ಮಾಗಡಿ: ಬಡವರಿಗೆ ಅನುಕೂಲವಾಗುವ ಸರ್ಕಾರಿ ಆಸ್ಪತ್ರೆಯನ್ನು ಶಾಸಕ ಬಾಲಕೃಷ್ಣ ನಿರ್ಮಾಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ನಾವೆಂದೂ ಅಭಿವೃದ್ಧಿಗೆ ವಿರೋಧ ಮಾಡುವುದಿಲ್ಲ. ಆದರೆ, ಕೆಂಪೇಗೌಡರ ಪ್ರತಿಮೆಯನ್ನು ಸ್ಥಳಾಂತರ ಮಾಡದೆ ಅಭಿವೃದ್ಧಿ ಮಾಡಬೇಕು ಎಂದು ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್ ಒತ್ತಾಯಿಸಿದರು.
ಮತ್ತೊಮ್ಮೆ ಸಾರ್ವಜನಿಕರ ಸಭೆ ಕರೆಯಿರಿ:
ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಬಾಲಕೃಷ್ಣಗೆ ನಾನು ಕೆಂಪೇಗೌಡ ಪ್ರತಿಮೆಯನ್ನು ಏಕಾಏಕಿ ಬೇರೆಡೆ ಸ್ಥಳಾಂತರ ಮಾಡಬೇಡಿ ಎಚ್.ಎಂ.ಕೃಷ್ಣಮೂರ್ತಿ ಅವರೊಂದಿಗೆ ಚರ್ಚಿಸಿ ನಂತರ ಸಾಧಕ ಬಾಧಕಗಳ ಬಗ್ಗೆ ಮಾತನಾಡೋಣ. ಶಾಸಕ ಬಾಲಕೃಷ್ಣ ಏಕಾಏಕಿ ತೆರವು ಮಾಡಲು ಮುಂದಾಗಿದ್ದು, ಈಗಲೂ ಸಾರ್ವಜನಿಕರ ಸಭೆಯನ್ನು ಕರೆದು ಜನಗಳ ಅಭಿಪ್ರಾಯವನ್ನು ಸಂಗ್ರಹಿಸಿ ಅಭಿವೃದ್ಧಿ ಕಾರ್ಯ ಮಾಡಲಿ. ಯಾವುದೇ ಕಾರಣಕ್ಕೂ ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ನಮ್ಮ ವಿರೋಧವಿದೆ ಎಂದು ಮಂಜುನಾಥ್ ಹೇಳಿದರು.ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಬಾಲಕೃಷ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕೆಂಪೇಗೌಡರ ಪ್ರತಿಮೆ ಯಾರಿಗೂ ತೊಂದರೆ ಕೊಡುತ್ತಿಲ್ಲ. ಈ ಹಿಂದೆ ಕೂಡ ಎನ್ಇಎಸ್ ವೃತದಲ್ಲಿ ಗಾಂಧಿ ಪುತ್ಥಳಿಯನ್ನು ವಿರೋಧದ ನಡುವೆಯೂ ತೆರವು ಮಾಡಿದರು. ಈಗ ಕೆಂಪೇಗೌಡರ ಪ್ರತಿಮೆ ತೆರವು ಮಾಡಿ ನಂತರ ಅಭಿವೃದ್ಧಿ ಮಾಡದೆ ಹಾಗೆ ಬಿಡುತ್ತಾರೆ. ಯಾವುದೇ ಕಾರಣಕ್ಕೂ ಈ ಪ್ರತಿಮೆ ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ಗ್ರಾಪಂ ಸದಸ್ಯ ಮರೂರು ಸಾಗರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಮಾಡುವುದರಿಂದ ಅವರಿಗೆ ಗೌರವ ಬರುವುದಿಲ್ಲ. ಯಾವುದೇ ಕಾರಣಕ್ಕೂ ಕೆಂಪೇಗೌಡರ ಪ್ರತಿಮೆಯನ್ನು ಸ್ಥಳಾಂತರ ಮಾಡಬಾರದು. ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚಿನ ಜಾಗ ಇರುವುದರಿಂದ ಈ ಜಾಗವನ್ನು ಕೆಂಪೇಗೌಡರ ಪ್ರತಿಮೆಗೆ ಮೀಸಲಾಗಿ ಇಡುವ ಕೆಲಸ ಆಗಬೇಕು. ಇಲ್ಲವಾದರೆ ಜೆಡಿಎಸ್ ವತಿಯಿಂದ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಶಿವಕುಮಾರ್, ಕೆಂಪೇಗೌಡ, ಬಾಲಕೃಷ್ಣ, ಮಹೇಶ್, ಕೆ.ವಿ.ಬಾಲು, ಹೊಸಹಳ್ಳಿ ರಂಗಣಿ, ಬುಡನ್ ಸಾಬ್, ಸ್ವಾಮಿ, ಆನಂದ್, ರಾಮಣ್ಣ, ಜಯರಾಂ, ಪಂಚೆ ರಾಮಣ್ಣ, ಬೆಳಗುಂಬ ಕೋಟಪ್ಪ ಮತ್ತಿತರರು ಭಾಗವಹಿಸಿದ್ದರು.
(ಫೋಟೋ ಕ್ಯಾಪ್ಷನ್)ಮಾಗಡಿ ಪಟ್ಟಣದಲ್ಲಿ ಕೆಂಪೇಗೌಡರ ಪ್ರತಿಮೆ ಮುಂದೆ ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸೇರಿ ಕೆಂಪೇಗೌಡರ ಪ್ರತಿಮೆ ಸ್ಥಳಾಂತರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.