ಕನ್ನಡಪ್ರಭ ವಾರ್ತೆ ಉಡುಪಿ
ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು, ಬಿಜೆಪಿಯಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿಯ ಆಯ್ಕೆಯನ್ನು ಇನ್ನಷ್ಟು ಕಗ್ಗಂಟುಗೊಳಿಸಿದ್ದಾರೆ.ಬಿಜೆಪಿಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಖ್ಯಾತನಾಮ ಅಭ್ಯರ್ಥಿಗಳನ್ನು ಬಿಟ್ಟು ಸಾಮಾನ್ಯ ಕಾರ್ಯಕರ್ತರ ನಡುವಿನ ಅಭ್ಯರ್ಥಿಯ ಬಗ್ಗೆ ಚರ್ಚೆಗಳು ಆರಂಭವಾಗಿವೆ.ಬಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾಗುವ ಷರತ್ತಿನ ಮೇರೆಗೆ ಕಾಂಗ್ರೆಸ್ ಗೆ ಸೇರಿದ್ದಾರೆ. ಅವರು ಅಭ್ಯರ್ಥಿಯಾದರೆ ಉಡುಪಿ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿರುವ, ಬಿಜೆಪಿಯ ಸಾಂಪ್ರದಾಯಿಕ ಮತದಾರರಾಗಿರುವ ಬಂಟ ಸಮುದಾಯದ ಮತದಾರರು ಹೆಗ್ಡೆ ಅವರನ್ನು ಬೆಂಬಲಿಸುವ ಸಾಧ್ಯತೆಗಳಿವೆ. ಇದು ಬಿಜೆಪಿಯ ತಲೆನೋವಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯೂ ಬಂಟ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಅಥವಾ ಕ್ಷೇತ್ರದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಬಿಲ್ಲವ (ಈಡಿಗ) ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ.ಬಿಲ್ಲವ ಸಮುದಾಯದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರು ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು ಪ್ರಸ್ತಾಪ ಆಗಿರುವುದನ್ನು ಗಮನಿಸಿದ್ದೇನೆ, ಪಕ್ಷದ ನಿರ್ಧಾರ ನಿರ್ದೇಶನವನ್ನು ಪಾಲಿಸುತ್ತೇನೆ ಎಂದು ಹೇಳಿದ್ದು, ಟಿಕೇಟ್ ಸಿಕ್ಕಿದರೆ ಲೋಕಸಭೆಗೂ ಸೈ ಎಂದು ಹೇಳಿದ್ದಾರೆ.ಇನ್ನು ಬಂಟ ಸಮುದಾಯದ ಬಿಜೆಪಿಯ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯಕುಮಾರ್ ಶೆಟ್ಟಿ ಅವರು ಸ್ವತಃ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರ ಪರ ಚಿಕ್ಕಮಗಳೂರಿನಲ್ಲಿ ಸಭೆಯೂ ನಡೆದಿದೆ. ಕಾಂಗ್ರೆಸ್ ನ ಬಂಟ ಅಭ್ಯರ್ಥಿಗೆ ಕೌಂಟರ್ ಕೊಡುವುದಕ್ಕೆ ಉದಯಕುಮಾರ್ ಶೆಟ್ಟಿ ಅವರ ಹೆಸರು ಕೂಡ ಸುದ್ದಿಯಲ್ಲಿದೆ. ಅತ್ತ ಶೋಭಾ ಕರಂದ್ಲಾಜೆ ಅವರಿಗೆ ಪುನಃ ಟಿಕೇಟು ನೀಡುವುದಕ್ಕೆ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ. ಮೊಗವೀರ ಸಮುದಾಯದ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿರುವ ಪ್ರಮೋದ್ ಮಧ್ವರಾಜ್ ಕೂಡ ಟಿಕೇಟಿಗಾಗಿ ಪಕ್ಷದ ವರಿಷ್ಠರ ಬಳಿ ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ - ಚಿಕ್ಕಮಗಳೂರು ಬಿಜೆಪಿಯಲ್ಲಿದ್ದ ಗೊಂದಲ ಜಯಪ್ರಕಾಶ್ ಹೆಗ್ಡೆ ಅವರು ಕಾಂಗ್ರೆಸ್ ಸೇರ್ಪಡೆಯಿಂದ ಇನ್ನಷ್ಟು ಜಟಿಲವಾಗಿದೆ.