ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭ್ರಷ್ಟಾಚಾರ ನಿಯಂತ್ರಿಸಿ ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡಬೇಕಾಗಿದ್ದ ರಾಜ್ಯ ಸರ್ಕಾರವೇ ಭ್ರಷ್ಟ ಎಂಜಿನಿಯರ್‌ಗಳ ರಕ್ಷಣೆಗೆ ನಿಂತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಅವ್ಯವಹಾರದ ದಾಖಲೆಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಜಯಣ್ಣ, ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಹೇಮಾವತಿ ಎಡದಂಡೆ ನಾಲೆಯ ಸರಪಳಿ 72.260 ರಿಂದ ಸರಪಳಿ 214.300 ರ ವರೆಗೆ ನಾಲೆಯ ಆಧುನೀಕರಣಕ್ಕೆ 883.50 ಕೋಟಿ ರು. ಬಿಡುಗಡೆ ಮಾಡಿದ್ದರು. ಮುಂದಿನ ದಿನಗಳಲ್ಲಿ ಈ ಕಾಮಗಾರಿಯ ವೆಚ್ಚ ಒಂದು ಸಾವಿರ ಕೋಟಿ ರು. ದಾಟಿತು. ವಿಜಯಪುರ ಜಿಲ್ಲೆಯ ಪ್ರಥಮ ದರ್ಜೆ ಗುತ್ತಿಗೆದಾರ ಎಂ.ವೈ.ಕಟ್ಟಿಮನಿ ಎನ್ನುವವರು 2018ನೇ ಸಾಲಿನಲ್ಲಿ ಕಾಮಗಾರಿ ಆರಂಭಿಸಿ 2021ನೇ ಸಾಲಿನಲ್ಲಿ ಪೂರ್ಣಗೊಳಿಸಿದರು ಎಂದರು.ನಿಯಮಾನುಸಾರ ನಾಲಾ ಏರಿಯ ಮೇಲೆ ಜೀವ ರಕ್ಷಕ ಗಾರ್ಡ್ ಸ್ಟೋನ್ ಅಳವಡಿಸದೆ, ನಾಲಾ ಏರಿಗೆ ಗ್ರಾವಲ್ ಮಣ್ಣು ಹಾಕದೆ, ಅಗತ್ಯವಿರುವಲ್ಲಿ ಬಂಡಿ ಸೇತುವೆಗಳನ್ನು ನಿರ್ಮಿಸದೆ, ಕ್ಯಾಟಲ್ ರ್ಯಾಂಪ್, ಸೈಡ್‌ವಾಲ್, ಕಟ್ ಅಫ್ ವಾಲ್, ಟೋವಾಲ್, ಪಿಂಚ್ಚಿಂಗ್ ಮಾಡದೆ, ಸೂಪರ್ ಪ್ಯಾಸೇಜ್ ಬಳಿ ಹಾರ್ಡ್ ಪಾಥ್ ನಿರ್ಮಿಸದೆ ಮುಂತಾದ ಹತ್ತು ಹಲವು ಕಾಮಗಾರಿಗಳನ್ನು ನಿರ್ವಹಿಸದೆ ಪುಕ್ಕಟೆ ಬಿಲ್ ಮಾಡಿಕೊಂಡು ಸುಮಾರು 500 ಕೋಟಿ ರು.ಗೂ ಅಧಿಕ ಹಣವನ್ನು ಲೂಟಿ ಮಾಡಲಾಗಿದೆ ಎಂದು ವಿವರಿಸಿದರು.
ನಮ್ಮ ಸತತ ಒತ್ತಡದ ಮೇರೆಗೆ ಭ್ರಷ್ಟ ಎಂಜಿನಿಯರ್‌ಗಳ ವಿರುದ್ಧ ಕ್ರಮ ವಹಿಸಲು ರಾಜ್ಯ ಜಲಸಂಪನ್ಮೂಲ ಇಲಾಖೆಯ ಮುಖ್ಯ ಕಾರ್ಯದರ್ಶಿ ನೀಡಿದ್ದ ಪೂರ್ವಾನುಮತಿ ಪತ್ರವನ್ನು ಇದೀಗ ಹಿಂಪಡೆಯಲಾಗಿದೆ. ಅಕ್ರಮ ಎಸೆಗಿರುವವರ ವಿರುದ್ಧ ಕ್ರಮ ವಹಿಸಲು ಲೋಕಾಯುಕ್ತರು ಮುಂದಾಗುವಷ್ಟರಲ್ಲಿಯೇ ಭ್ರಷ್ಟ ನೌಕರರು ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಲೋಕಾಯುಕ್ತ ತನಿಖೆಗೆ ಹಿನ್ನಡೆಯಾಗಿದೆ ಎಂದರು.
ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಸಾಮಾಜಿಕ ಕಳಕಳಿಯಿದ್ದರೆ ತಕ್ಷಣವೇ ಹೇಮಾವತಿ ಎಡದಂಡೆ ನಾಲಾ ಆಧುನೀಕರಣ ಕಾಮಗಾರಿಯಲ್ಲಿನ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ರೈತ ಹೋರಾಟಗಾರ ಪಿ.ಬಿ.ಮಂಚನಹಳ್ಳಿ ನಾಗೇಗೌಡ, ಕರೋಟಿ ರವಿ, ರಾಮಣ್ಣ ಇತರರಿದ್ದರು.