ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿಯೊಂದಿಗಿನ ಜೆಡಿಎಸ್ ಮೈತ್ರಿ ದೇಶದಲ್ಲಿ ಶಾಶ್ವತವಾಗಿ ಮುಂದುವರೆಯಲಿದೆ. ಇದಕ್ಕೆ ಧಕ್ಕೆಯಾಗುವಂತೆ ಯಾರೂ ಹೇಳಿಕೆ ನೀಡಬಾರದು. ಒಮ್ಮೆ ಪ್ರಚೋದನಾತ್ಮಕ ಹೇಳಿಕೆಗಳು ಬಂದರೂ ಪ್ರತಿಕ್ರಿಯೆ ನೀಡದಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ ಅವರ ಬಗೆಗಿನ ನಾರಾಯಣಗೌಡರ ಹೇಳಿಕೆ ಒಪ್ಪತಕ್ಕದ್ದಲ್ಲ. ಯುವ ಘಟಕದ ರಾಜ್ಯಾಧ್ಯಕ್ಷರಾಗಿ ಅವರ ಅಭಿಪ್ರಾಯ ಮಂಡಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈತ್ರಿ ಪಕ್ಷದ ಮುಖಂಡರಾಗಿರುವ ಕೆ.ಸಿ.ನಾರಾಯಣಗೌಡರು ೨೦೧೩ರಲ್ಲಿ ಜೆಡಿಎಸ್ ಪಕ್ಷದಿಂದ ಮೊದಲ ಬಾರಿಗೆ ಗೆದ್ದು ಶಾಸಕರಾದರು, ೨೦೧೮ರಲ್ಲಿ ನಿಖಿಲ್ ಅವರು ರಾಜಕೀಯ ಪ್ರವೇಶ ಮಾಡದಿದ್ದರೂ ಕೆ.ಸಿ.ನಾರಾಯಣಗೌಡ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ್ದರು ಎಂಬುದನ್ನು ಮರೆಯಬಾರದು. ಎಚ್.ಡಿ.ದೇವೇಗೌಡರ ಕುಟುಂಬದ ನೆರವಿಲ್ಲದೇ ನಾರಾಯಣಗೌಡರು ರಾಜಕೀಯವಾಗಿ ಬೆಳೆಯಲು ಸಾಧ್ಯವಿರಲಿಲ್ಲ. ಅವರು ನಡೆದುಬಂದ ಹಾದಿಯನ್ನು ಮರೆಯಬಾರದು. ಅವರು ಅನುಭವಿ ಹಾಗೂ ಹಿರಿಯ ರಾಜಕಾರಣಿಗಳು, ಪದೇ ಪದೇ ಈ ರೀತಿಯ ಹೇಳಿಕೆ ನೀಡಬಾರದು ಎಂದು ಹೇಳಿದರು.ಕಳೆದ ಜನವರಿ ೧೬ರಂದು ಶ್ರೀ ಗವಿಗಂಗಾಧರಸ್ವಾಮಿ ದೇವಾಲಯದ ಬಳಿ ಕಲ್ಯಾಣಿ ಉದ್ಘಾಟನೆ ವೇಳೆ ತಾವು ತಂದ ಅನುದಾನದಿಂದ ಕಾಮಗಾರಿ ನಡೆದಿದೆ ಎಂದಿದ್ದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಸರ್ಕಾರದಿಂದ ಅವರ ಅವಧಿಯ ₹೩೭ ಕೋಟಿ ಅನುದಾನ ಹಿಂಪಡೆಯಲಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದೆ. ಹಿಂದಿನ ಶಾಸಕರು ತಂದ ಅನುದಾನದ ಕಾಮಗಾರಿಗಳಿಗೆ ಹಾಲಿ ಶಾಸಕರು ಚಾಲನೆ ನೀಡುವುದು ವಾಡಿಕೆ ಅದನ್ನು ತಪ್ಪೆಂಬಂತೆ ಬಿಂಬಿಸಬಾರದೆಂದು ಎಂದು ನುಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಎನ್‌ಡಿಎ ಮೈತ್ರಿಕೂಟದ ಸದಸ್ಯರಾಗಿ ಕೆಲಸ ಮಾಡಬೇಕು. ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಬೇಕು. ಆದರೆ ಕೆ.ಸಿ.ನಾರಾಯಣಗೌಡ ಅವರು ಸಣ್ಣಪುಟ್ಟ ವಿಷಯವನ್ನು ದೊಡ್ಡದು ಮಾಡುತ್ತಿರುವುದು ಸರಿಯಲ್ಲ ಎಂದು ಖಾರವಾಗಿ ಹೇಳಿದರು.
ನಿಖಿಲ್ ಕುಮಾರಸ್ವಾಮಿ ಅವರು ನಿಮ್ಮನ್ನು ಒಮ್ಮೆ ಶಾಸಕ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಿದ್ದನ್ನು ಮರೆಯಬಾರದು. ನಿಮಗೆ ಅವರು ಯಾರೂ ಅಲ್ಲದಿದ್ದರೂ ಜೆಡಿಎಸ್ ಪಕ್ಷಕ್ಕೆ ಅವರು ನಾಯಕರು. ಇದೇ ರೀತಿ ಉದ್ಧಟತನ ಮುಂದುವರೆದರೆ ಜೆಡಿಎಸ್ ಪಕ್ಷದಿಂದ ನಿರ್ಧಾರ ಕೈಗೊಂಡು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.