ಕನ್ನಡಪ್ರಭ ವಾರ್ತೆ ತುರುವೇಕೆರೆ
ಇಲ್ಲಿಯ ದಬ್ಬೇಘಟ್ಟ ರಸ್ತೆಯಲ್ಲಿರುವ ಕೇಕ್ ವರ್ಲ್ಡ್ ಎಂಬ ಬೇಕರಿಗೆ ಜೆಡಿಎಸ್ ಮುಖಂಡರಾದ ನಾಗೇಂದ್ರ ಮತ್ತು ಕಾಂತರಾಜ್ ಹೋಗಿದ್ದರು. ಕೆಲವು ಪದಾರ್ಥಗಳ ಬೆಲೆ ಹೆಚ್ಚು ಮಾಡಲಾಗಿದೆ ಎಂದು ಆರೋಪಿಸಿ ಕೆಲಸಗಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಒಬ್ಬರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ. ಬೇಕರಿ ಕೆಲ ತಿಂಡಿ ಬಿಸಾಡಿದ್ದಾರೆ.
ಈ ವೇಳೆ ಗ್ರಾಹಕರು ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲಿನ ಸಿಬ್ಬಂದಿ ಇವರ ಆರ್ಭಟಕ್ಕೆ ಹೆದರಿದ್ದಾರೆ. ಕೆಲವರು ಸಮಾಧಾನಪಡಿಸಲು ಮುಂದಾದರೂ ಸಹ ಆಗಲಿಲ್ಲ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಈ ವೇಳೆ ನಾಗೇಂದ್ರ ಪೊಲೀಸರಿಗೂ ಬಾಯಿಗೆ ಬಂದಂತೆ ಬೈದಿದ್ದಾನೆ.ಈರ್ವರ ಆರ್ಭಟಕ್ಕೆ ಹೆದರಿ ಕೇಕ್ ವರ್ಲ್ಡ್ ಹಾಗೂ ಅಕ್ಕಪಕ್ಕದ ಅಂಗಡಿಯವರು ತಮ್ಮ ಅಂಗಡಿ ಮುಚ್ಚಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಂಧನ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ರಾಜೇಶ್ ಮತ್ತು ವಿಕ್ರಮ್ ಎಂಬುವವರು ದೂರು ಸಲ್ಲಿಸಿದ್ದಾರೆ. ವಿಕ್ರಮ್ ಕೈ, ದೇಹ ಮತ್ತು ಎಡಕಿವಿಗೆ ಬಲವಾಗಿ ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಬೆದರಿಕೆ ಹಾಕಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿಕ್ರಮ್ ತಿಳಿಸಿದ್ದಾರೆ. ವಿಕ್ರಮ್ ಕಿವಿಗೆ ತೀವ್ರ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ, ಕಾಂತರಾಜ್ ಸೇರಿ ಇನ್ನೂ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.