ಜೆಡಿಎಸ್ ಪಕ್ಷ ಸ್ಥಾಪನೆಯಾಗಿ 25 ವರ್ಷ ಪೂರೈಕೆ, 21,22 ರಂದು ಜನತಾದಳ ಬೆಳ್ಳಿ ಹಬ್ಬ ಸಂಭ್ರಮ

KannadaprabhaNewsNetwork |  
Published : Nov 21, 2025, 01:30 AM IST
20ಕೆಎಂಎನ್ ಡಿ11 | Kannada Prabha

ಸಾರಾಂಶ

ದೇವರಾಜು ಅರಸು, ಬಿ.ಎಸ್.ಯಡಿಯೂರಪ್ಪ, ಕೆಂಗಲ್ ಹನುಮಂತಯ್ಯರಂತಹ ಪ್ರಭಾವಿ ನಾಯಕರಿಂದಲೂ ಮುನ್ನಡೆಸಲಾಗದ ಪ್ರಾದೇಶಿಕ ಪಕ್ಷವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯಶಸ್ವಿಯಾಗಿ ಮುನ್ನಡೆಸಿ ಬಲಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಾತ್ಯಾತೀತ ಜನತಾದಳ(ಜೆಡಿಎಸ್)ಪಕ್ಷ ಸ್ಥಾಪನೆಗೊಂಡು 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನ.21 ಮತ್ತು 22 ರಂದು ಸಂಸ್ಥಾಪನಾ ದಿನ ಅಂಗವಾಗಿ ಬೆಳ್ಳಿ ಹಬ್ಬವಾಗಿ ಆಚರಿಸಲಾಗುತ್ತಿದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಜ್ಯದ ನೆಲ, ಜಲದ ರಕ್ಷಣೆ ಜೊತೆಗೆ ನಾಡಿನ ರೈತರ ದನಿಯಾಗಿ ಜೆಡಿಎಸ್ ಪಕ್ಷ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು 25 ವರ್ಷ ಪೂರೈಸಿದ ಏಕೈಕ ಪ್ರಾದೇಶಿಕ ಪಕ್ಷವಾಗಿದೆ. ಬೆಂಗಳೂರಿನ ಜೆ.ಪಿ.ಭವನದಲ್ಲಿ ಬೆಳ್ಳಿ ಸಂಭ್ರಮವನ್ನು ಆಯೋಜಿಸಲಾಗಿದೆ ಎಂದರು.

ರಾಜ್ಯದ ಜನತೆ ಜೆಡಿಎಸ್ ಪಕ್ಷಕ್ಕೆ ಒಂದು ಬಾರಿ ಪ್ರಧಾನಿ ಹಾಗೂ ಮೂರು ಬಾರಿ ಮುಖ್ಯಮಂತ್ರಿ ಹುದ್ದೆಗಳನ್ನು ನೀಡಿದೆ. ದೇವೇಗೌಡರು 11 ತಿಂಗಳ ಪ್ರಧಾನಿ ಅವಧಿಯಲ್ಲಿ ದೇಶದ ರೈತರಿಗೆ ಹಾಗೂ ನೀರಾವರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮೇಲ್ಸೇತುವೆ, ಐಟಿ- ಬಿಟಿ, ಮೆಟ್ರೋಗೆ ಕೊಡುಗೆ ನೀಡಿದ್ದಾರೆ. ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಅವರು 2 ಬಾರಿ ಮುಖ್ಯಮಂತ್ರಿಗಳಾಗಿ ಗ್ರಾಮ ವಾಸ್ತವ್ಯದ ಮೂಲಕ ಜನಸಾಮಾನ್ಯರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹರಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದರು. ನಿರಂತರವಾಗಿ ರಾಜ್ಯದಲ್ಲಿ ರೈತರ ಆತ್ಮಹತ್ಯೆಗೆ ಒಳಗಾದಾಗ ರಾಜ್ಯಾದ್ಯಂತ ಸಂಚರಿಸಿ ರೈತರಿಗೆ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದ್ದಲ್ಲದೇ ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದೊಡನೇ ರೈತ ಸಾಲಮನ್ನಾ ಮಾಡಿ ರೈತರಿಗೆ ಬೆನ್ನೆಲುಬಾಗಿ ನಿಂತರು ಎಂದು ಸ್ಮರಿಸಿದರು.

ಬೆಳ್ಳಿಹಬ್ಬ ಸಂಭ್ರಮಾಚರಣೆ ಪ್ರಯುಕ್ತ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಕೊಡುಗೆಗಳನ್ನು ನೆನಪಿಸುವ ಕಾರ್‍ಯಕ್ರಮ ನಡೆಸಲಾಗುವುದು ಎಂದರು.

ನ.22 ರಂದು ಜಿಲ್ಲೆ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ತಲಾ 250- 300 ಮಂದಿ ಗ್ರಾಪಂನಿಂದ ಎಲ್ಲ ಹಾಲಿ, ಮಾಜಿ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿಗೆ ತೆರಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಆಮಿಷದಿಂದ ರಾಷ್ಟ್ರಿಯ ಪಕ್ಷ ಅಧಿಕಾರಕ್ಕೆ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪ್ರಣಾಳಿಕೆಯಲ್ಲಿ ಶಿಕ್ಷಣ, ಆರೋಗ್ಯ, ಸ್ವಯಂ ಉದ್ಯೋಗ ಆಶಯದೊಂದಿಗೆ ಚುನಾವಣೆ ಎದುರಿಸಿತು. 100 ವರ್ಷಗಳನ್ನು ಪೂರೈಸಿದ ರಾಷ್ಟ್ರೀಯ ಪಕ್ಷ ತಾತ್ಕಾಲಿಕ ಆಮಿಷಗಳನ್ನು ನೀಡಿ ರಾಜಕೀಯ ಲಾಭ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದರು.

ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ರಾಷ್ಟ್ರೀಯ ಪಕ್ಷದ ಮುಖಂಡರ ಅವಹೇಳನ ಹೇಳಿಕೆ ಬಿಹಾರ ಚುನಾವಣಾ ಫಲಿತಾಂಶದ ನಂತರ ಸ್ಥಗಿತವಾಗಿದೆ. ಶತಮಾನ ಪೂರೈಸಿರುವ ಆ ಪಕ್ಷದ ಸಾಧನೆ ಕೇವಲ 6 ಸ್ಥಾನ. ಇದು ಆ ಪಕ್ಷದ ಮುಂದಿನ ಭವಿಷ್ಯವನ್ನು ಬಿಂಬಿಸಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅನ್ನು ರಾಜ್ಯದ ಜನರು ಬೆಂಬಲಿಸುವ ನಿರೀಕ್ಷೆಯೊಂದಿಗೆ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷದ ಬಲವರ್ಧನೆಗೆ ಮುಂದಾಗುತ್ತಿದ್ದೇವೆ. ಪಕ್ಷಕ್ಕೆ ಭವಿಷ್ಯದಲ್ಲಿ ಉತ್ತಮ ಬುನಾದಿ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಪ್ರಾದೇಶಿಕ ಪಕ್ಷವಾಗಿ ಅಸ್ತಿತ್ವಕ್ಕೆ ಬಂದ ನಂತರ ಜೆಡಿಎಸ್ ಪಕ್ಷ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಸಾಕಷ್ಟು ಕೊಡುಗೆ ನೀಡಿದೆ. ದೇವೇಗೌಡರ ಇಚ್ಛಾಶಕ್ತಿಯಿಂದ 7 ಟಿಎಂಸಿ ಹೆಚ್ಚುವರಿ ನೀರು ಕಾವೇರಿ ಕೊಳ್ಳದ ರೈತರಿಗೆ ದೊರಕಿದೆ. ರೈಲ್ವೇ ಕ್ಷೇತ್ರದ ಉನ್ನತಿ, ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಅವಕಾಶ, ಹೇಮಾವತಿ ಅಣೆಕಟ್ಟೆ ನಿರ್ಮಾಣ ಮಾಡಿ ಕಾವೇರಿ ಕೊಳ್ಳದ ರೈತರಿಗೆ ಆಸರೆಯಾಗಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ದೇವರಾಜು ಅರಸು, ಬಿ.ಎಸ್.ಯಡಿಯೂರಪ್ಪ, ಕೆಂಗಲ್ ಹನುಮಂತಯ್ಯರಂತಹ ಪ್ರಭಾವಿ ನಾಯಕರಿಂದಲೂ ಮುನ್ನಡೆಸಲಾಗದ ಪ್ರಾದೇಶಿಕ ಪಕ್ಷವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಯಶಸ್ವಿಯಾಗಿ ಮುನ್ನಡೆಸಿ ಬಲಗೊಳಿಸಿದ್ದಾರೆ ಎಂದರು.

ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳ ಅಭಿವೃದ್ಧಿಯನ್ನು ಮನಗಂಡು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಪಕ್ಷದ ವರಿಷ್ಠರು ಹಾಗೂ ನಾಯಕರು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಸುರೇಶ್‌ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಬಿ.ಆರ್.ರಾಮಚಂದ್ರು, ದಶರಥ ಇದ್ದರು.

PREV

Recommended Stories

ಸೈಬರ್‌ ವಂಚಕರಿಗೆ ಹಣ ನೀಡಲುಸ್ನೇಹಿತನ ಮನೆಯಲ್ಲಿ ಚಿನ್ನ ಕದ್ದ..!
ಮತ್ತೆ ಟೋಯಿಂಗ್‌ ಆರಂಭಿಸಲು ಜಿಬಿಎ ನಿರ್ಧಾರ