ಕಾಂಗ್ರೆಸ್ ಸರ್ಕಾರ ವಿರುದ್ಧ ಜೆಡಿಎಸ್‌ ಪ್ರತಿಭಟನೆ

KannadaprabhaNewsNetwork | Published : Mar 7, 2025 12:48 AM

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ಆಡಳಿತ ಖಂಡಿಸಿ ಜಿಲ್ಲಾ ಜೆಡಿಎಸ್‌ ಗುರುವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.

ಕನ್ನಡಪ್ರಭ ವಾರ್ತೆ, ತುಮಕೂರು ರಾಜ್ಯದ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ಆಡಳಿತ ಖಂಡಿಸಿ ಜಿಲ್ಲಾ ಜೆಡಿಎಸ್‌ ಗುರುವಾರ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಜಿಲ್ಲಾ ಜೆಡಿಎಸ್‌ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಯಾವುದೇ ಅಭಿವೃದ್ಧಿ ಕೆಲಸ ಮಾಡದ ಕಾಂಗ್ರೆಸ್ ಸರ್ಕಾರ, ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರಿಗೆ ಹೊರೆ ಹೇರಿದೆ.ಚುನಾವಣೆ ವೇಳೆ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳು ಚುನಾವಣೆ ಗೆಲ್ಲುವ ಅಸ್ತ್ರ ಮಾಡಿಕೊಂಡಿತ್ತು. ಗ್ಯಾರಂಟಿ ಯೋಜನೆಗಳಿಗಾಗಿ ಎಸ್.ಸಿ, ಎಸ್.ಟಿ. ಸಮುದಾಯದ ಅಭಿವೃದ್ಧಿಗೆ ಬಳಸಬೇಕಾದ ಹಣ ಬಳಸಿಕೊಂಡು ಆ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದರು. ಪ್ರತಿ ತಿಂಗಳು ನೀಡಬೇಕಾದ ಗ್ಯಾರಂಟಿ ಯೋಜನೆ ಹಣವನ್ನು ಚುನಾವಣೆ ಸಂದರ್ಭದಲ್ಲಿ ಕೊಟ್ಟು ಕಾಂಗ್ರೆಸ್ ನಾಯಕರು ಜಾಣ ಮರೆವು ನಾಟಕ ಮಾಡಿಕೊಂಡು ಬರುತ್ತಿದ್ದಾರೆ. ಶಕ್ತಿ ಯೋಜನೆಯಲ್ಲಿ ಹೆಣ್ಣು ಮಕ್ಕಳಿಗೆ ಬಸ್ ಪ್ರಯಾಣ ಉಚಿತ ಎಂದು ಘೋಷಿಸಿ, ಮತ್ತೊಂದೆಡೆ ಬಸ್ ಪ್ರಯಾಣದರ ಹೆಚ್ಚು ಮಾಡಿ ಗಂಡಸರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕೆಲಸ, ಜನಪರ ಕಾರ್ಯಗಳನ್ನು ಮರೆತು ಅಧಿಕಾರ, ಭ್ರಷ್ಟಾಚಾರಕ್ಕೆ ಒತ್ತು ಕೊಟ್ಟಿದೆ.ರಾಜ್ಯದಲ್ಲಿ ಶಾಂತಿಸುವ್ಯವಸ್ಥೆ ಹಾಳಾಗಿದೆ. ಪೊಲೀಸರ ಮೇಲೆಯೇ ದಾಳಿ ಮಾಡುವ ಪ್ರಕರಣಗಳೂ ನಡೆಯುತ್ತಿವೆ. ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ.ಇಂತಹ ಕೆಟ್ಟ ಸರ್ಕಾರ ತೊಲಗಬೇಕು. ರಾಜ್ಯಪಾಲರು ಸರ್ಕಾರಕ್ಕೆಚಾಟಿ ಬೀಸಿ ಸರಿಯಾದ ದಿಕ್ಕಿನಲ್ಲಿ ನಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ ರಾಜ್ಯಾದ್ಯಂತ ಜೆಡಿಎಸ್ ಹೋರಾಟ ಮಾಡುತ್ತಿದೆ.ಚುನಾವಣೆ ಗೆಲ್ಲಲು ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌ನವರು ಇದರ ಹೊರತಾಗಿ ಯಾವುದೇ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ ಎಂದರು. ಕೊಟ್ಟ ಮಾತಿನಂತೆ ಪ್ರತಿ ತಿಂಗಳು ಗ್ಯಾರಂಟಿ ಯೋಜನೆಗಳ ಹಣವನ್ನು ಫಲಾನುಭವಿಗಳಿಗೆ ತಲುಪಿಸುತ್ತಿಲ್ಲ, ಸಂಪೂರ್ಣ ವಿಫಲವಾಗಿರುವ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಕಾಂಗ್ರೆಸ್‌ನವರು ಜನರ ಕಣ್ಣಿಗೆ ಮಂಕುಬೂದಿ ಎರೆಚುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ 17 ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಇದೂವರೆಗೂ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳು ಕಾಗದದಲ್ಲೇ ಉಳಿದಿವೆ ಹೊರತು ಅನುಷ್ಟಾನಕ್ಕೆ ಬಂದಿಲ್ಲ. ಇದು ಕಾಂಗ್ರೆಸ್ ಆಡಳಿತದ ವೈಖರಿ.ಸರ್ಕಾರದ ದುರಾಡಳಿತದ ವಿರುದ್ಧ ಜನ ಬೇಸತ್ತು ಶಾಪ ಹಾಕುತ್ತಿದ್ದಾರೆ.ಮುಂಬರುವ ಚುನಾವಣೆಗಳಲ್ಲಿ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.ಜಿಲ್ಲಾ ಜೆಡಿಎಸ್‌ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, ಪದಾರ್ಥಗಳ ಬೆಲೆ ಏರಿಕೆ, ಬಸ್ ಪ್ರಯಾಣದರ, ವಿದ್ಯುತ್‌ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನರು ಉತ್ತಮ ಆಡಳಿತವನ್ನು ನಿರೀಕ್ಷೆ ಮಾಡುವಂತಿಲ್ಲ, ಎಲ್ಲಾ ರಂಗಗಳಲ್ಲೂ ವಿಫಲವಾಗಿರುವ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿಗಳ ಆಡಳಿತ ಜಾರಿ ಮಾಡಬೇಕು ಎಂದು ಮನವಿ ಮಾಡಿದರು.ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್, ಜೆಡಿಎಸ್‌ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಸೋಲಾರ್‌ ಕೃಷ್ಣಮೂರ್ತಿ, ಮುಖಂಡರಾದ ತಿಮ್ಮಾರೆಡ್ಡಿ, ಹೆಚ್.ಡಿ.ಕೆ.ಮಂಜುನಾಥ್, ಧರಣೇಂದ್ರಕುಮಾರ್, ಯೋಗಾನಂದಕುಮಾರ್, ಟಿ.ಎಲ್.ಕುಂಭಯ್ಯ, ಮುದಿಮಡು ರಂಗಶಾಮಯ್ಯ, ಶ್ರೀನಿವಾಸಪ್ರಸಾದ್, ಟಿ.ಹೆಚ್.ಜಯರಾಮ್, ಗಂಗಣ್ಣ, ಪಾವಗಡ ಶ್ರೀರಾಮ್, ಗೋವಿಂದರಾಜು, ಗಣೇಶ್, ಕುಸುಮಾ ಜಗನ್ನಾಥ್, ತಾಹೇರಾಕುಲ್ಸಂ, ಲೀಲಾವತಿ, ಕೊರಟಗೆರೆ ಕಾಮರಾಜು, ದೊಡೇರಿ ಬಸವರಾಜು, ಉಪ್ಪಾರಹಳ್ಳಿ ಕುಮಾರ್, ಮಧುಗೌಡ, ನಾಗೇಶ್ ಸೇರಿದಂತೆ ವಿವಿಧ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.ಇದಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಜೆಡಿಎಸ್‌ನ ಹಿರಿಯ ಮುಖಂಡ ಎಂ.ಎನ್.ಚೆಲುವರಾಜು ಅವರಿಗೆ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಹಲವಾರು ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ್ದ ಚೆಲುವರಾಜು ಅವರ ನಿಧನ ದು:ಖ ತಂದಿದೆ, ಪಕ್ಷಕ್ಕೆಅಪಾರ ನಷ್ಟವಾಗಿದೆ. ಕಾರ್ಮಿಕಘಟಕ, ಪ್ರಚಾರ ಸಮಿತಿಯಲ್ಲಿ ಪ್ರಮುಖ ಸ್ಥಾನ ಹೊಂದಿ ಪಕ್ಷದ ಬೆಳವಣಿಗೆಗೆ ದುಡಿದಿದ್ದ ಚೆಲುವರಾಜು ಪಕ್ಷದ ನಿಷ್ಠಾವಂತ ಮುಖಂಡರಾಗಿದ್ದರು ಎಂದು ಹೇಳಿದರು.

Share this article