ಜೆಡಿಎಸ್ ರಾಜ್ಯದ ಪ್ರಬಲ, ಜನ ವಿಶ್ವಾಸಿ ಪಕ್ಷ: ನಿಖಿಲ್‌

KannadaprabhaNewsNetwork |  
Published : Feb 19, 2026, 02:15 AM IST
59 | Kannada Prabha

ಸಾರಾಂಶ

ರಾಜ್ಯದಲ್ಲಿ ಜೆಡಿಎಸ್ ಅತ್ಯಂತ ಪ್ರಬಲ ಹಾಗೂ ಜನ ವಿಶ್ವಾಸಿ ಪಕ್ಷವಾಗಿದೆ. ಈ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಬಲಪಡಿಸುವ ಅಗತ್ಯವಿರುವುದರಿಂದ ರಾಜ್ಯಾದ್ಯಂತ ಜನರೊಂದಿಗೆ ಜನತಾದಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ರಾಜ್ಯದಲ್ಲಿ ಜೆಡಿಎಸ್ ಅತ್ಯಂತ ಪ್ರಬಲ ಹಾಗೂ ಜನ ವಿಶ್ವಾಸಿ ಪಕ್ಷವಾಗಿದೆ. ಈ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಬಲಪಡಿಸುವ ಅಗತ್ಯವಿರುವುದರಿಂದ ರಾಜ್ಯಾದ್ಯಂತ ಜನರೊಂದಿಗೆ ಜನತಾದಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಶ್ರೀ ಸಾಯಿ ಸಮುದಾಯ ಭವನದ ಆವರಣದಲ್ಲಿ ಜೆಡಿಎಸ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೆಡಿಎಸ್ ಗೆ ಕಾರ್ಯಕರ್ತರೇ ಜೀವಾಳ ಎಂದರು.

ಕೇವಲ ಭಾಷಣ ಮಾಡಿದರಷ್ಟೇ ಪಕ್ಷ ಸಂಘಟನೆ ಆಗುವುದಿಲ್ಲ, ಹಾಗಾಗಿ ಕಾರ್ಯಕರ್ತರನ್ನು ಸಂಘಟಿಸಿ ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಕೆಲಸ ಮಾಡಬೇಕು. ಮುಂದೆ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳು ಎದುರಾಗಲಿವೆ. ಹಾಗಾಗಿ, ಈ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸುವ ಕೆಲಸ ಮಾಡಬೇಕು. 2028ರ ವಿಧಾನಸಭಾ ಚುನಾವಣೆ‌ಯಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ಇನ್ನೂ ಚುನಾವಣೆಗೆ ಮೂರು ವರ್ಷವಿದೆ ಎಂದು ಕಾರ್ಯಕರ್ತರು ಕೈಕಟ್ಟಿ ಕೊರದೆ, ಅತ್ಯಂತ ಎಚ್ಚರಿಕೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಬೂತ್‌ ಮಟ್ಟದಲ್ಲಿ‌ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಕಟ್ಟಬೇಕು ಎಂದರು.ತೆರಿಗೆಯಿಂದ ಜನರಿಗೆ ಸಾಕಷ್ಟು ತೊಂದರೆ:

ರಾಜ್ಯದ ಕಾಂಗ್ರೆಸ್ ಸರ್ಕಾರ ಇಲ್ಲಸಲ್ಲದ ತೆರಿಗೆ ಹಣವನ್ನು ಜನರ ಮೇಲೆ ಹಾಕಿ ಸಾಕಷ್ಟು ತೊಂದರೆ ನೀಡುತ್ತಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ರಾಜ್ಯದ ಜನತೆಗೆ ನೀಡಿದ ಉತ್ತಮ ಆಡಳಿತ ಇಂದಿಗೂ ಕೂಡ ಅಜರಾಮರವಾಗಿದೆ ಎಂದು ಅವರು ತಿಳಿಸಿದರು. ಮೈತ್ರಿ ಚರ್ಚೆ ನಾಲ್ಕು ಗೋಡೆ ನಡುವೆ ಇರಬೇಕು:

ಬಿಜೆಪಿ-ಜೆಡಿಎಸ್‌ ಮೈತ್ರಿ ವಿಚಾರ ಚರ್ಚೆ ನಾಲ್ಕು ಗೋಡೆಗಳ ನಡುವೆ ಇರಬೇಕೇ ಹೊರತು ಹಾದಿ-ಬೀದಿಯಲ್ಲಿ ಚರ್ಚೆ ಆಗಬಾರದು ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.ಈ ವಿಚಾರಗಳು ನಾಲ್ಕು ಗೋಡೆಗಳ ಒಳಗೆ ಚರ್ಚೆಯಾಗಬೇಕು. ಹಾದಿ ಬೀದಿಯಲ್ಲಿ ಚರ್ಚಿಸಿ ಇತ್ಯರ್ಥವಾಗುವ ವಿಚಾರವಲ್ಲ. ಲೋಕಸಭಾ ಚುನಾವಣೆಯಿಂದಲೂ ಎರಡೂ ಪಕ್ಷಗಳ ಮೈತ್ರಿ ಇದೆ. ಅಂದಿನಿಂದಲೂ ನಮ್ಮನ್ನು ಗೌರವದಿಂದ ನೋಡಿಕೊಂಡಿದ್ದಾರೆ ಎಂದರು.ಕೆಲವರು ಪ್ರಚಾರಕ್ಕಾಗಿ ಮಾತು:ಕೆಲ ಬಿಜೆಪಿಗರಿಂದ ಮೈತ್ರಿ ಮುರಿಯುವ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ, ನಾವು ಮೈತ್ರಿ ಧರ್ಮವನ್ನು ಅತ್ಯಂತ ಗೌರವದಿಂದ ಪಾಲಿಸುತ್ತಿದ್ದೇವೆ. ನಮ್ಮ ಮೈತ್ರಿಗೆ ಬಿಜೆಪಿ ಹೈಕಮಾಂಡ್ ನಾಯಕರ ಮಾರ್ಗದರ್ಶನ ಇದೆ. ಬಿಜೆಪಿ ಆಥವಾ ಜೆಡಿಎಸ್‌ನ ಯಾರೇ ಆಗಿರಲಿ ಹೊರಗೆ ಮಾತನಾಡಬಾರದು. ಎರಡು ಜಿಲ್ಲೆಗಳಲ್ಲಿ ಮೈತ್ರಿ ವಿಚಾರದ ಸಮಸ್ಯೆ ಉದ್ಭವವಾಗಿದೆ. ಅಲ್ಲಿನ ಮೂರ್ನಾಲ್ಕು ಜನ ಪ್ರಚಾರಕ್ಕೆ ಮಾತನಾಡಿದ್ದಾರೆ ಎಂದರು.ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಎನ್ನುವುದಕ್ಕಿಂತ ಎನ್‌ಡಿಎ 140ರಿಂದ 150 ಸ್ಥಾನ ಗೆಲ್ಲಲಿದೆ. ನಾವು ಮೈತ್ರಿ ಧರ್ಮ ಪಾಲಿಸುತ್ತೇವೆ. ಲೋಕಸಭೆ ಗೆದ್ದಂತೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ದಾಖಲೆ ಸೃಷ್ಟಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಾವೆಲ್ಲೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ:ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿಖಿಲ್‌, ನಾವೆಲ್ಲೂ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಕೆ.ಆರ್.ಪೇಟೆಯಲ್ಲಿ ನೀವು ಈಗಾಗಲೇ ಶಾಸಕರಾಗಿದ್ದೀರಿ. ಮತ್ತೆ ಆರಿಸಿ ಬರುವುದಕ್ಕೆ ಜನರ ಪ್ರೀತಿ ವಿಶ್ವಾಸ ಗಳಿಸಿ ಮಂಜಣ್ಣ ಅಂತ ಹೇಳಿದ್ದೆ. ಆದರೆ, ನನ್ನ ಹೇಳಿಕೆ ತಿರುಚಿದ್ದಾರೆ. ಅಭ್ಯರ್ಥಿಗಳ ಘೋಷಿಸಲು ನಾನು ಯಾರು? ನಾನು ಜನರ ವಿಶ್ವಾಸ ಉಳಿಸಿಕೊಂಡು ಹೋಗಿ ಅಂತ ಹೇಳುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು.ಜಿಪಂ ಮತ್ತು ತಾಪಂ ಚುನಾವಣೆಗೆ ಮೈತ್ರಿ ಇರುತ್ತಾ ಎಂಬ ಪ್ರಶ್ನೆಗೆ, ಈ ವಿಚಾರ ಇನ್ನೂ ಎರಡೂ ಪಕ್ಷಗಳ ಚೌಕಟ್ಟಿನಲ್ಲಿ ಚರ್ಚೆಗೆ ಬಂದಿಲ್ಲ. ಮೊದಲು ಈ ಚುನಾವಣೆಗಳು ನಡೆಯುತ್ತಾ ಇಲ್ವಾ ಅನ್ನೋದೇ ಗೊತ್ತಿಲ್ಲ. ಕಾರ್ಯಕರ್ತರ ಹಿತದೃಷ್ಟಿ ಮುಂದಿಟ್ಟುಕೊಂಡು ಮೈತ್ರಿಯಾಗಿ ಅಥವಾ ಪಕ್ಷವಾಗಿ ಹೋಗಬೇಕಾ ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗಲಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದಲಾವಣೆಗೆ ತಕ್ಕಂತೆ ಕೈಗಾರಿಕೆ ವೇಗ ಹೆಚ್ಚಿಸಿಕೊಳ್ಳಿ: ವಿಜಯ ಸಂಕೇಶ್ವರ
ಶೀಘ್ರ ಬೆಳ್ಳೂಡಿ–ರಾಮತೀರ್ಥ ಸೇತುವೆ ಪುನರ್ ನಿರ್ಮಾಣ: ಶಾಸಕ ಬಿ.ಪಿ.ಹರೀಶ್