ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಳ್ಳಂ ಬೆಳಿಗ್ಗೆಯೇ ನಗರದ ಹೊರ ವಲಯದ ಲೋಕಿಕೆರೆ ರಸ್ತೆಯ ಇಂಡಸ್ಟ್ರಿಯಲ್ ಏರಿಯಾ ಶ್ರೀರಾಮನಗರದಲ್ಲಿ ಶನಿವಾರ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ 36 ಮನೆಗಳ ತೆರವಿಗೆ ಪೊಲೀಸ್ ಭದ್ರತೆಯಲ್ಲಿ ಜೆಸಿಬಿ ಯಂತ್ರಗಳು ಮುಂದಾಗುತ್ತಿದ್ದಂತೆ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿ, ಸ್ಥಳದಲ್ಲೇ ಹೈಡ್ರಾಮಾ ಸನ್ನಿವೇಶ ಸೃಷ್ಟಿಯಾಯಿತು.ನಗರದ ಹೊರ ವಲಯದ ಶ್ರೀರಾಮನಗರದ ಪಾಲಿಕೆ ಉದ್ಯಾನ ಜಾಗದಲ್ಲಿದ್ದ 36 ಮನೆಗಳ ತೆರವಿಗೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅಶ್ವತ್ಥ ನೇತೃತ್ವದಲ್ಲಿ ಕಂದಾಯ, ಪಾಲಿಕೆ ಅಧಿಕಾರಿ, ಸಿಬ್ಬಂದಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಭದ್ರತೆಯಲ್ಲಿ ಬೆಳ್ಳಂ ಬೆಳಿಗ್ಗೆಯೇ ತೆರವು ಕಾರ್ಯಕ್ಕೆ ಮುಂದಾಗಿದ್ದರಿಂದ ಸ್ಥಳದಲ್ಲಿ ತೀವ್ರ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
ಮನೆಗಳ ತೆರವಿಗೆ ಅಧಿಕಾರಿಗಳು ಮುಂದಾಗುತ್ತಿದ್ದಂತೆ ಮಹಿಳೆಯರು, ವಯೋವೃದ್ಧರು, ಯುವಜನರು ವಿರೋಧ ವ್ಯಕ್ತಪಡಿಸಿದರು. ಆ ಭಾಗದ ಕಾಂಗ್ರೆಸ್ ಪಕ್ಷದ ಮುಖಂಡ, ಪಾಲಿಕೆ ಮಾಜಿ ಸದಸ್ಯ ಪಾಮೇನಹಳ್ಳಿ ನಾಗರಾಜ ಸಹ ಸ್ಥಳಕ್ಕೆ ದೌಡಾಯಿಸಿ, ತೆರವು ಕಾರ್ಯ ಕೈಬಿಡುವಂತೆ ಮನವಿ ಮಾಡಿದರು. ತಹಸೀಲ್ದಾರ್ ಅಶ್ವತ್ಥ ಸಹ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಸಂತ್ರಸ್ತ ಕುಟುಂಬಗಳು ಪರಿಪರಿಯಾಗಿ ತೆರವು ಕಾರ್ಯ ಕೈಬಿಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.ನಿದ್ರೆಯಲ್ಲಿದ್ದ ಜನರು ಬೆಚ್ಚಿ ಬೀಳುವಂತೆ ಪೊಲೀಸ್ ಭದ್ರತೆಯಲ್ಲಿ ಪಾಲಿಕೆಯ ಎರಡು ಜೆಸಿಬಿ ಯಂತ್ರಗಳು ಘರ್ಜಿಸುತ್ತಾ ಮನೆಯ ಮೇಲ್ಚಾವಣಿ, ತಗಡು, ಶೀಟುಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸುತ್ತಿದ್ದಂತೆ ಆತಂಕಗೊಂಡ 36 ಕುಟುಂಬಗಳ ಮಕ್ಕಳು, ಮಹಿಳೆಯರು, ಪುರುಷಯರು, ಯುವ ಜನರು, ವಯೋವೃದ್ಧರು ಏನಾಗುತ್ತಿದೆಯೆಂದು ಹೊರ ಬರುವಷ್ಟರಲ್ಲೇ ಅಧಿಕಾರಿಗಳ ತೆರವು ಕಾರ್ಯ ಆರಂಭವಾಗಿತ್ತು.
ಕೆಲ ಮಹಿಳೆಯರಂತೂ ಜೆಸಿಬಿ ಯಂತ್ರಗಳಡಿ, ಅವುಗಳ ಚಕ್ರದಡಿ ಮಲಗಿ ಕೂಗಾಟ, ಚೀರಾಟ, ರೋಧನೆ ಮಾಡಿದರು. ಮಹಿಳೆಯರು, ವೃದ್ಧೆಯರನ್ನು ಸ್ಥಳದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಯಷ್ಟೇ ಅಲ್ಲ, ಪುರುಷ ಸಿಬ್ಬಂದಿ ಸಹ ಎಳೆದಾಡುತ್ತಿದ್ದುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು.ಕಾಂಗ್ರೆಸ್ಸಿನ ಮುಖಂಡ ಪಾಮೇನಹಳ್ಳಿ ನಾಗರಾಜ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೇ ಅಧಿಕಾರಿಗಳಿಗೆ ಹೇಳಿದ್ದರೂ ಈ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಕೆಲಸವನ್ನು ರಜಾ ದಿನವಾದ ಶನಿವಾರ ಬೆಳಿಗ್ಗೆಯೇ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರ ಹೇಳಿಕೆಯನ್ನೇ ತಹಸೀಲ್ದಾರ್ ಧಿಕ್ಕರಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ಸಿನ ಪಾಲಿಕೆ ಮಾಜಿ ಸದಸ್ಯ ಪಾಮೇನಹಳ್ಳಿ ನಾಗರಾಜ ತಹಸೀಲ್ದಾರ್ ಅಶ್ವತ್ಥರ ಕಾಲು ಹಿಡಿದು, ಕಾರ್ಯಾಚರಣೆ ನಿಲ್ಲಿಸುವಂತೆ ಪರಿಪರಿಯಾಗಿ ಬೇಡಿಕೊಳ್ಳಲು ಪ್ರಯತ್ನಿಸಿದರು. ಕೂಲಿ, ಹಮಾಲಿ, ಹೇರ್ ಕಟಿಂಗ್ ಸಲೂನ್ ಕೆಲಸ ನಂಬಿ ಬದುಕುವ 36 ಕುಟುಂಬಗಳು ಎಲ್ಲಿಗೆ ಹೋಗಬೇಕೆಂದು ಕಣ್ಣೀರು ಹಾಕಿದರು.ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದ್ದಾರೆಂದು ಹತ್ತಾರು ಮಹಿಳೆಯರು, ಕಾಂಗ್ರೆಸ್ ಮುಖಂಡ ಪಾಮೇನಹಳ್ಳಿ ನಾಗರಾಜಗೆ ಪೊಲೀಸರು ವಶಕ್ಕೆ ಪಡೆಯಲು ಮುಂದಾದ ವೇಳೆ ನಾಗರಾಜ ಅವರ ಅಂಗಿ ಹರಿಯಿತು, ತಳ್ಳಾಟ ನೂಕಾಟದಲ್ಲಿ ಪೊಲೀಸರ ಬೂಟುಗಾಲು ತುಳಿತಕ್ಕೆ ಸಿಲುಕಿ ಕಾಲಿಗೆ ಗಾಯವಾಗಿದ್ದು, ಮೈ-ಕೈಗೆ ತರಚಿಸಿದ್ದಾರೆಂದು ನಾಗರಾಜ ಬೇಸರ ಹೊರ ಹಾಕಿದರು. ಅದೇ ರೀತಿ ಸಂತ್ರಸ್ತ ಮಹಿಳೆಯರೂ ಸಹ ಪೊಲೀಸರು ತಮ್ಮ ಮೈ-ಕೈ ಪರಚಿಸಿದ್ದಾರೆ ಎಂದು ಕಿಡಿಕಾರಿದರು.
ನಿರಾಶ್ರಿತ 36 ಕುಟುಂಬಗಳ ಧ್ವನಿಯಾಗಿ, ಆ ಜನರ ಪರವಾಗಿ ಬಂದಿದ್ದ ಪಾಮೇನಹಳ್ಳಿ ನಾಗರಾಜ ತಮ್ಮ ನಾಯಕರಾದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ್‌ರ ಮಾತಿಗೂ ಕಿವಿಗೊಡದ ತಹಸೀಲ್ದಾರ್ 36 ಬಡ ಕುಟುಂಬಗಳನ್ನು ಬೀದಿಗೆ ತಳ್ಳುತ್ತಿದ್ದಾರೆ ಎಂದು ತೀವ್ರ ಆಕ್ರೋಶ ಹೊರ ಹಾಕಿದರು. ನಂತರ ಪೊಲೀಸ್ ಅಧಿಕಾರಿ, ಸಿಬ್ಬಂದಿ ಭದ್ರತೆಯಲ್ಲಿ ತೆರವು ಕಾರ್ಯ ಮುಂದುವರಿಸಲಾಯಿತು.ಬೆಳಿಗ್ಗೆ 6ಕ್ಕೆ ಬಂದು ಎಲ್ಲರನ್ನೂ ಹೊರ ಹಾಕಿದರೆ ಮಕ್ಕಳು ಮರಿ ಸಮೇತ ದುಡಿದು ತಿನ್ನುವ ಕೂಲಿ ಕುಟುಂಬದ ಜನರು ಎಲ್ಲಿಗೆ ಹೋಗಬೇಕು? ಇದೇ ರೀತಿ ಆವರಗೆರೆಯಲ್ಲೂ 300 ಕುಟುಂಬಗಳನ್ನು ತೆರವು ಮಾಡಿ, ಬೀದಿಗೆ ದಬ್ಬಿದ್ದಾರೆ. ಇಲ್ಲಿ ರಾತ್ರೋ ರಾತ್ರಿ ವಿದ್ಯುತ್ ಸಂಪರ್ಕ ತಪ್ಪಿಸಿ, ನೀರು ನಿಲ್ಲಿಸಿದ್ದಾರೆ.
ಪಾಮೇನಹಳ್ಳಿ ನಾಗರಾಜ ಕಾಂಗ್ರೆಸ್ ಮುಖಂಡ, ಪಾಲಿಕೆ ಮಾಜಿ ಸದಸ್ಯಮನೆಯಿಂದ ನಮ್ಮನ್ನು ಹೊರಗೆ ಎಳೆದು ಹಾಕಿ, ನಮಗೆ ಮೈ-ಕೈ ಜಿಬುರಿ ಹಲ್ಲೆ ಮಾಡಿದ್ದಾರೆ. ಅ.15ರವರೆಗೆ ನ್ಯಾಯಾಲಯ ಕಾಲಾವಕಾಶ ಕೊಟ್ಟಿದೆಯೆಂದರೂ ನೀನು ಬಹಳ ಮಾತನಾಡುತ್ತೀಯಾ ಅಂತಾ ತಹಸೀಲ್ದಾರ್ ನನಗೆ ಬೆದರಿಸಿದ್ದಾರೆ. ಇವತ್ತು ಶನಿವಾರ ರಜೆ ಇದ್ದರೂ, ಏಕಾಏಕಿ ಜೆಸಿಬಿ ಸಮೇತ ಬಂದು, ಮನೆ ಕೆಡವಲು ನಮ್ಮನ್ನೆಲ್ಲಾ ಹೊರ ಹಾಕುತ್ತಿದ್ದಾರೆ. ನಮಗೆ ಈಗಲೇ ಜಾಗ ತೋರಿಸಿ ಅಂತಾ ಹೇಳಿದರೂ ಎಳೆದು ಹೊಡೆಯುತ್ತಿದ್ದಾರೆ. ಇಲ್ಲಿ ಆಶ್ರಯ ಕೊಡದವರು ಗಂಜಿ ಕೇಂದ್ರಕ್ಕೆ ಹೋಗಿ ಎಂದು ನಮಗೆ ಬೀದಿ ಪಾಲು ಮಾಡುತ್ತಿದ್ದಾರೆ.
ನೀಲಮ್ಮ ಸಂತ್ರಸ್ತ ಮಹಿಳೆ.ತೆರವಿಗೆ ನ್ಯಾಯಾಲಯದ ಆದೇಶವಿದ್ದು, ಅದರಂತೆ ಕ್ರಮ ಕೈಗೊಂಡಿದ್ದೇವೆ. ಇಲ್ಲಿನ 36 ಕುಟುಂಬಕ್ಕೆ ತುರ್ಚಘಟ್ಟ ನಿರಾಶ್ರಿತರ ಕೇಂದ್ರದಲ್ಲಿ ಊಟ, ವ್ಯವಸ್ಥೆ, ವಸತಿ ಕಲ್ಪಿಸಿ ದೆ. ಪರ್ಯಾಯ ಸ್ಥಳ ಸಹ ಗುರುತಿಸಿದ್ದು, ಅದನ್ನು ಬಿಟ್ಟರೆ ಬೇರೇನೂ ಇಲ್ಲ. 2017-18ರಿಂದಲೇ ತೆರವಿಗೆ ಆದೇಶ ಇದೆ. ಹಿಂದೆ ತೆರವು ಮಾಡಿಸಿ, ಪಾಲಿಕೆಗೆ ಹಸ್ತಾಂತರಿಸಿದ್ದೆವು.
ಅಶ್ವತ್ಥ ದಾವಣಗೆರೆ ತಹಸೀಲ್ದಾರ್