ಜೆಡಿಎಸ್ ಬಲ ಹೆಚ್ಚಿಸಲು ಬೂತ್ ಮಟ್ಟದಿಂದ ಕಾರ್ಯಕರ್ತರ ಸಂಘಟನೆಗೆ ನಿಖಿಲ್ ಕುಮಾರಸ್ವಾಮಿ ಕರೆ

KannadaprabhaNewsNetwork | Updated : Sep 19 2024, 11:56 AM IST

ಸಾರಾಂಶ

ಜೆಡಿಎಸ್ ಪಕ್ಷವನ್ನು ಬೂತ್‌ ಮಟ್ಟದಿಂದ ಬಲಪಡಿಸಲು ಮತ್ತು ಮುಂಬರುವ ಚುನಾವಣೆಗಳಿಗೆ ಸಜ್ಜಾಗಲು ಕಾರ್ಯಕರ್ತರನ್ನು ಒಗ್ಗೂಡಿಸುವಂತೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದ್ದಾರೆ. 

 ಮೈಸೂರು :  ಬೂತ್‌ ಮಟ್ಟದಿಂದ ಜೆಡಿಎಸ್ ಕಾರ್ಯಕರ್ತರ ಬಲ ಹೆಚ್ಚಿಸಿ ಮುಂಬರುವ ಚುನಾವಣೆಗೆ ಸಜ್ಜಾಗಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಪಕ್ಷವು ನಗರದ ಮಂಜುನಾಥಪುರದ ಎಚ್.ಕೆಂಪೇಗೌಡ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ನಗರ ಹಾಗೂ ಜಿಲ್ಲಾ ಘಟಕದ ಸದಸ್ಯತ್ವ ನೋಂದಣಿ ಮತ್ತು ಬೂತ್ ಸಮಿತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಬೂತ್‌ ಮಟ್ಟದಿಂದ ಪಕ್ಷ ಬೆಳೆಸಲು ಮತ್ತು ಸದೃಢಗೊಳಿಸಲು ಪ್ರತಿ ಸಮಾಜವನ್ನೂ ಒಗ್ಗೂಡಿಸಬೇಕು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಇಳಿ ವಯಸ್ಸಿನಲ್ಲೂ ದೇವೇಗೌಡರ ಉತ್ಸಾಹ ನಮ್ಮೆಲ್ಲರಿಗೂ ಪ್ರೇರಣೆ ಆಗಬೇಕು. ಸಿನಿಮಾರಂಗದಲ್ಲಿ ರಾಜಕುಮಾರ್ ಅವರಿಗೆ ಅಣ್ಣಾವ್ರು ಎಂಬ ಹೆಸರಿದೆ; ಪ್ರೀತಿ ಇದೆ. ಅಂತೆಯೇ ರಾಜಕಾರಣದಲ್ಲಿ ಯಾರಿಗಾದರೂ ಅಣ್ಣಾವ್ರು ಎಂಬ ಪಟ್ಟ ಸಿಕ್ಕಿದ್ದರೆ ಅದು ಕುಮಾರಸ್ವಾಮಿ ಅವರಿಗೆ ಮಾತ್ರ. ಜೆಡಿಎಸ್, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ನಿಜ. ಆದರೆ, ನಮ್ಮ ಪಕ್ಷದ ಸಿದ್ಧಾಂತದವನ್ನು ನಾವು ಬಿಟ್ಟಿಲ್ಲ. ಆ ಸಿದ್ಧಾಂತವನ್ನು ಪ್ರಚಾರ ಮಾಡಿ ತಳಮಟ್ಟದಿಂದ ಪಕ್ಷ ಸಂಘಟಿಸಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಬೇಕು ಎಂದರು.

ಪ್ರತಿ ಬೂತ್ ನಲ್ಲಿ ಸರಾಸರಿ 25 ರಿಂದ 30 ಮಂದಿಯನ್ನಾದರೂ ನೋಂದಣಿ ಮಾಡಿಸಬೇಕು. ಅವರಿಗೊಬ್ಬ ನಾಯಕನನ್ನು ಮಾಡಿಕೊಳ್ಳಬೇಕು. ಈ ಮೂಲಕ, ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಗೆ ಸಜ್ಜಾಗಬೇಕು ಎಂದರು.

ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಡಾ.ಕೆ. ಅನ್ನದಾನಿ, ಜೆಡಿಎಸ್ ಪ್ರಮುಖರ ಸಮಿತಿಯ ಅಧ್ಯಕ್ಷ ಜಿ.ಟಿ. ದೇವೇಗೌಡ ಶಾಸಕ ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಪಕ್ಷದ ನಗರ ಘಟಕದ ಅಧ್ಯಕ್ಷ ಕೆ.ಟಿ. ಚಲುವೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ಮುಖಂಡರಾದ ಕೆ.ಟಿ. ಶ್ರೀಕಂಠೇಗೌಡ, ಎಚ್.ಕೆ. ರಾಮು, ಪ್ರೇಮಾ ಶಂಕರೇಗೌಡ, ಆರ್. ಲಿಂಗಪ್ಪ, ಎಂ. ಅಶ್ವಿನ್ ಕುಮಾರ್, ಸತೀಶ್, ಕೃಷ್ಣ, ಶಿವಣ್ಣ, ಭಾಗ್ಯವತಿ, ರಾಜೇಶ್ವರಿ ಸೋಮು, ಎಸ್.ಬಿ.ಎಂ ಮಂಜು, ಎಂ.ಜೆ. ರವಿಕುಮಾರ್, ಅಶ್ವಿನಿ ಪಾಲ್ಗೊಂಡಿದ್ದರು.

Share this article