ಕೆ.ಆರ್.ಪೇಟೆ: ಜೆಡಿಎಸ್ ವತಿಯಿಂದ ಬರ ಪರಿಶೀಲನಾ ತಂಡವು ನ.11 ರಂದು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಅಧ್ಯಯನ ನಡೆಸಲಿದೆ ಎಂದು ಶಾಸಕ ಎಚ್ .ಟಿ.ಮಂಜು ತಿಳಿಸಿದರು.
ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೆಶ್ ಸೇರಿದಂತೆ ಪಕ್ಷದ ಜಿಲ್ಲೆಯ ಎಲ್ಲಾ ಮಾಜಿ ಶಾಸಕರು ಮತ್ತು ಮುಖಂಡರ ನೇತೃತ್ವದ ಬರ ಪರಿಶೀಲನಾ ತಂಡ 2 ದಿನಗಳ ಜಿಲ್ಲಾದ್ಯಂತ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.
ನ.10 ರಂದು ಮದ್ದೂರು ಮತ್ತು ಮಳವಳ್ಳಿ ತಾಲೂಕುಗಳಲ್ಲಿ ಸಂಚರಿಸಲಿದೆ. ನ.11 ರಂದು ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲೂಕಿಗೆ ಆಗಮಿಸಲಿದೆ. ತಂಡವನ್ನು ತಾಲೂಕಿನ ಸಂತೇಬಾಚಹಳ್ಳಿ ಕ್ರಾಸ್‌ನ ಗಡಿ ಭಾಗದಲ್ಲಿ ಸ್ವಾಗತಿಸಲಾಗುವುದು. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಬರ ಪರಿಶೀಲನಾ ತಂಡವನ್ನು ಸ್ವಾಗತಿಸುವಂತೆ ಮನವಿ ಮಾಡಿದರು.ಬರ ಪರಿಶೀಲನಾ ತಂಡ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಮತ್ತು ಲೋಕನಹಳ್ಳಿ ಕೆರೆಗಳನ್ನು ಪರಿಶೀಲಿಸಲಿದೆ. ಅನಂತರ ಬೂಕನಕೆರೆ ಹೋಬಳಿಯಲ್ಲಿ ತಂಡ ಸಂಚರಿಸಿ ಸಮೀಕ್ಷೆ ನಡೆಸಿ ಪಕ್ಷದ ವರಿಷ್ಠರ ಮೂಲಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ನಿತ್ಯ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವುದಾಗಿ ಘೋಷಿಸಿದ್ದಾರೆ. ಸಿಎಂ ಅವರ ರೈತ ಪರ ನಿಲುವನ್ನು ನಾನು ಸ್ವಾಗತಿಸುತ್ತೇನೆ. ತಾಲೂಕಿನಾದ್ಯಂತ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ತೀವ್ರವಾಗಿದ್ದು, ರಾತ್ರಿ ವೇಳೆ ರೈತರು ನೀರು ಹಾಯಿಸಲು ತಮ್ಮ ಹೊಲಗದ್ದೆಗಳಿಗೆ ಹೋಗಲಾರದ ಸ್ಥಿತಿಯಿದೆ ಎಂದರು.
ಸರ್ಕಾರ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳನ್ನು ಹೇಮಾವತಿ ನೀರಿನಿಂದ ತುಂಬಿಸುವಂತೆ ಆಗ್ರಹಿಸಿದರು.
ನ.15 ರಂದು ತಾಲೂಕಿನ ರಾಯಸಮುದ್ರ ಗ್ರಾಮದಲ್ಲಿ ಸಹಕಾರ ಸಪ್ತಾವನ್ನು ಆಯೋಜಿಸಲಾಗಿದೆ. ತಾಲೂಕಿನ ಎಲ್ಲಾ ಸಹಕಾರ ಸಂಘಗಳು ಮತ್ತು ಸಹಕಾರ ಬಂಧುಗಳು ಕಾರ್ಯಕ್ರಮಕ್ಕೆ ಸಹಕರಿಸಿ ಸಹಕಾರ ಸಪ್ತಾಹವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.