ಕನ್ನಡಪ್ರಭ ವಾರ್ತೆ ಭದ್ರಾವತಿ
ಹಳೇನಗರದ ಶ್ರೀ ಅಕ್ಕಮಹಾದೇವಿ ಬಳಗದಿಂದ ಗುರುವಾರ ವೀರವೀರಾಗಿಣಿ, ಕನ್ನಡದ ಪ್ರಪ್ರಥಮ ಮಹಿಳಾ ಕವಯಿತ್ರಿ, ಜಗದ ಅಕ್ಕ ಶ್ರೀ ಅಕ್ಕಮಹಾದೇವಿಯವರ ಜಯಂತ್ಯುತ್ಸವ ಸಮಾರಂಭದ ಅಂಗವಾಗಿ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಜಾಗೃತಿ ದಿನಾಚರಣೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಶ್ರೀಗಳು ಆಶೀವರ್ಚನ ನೀಡಿದರು.
ಸರ್ಕಾರ ಆದರ್ಶ ವ್ಯಕ್ತಿಗಳ ಜಯಂತಿಗಳಂದು ಸಾರ್ವಜನಿಕ ರಜೆ ನೀಡುವುದು ಸರಿಯಲ್ಲ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಆದರ್ಶ ವ್ಯಕ್ತಿಗಳ ಜಯಂತಿಗಳಂದು ಆವರ ಕುರಿತು ಮಾಹಿತಿ ನೀಡುವ ಮೂಲಕ ಅರ್ಥಪೂರ್ಣವಾಗಿ ಜಯಂತಿಗಳನ್ನು ಆಚರಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಸಂಪನ್ಮೂಲ ವ್ಯಕ್ತಿಗಳಿಂದ ಯುವ ಸಮುದಾಯಕ್ಕೆ ಹೆಚ್ಚಿನ ಮಾಹಿತಿ ಲಭಿಸಬೇಕು. ಕೇವಲ ನೆಪ ಮಾತ್ರಕ್ಕೆ ಜಯಂತಿ ಆಚರಣೆಯಾಗಬಾರದು ಎಂದರು.ಅಕ್ಕಮಹಾದೇವಿಯವರು ಚನ್ನಮಲ್ಲಿಕಾರ್ಜುನನ ಒಲುಮೆಗಾಗಿ ದಿಗಂಬರ ಸನ್ಯಾಸಿಯಾದರು. ಆದರೆ ಪ್ರಸ್ತುತ ತಾವು ಸಹ ಏಕಾಗಬಾರದು ಎಂಬ ಪ್ರಶ್ನೆಯನ್ನು ಹರೆಯದ ಕನ್ಯೆಯರು ಪ್ರಶ್ನಿಸುತ್ತಾರೆ? ಅಕ್ಕಮಹಾದೇವಿಯವರು ಜಗತ್ತಿಗೋಸ್ಕರ ದಿಗಂಬರರಾದರು ಹೊರತು, ಯಾವುದೇ ಆಸೆಗೋಸ್ಕರ ಅಲ್ಲ ಎಂದರು.
ಅಕ್ಕ ಮಹಾದೇವಿ ವಿರಚಿತ ವಚನಗಳಲ್ಲಿ ಪ್ರಕೃತಿಯಲ್ಲಿ ದೇವರನ್ನು ಹುಡುಕುವ ಹಂಬಲವಿದೆ. ತನ್ನ ಇಷ್ಟದೈವವಾದ ಚನ್ನಮಲ್ಲಿಕಾರ್ಜುನನನ್ನು ಅರಸುತ್ತ ಗಿಳಿ, ನವಿಲು, ತರುಲತೆಗಳ ಜೊತೆ ಅವರು ನಡೆಸುವ ಸಂವಹನ ಕನ್ನಡ ಕಾವ್ಯದಲ್ಲಿ ನಡೆದಿರುವ ಅಪರೂಪದ ಪ್ರಯೋಗ ಎಂದರು.
ಅಕ್ಕಮಹಾದೇವಿಯ ಜೀವನ ಹಾಗೂ ಸಂದೇಶದ ಕುರಿತು ಉಪನ್ಯಾಸ ನೀಡಿದ ಕುವಿವಿಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ, ಮುಖ್ಯವಾಹಿನಿಯಲ್ಲಿ ಮಹಿಳೆಗೆ ಪ್ರಾತಿನಿಧ್ಯವಿರದಿದ್ದ ಕಾಲಮಾನದಲ್ಲಿ ಅಕ್ಕಮಹಾದೇವಿ ಮಹತ್ವದ ಸಾಹಿತ್ಯಿಕ ಪ್ರಯೋಗಗಳನ್ನು ನಡೆಸಿದಳು. ದಿಟ್ಟತನ ಹಾಗೂ ತಾಳ್ಮೆ ಅಕ್ಕಮಹಾದೇವಿಯ ವ್ಯಕ್ತಿತ್ವ ಹಾಗೂ ಕಾವ್ಯದಲ್ಲಿ ಕಂಡುಬರುವ ಪ್ರಧಾನ ಗುಣಗಳು ಎಂದರು.
ಅಕ್ಕಮಹಾದೇವಿ ಬಳಗದ ಸಂಚಾಲಕ ಟಿ.ಜಿ ಬಸವರಾಜಯ್ಯ, ಆರ್. ಮಲ್ಲಿಕಾಂಬ, ಗಂಗಾ ಕುಬ್ಸದ್ ಉಪಸ್ಥಿತರಿದ್ದರು. ಶ್ರೀ ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ ಹಿರೇಮಠ್, ಸಂಚಾಲಕ ಟಿ.ಜಿ ಬಸವರಾಜಯ್ಯ ದಂಪತಿ, ಪತ್ರಕರ್ತ ಕೆ.ಆರ್ ಶಂಕರ್ ದಂಪತಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಸೇರಿದಂತೆ ೧೩ ಜನರು ಸ್ವಯಂ ಪ್ರೇರಣೆಯಿಂದ ದೇಹಾಂಗ ದಾನಕ್ಕೆ ವಚನ ಪತ್ರ ನೀಡಿ, ಶ್ರೀಗಳಿಂದ ಆಶೀರ್ವಾದ ಪಡೆದರು.