ಸೋಲುವ ಭೀತಿಯಿಂದ ಕಾಂಗ್ರೆಸ್‌ಗೆ ಜೆಡಿಎಸ್ ಟೀಕೆ: ಕಾಂಗ್ರೆಸ್‌ನ ವಿನಯ್‌ ಗಾಂಧಿ

KannadaprabhaNewsNetwork | Published : Mar 9, 2024 1:33 AM

ಸಾರಾಂಶ

ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹಾಸನ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಅವಧಿಯಲ್ಲೇ ಮಾಡಲಾಗಿದೆ. ತಮ್ಮ ಅವಧಿಯ ಅಭಿವೃದ್ಧಿ ಕಾಮಗಾರಿಗಳನ್ನು ಕಾಂಗ್ರೆಸ್ ಉದ್ಘಾಟನೆ ಮಾಡುತ್ತಿದೆ ಎಂದು ಟೀಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿನಯ್ ಗಾಂಧಿ ಲೇವಡಿ ಮಾಡಿದರು. ಹಾಸನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಐದು ಗ್ಯಾರಂಟಿ ಜಾರಿ ಮಾಡಿದ ದೇಶದ ಮೊದಲು ರಾಜ್ಯ । ಟೀಕಾಕಾರರಿಗೆ ಉತ್ತರ ಕನ್ನಡಪ್ರಭ ವಾರ್ತೆ ಹಾಸನ

೫ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್‌ ಪಡೆದಿರುವ ಯಶಸ್ಸನ್ನು ಕಂಡ ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹಾಸನ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಅವಧಿಯಲ್ಲೇ ಮಾಡಲಾಗಿದೆ. ತಮ್ಮ ಅವಧಿಯ ಅಭಿವೃದ್ಧಿ ಕಾಮಗಾರಿಗಳನ್ನು ಕಾಂಗ್ರೆಸ್ ಉದ್ಘಾಟನೆ ಮಾಡುತ್ತಿದೆ ಎಂದು ಟೀಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ವಿನಯ್ ಗಾಂಧಿ ಲೇವಡಿ ಮಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ತನ್ನ ೫ ಗ್ಯಾರಂಟಿ ಯೋಜನೆಗಳ ಮೂಲಕ ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದ್ದನ್ನು ಕಂಡು ಸಹಿಸದ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕುಟುಂಬದವರು ಕೋಮುವಾದಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವ ಭೀತಿಯಿಂದ ಯೋಜನೆಗಳನ್ನು ಟೀಕಿಸುತ್ತಿದೆ. ಸಂಸದ ಪ್ರಜ್ವಲ್ ರೇವಣ್ಣ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ಕಾಣೆಯಾಗಿದ್ದವರು ಇದ್ದಕ್ಕಿದಂತೆ ಪದೇ ಪದೇ ಹೇಳಿಕೆಯನ್ನು ನೀಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಟೀಕಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಬಿಜೆಪಿ, ಜೆಡಿಎಸ್‌ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಿರುವ ಟೀಕಾಕಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಾಕಾರರಿಗೆ ಅಂಕಿ ಅಂಶಗಳ ಮೂಲಕ ಉತ್ತರ ನೀಡಿದ್ದಾರೆ. ಕರ್ನಾಟಕದಲ್ಲಿ ೫ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸಿರುವುದು ಭಾರತ ದೇಶದಲ್ಲೆ ಪ್ರಥಮ ರಾಜ್ಯವಾಗಿದೆ. ಸಾರ್ವಜನಿಕರಿಗೆ ನೇರವಾಗಿ ಯೋಜನೆಯ ಫಲಾನುಭವಿಗಳಿಗೆ ತಲಪುವಂತೆ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಸುಮಾರು ೧೨೪೩ ಕೋಟಿ ರುಪಾಯಿ ವೆಚ್ಚದ ವಿವಿಧ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ೧೦೧ ಕೋಟಿ ರುಪಾಯಿ ಮೊತ್ತದ ಕಮಾಗಾರಿಗಳನ್ನು ಉದ್ಘಾಟಿಸಲಾಗಿದೆ. ಇಂತಹ ಬೃಹತ್ ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಟೀಕೆ ಮಾಡಿರುವುದು ಮಾ.೧ ರಂದು ನಡೆದ ಸಮಾವೇಶ ಉತ್ತರವಾಗಿದೆ ಎಂದು ಹೇಳಿದರು.

ಮಾ.೪ ರಂದು ಪ್ರಜ್ವಲ್ ರೇವಣ್ಣ ಅವರು ಜಿಲ್ಲಾಧಿಕಾರಿ ಸತ್ಯಭಾಮ ಅವರ ಮೇಲೆ ಕ್ರಷರ್ ಮತ್ತು ಗ್ರಾನೈಟ್ ಮಾಲೀಕರಿಂದ ೪ ಕೋಟಿ ರು. ಪಡೆದು ಸಮಾವೇಶ ಮಾಡಿದ್ದಾರೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಸತ್ಯಭಾಮ ಅವರು ಒಬ್ಬ ದಕ್ಷ ಜಿಲ್ಲಾಧಿಕಾರಿಯಾಗಿದ್ದು, ಪ್ರಾಮಾಣಿಕವಾಗಿ ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಾರ್ವಜನಿಕರ ಕುಂದು ಕೊರೆತೆ, ಅಹವಾಲುಗಳಿಗೆ ಸ್ಪಂದಿಸುತ್ತ ಸ್ಥಳದಲ್ಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತ ಜಿಲ್ಲೆಯ ಎಲ್ಲಾ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇಂತಹ ದಕ್ಷ ಜಿಲ್ಲಾಧಿಕಾರಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ತಮ್ಮ ಸ್ಥಾನಕ್ಕೆ ಗೌರವ ತರುವಂತಹದ್ದಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡರಾದ ಮುನಿಸ್ವಾಮಿ, ಆಲೀಂ ಪಾಷಾ, ರಾಮಚಂದ್ರ, ಲೋಕೇಶ್ ಉಪಸ್ಥಿತರಿದ್ದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿನಯ್‌ ಗಾಂಧಿ.

Share this article