್ಪನವರ್ ಹೀಗೆ ವರ್ತಿಸುತ್ತಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಸಿದ್ದರಾಮಯ್ಯ ಅವರಿಗೆ ಬಕೆಟ್ ಹಿಡಿಯುವ ಕೆಲಸ ಕಾಶೆಪ್ಪನವರ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಪೀಠ ಸ್ಥಾಪಿಸುವ ಶಕ್ತಿ ಸಮಾಜಕ್ಕಿದೆ. ಕಾಶೆಪ್ಪನವರ್ ಮಾನಸಿಕ ರೋಗಿಯಂತೆ ವರ್ತಿಸುವುದನ್ನು ನಿಲ್ಲಿಸಲಿ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಬಳಿ ಇರುವ 13 ಗುಂಟೆ ಜಾಗದಲ್ಲಿ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಮೂಲ ಮಠವನ್ನು, ಮತ್ತೊಂದೆಡೆ ಇರುವ 12 ಎಕರೆ ಜಾಗದಲ್ಲಿ ಶ್ರೀಗಳ ಮಠ ಕಟ್ಟಲು ಚಿಂತನೆ ನಡೆಸಲಾಗಿದೆ ಎಂದು ಅಶೋಕ ತಿಳಿಸಿದರು.
- - -