ಬಳ್ಳಾರಿ; ರಾಜ್ಯ ಸರ್ಕಾರದ ಬಸ್ ಪ್ರಯಾಣ ಏರಿಕೆ ನಿಲುವು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಕಳಿಸಿಕೊಟ್ಟರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕವಾದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣವಿಲ್ಲದೇ ಆರ್ಥಿಕವಾಗಿ ದಿವಾಳಿಯಾಗಿದೆ. ಹೀಗಾಗಿಯೇ ಬೆಲೆ ಏರಿಕೆಗಳ ಮೂಲಕ ಸಾರ್ವಜನಿಕರ ಜೇಬಿಗೆ ಕೈ ಹಾಕಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಮೇಲೆ ಬಸ್ ದರ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಏರಿಕೆಯಾಗಿರುವ ಬಸ್ ದರವನ್ನು ಹಿಂದಕ್ಕೆ ಪಡೆಯಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಿ.ಮೀನಳ್ಳಿ ತಾಯಣ್ಣ ಒತ್ತಾಯಿಸಿದರು.ಇದೇ ವೇಳೆ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ತರಾಟೆ ತೆಗೆದುಕೊಂಡ ಪಕ್ಷದ ಜಿಲ್ಲಾ ಮುಖಂಡರು, ಮುಖ್ಯಮಂತ್ರಿಗೆ ನಿಜಕ್ಕೂ ಬಡಪರ ಕಾಳಜಿಯಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಏರಿಕೆಯಾಗಿರುವ ಎಲ್ಲ ಬೆಲೆಗಳನ್ನು ಹಿಂದಕ್ಕೆ ಪಡೆಯಲಿ ಎಂದು ಆಗ್ರಹಿಸಿದರು.ರಾಜ್ಯ ಸರ್ಕಾರದ ದುರಾಡಳಿತ ವಿರುದ್ಧ ಜೆಡಿಎಸ್ ರಾಜ್ಯವ್ಯಾಪಿ ಹೋರಾಟ ಕೈಗೆತ್ತಿಕೊಂಡಿದೆ. ಜನವಿರೋಧಿ ಯಾವುದೇ ನೀತಿಗಳನ್ನು ಜೆಡಿಎಸ್ ಸಹಿಸುವುದಿಲ್ಲ. ಹೋರಾದ ಮೂಲಕವೇ ಉತ್ತರ ನೀಡುತ್ತದೆ ಎಂದು ಎಚ್ಚರಿಸಿದರು.
ಪಕ್ಷದ ಜಿಲ್ಲಾ ಕಚೇರಿಯಿಂದ ಮೆರವಣಿಗೆ ಹೊರಟ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಮೀನಾಕ್ಷಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು.ಜೆಡಿಎಸ್ ಜಿಲ್ಲಾ ಪ್ರಮುಖರಾದ ರಾಜು ನಾಯಕ್, ಸೋಮಪ್ಪ, ಲಕ್ಷ್ಮಿಕಾಂತ ರೆಡ್ಡಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಮೀಲಾ, ಅಶೋಕ್ ಸಂಗನಕಲ್ಲು, ನಾಗರಾಜ್, ಬಸಪ್ಪ, ರಾಮಾಂಜಿನಿ, ಹೊನ್ನೂರಪ್ಪ ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಸ್‌ದರ ಏರಿಕೆ ಖಂಡಿಸಿ ಬಳ್ಳಾರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಕಳಿಸಿದರು.